ಕನಕಪುರ: ಪಂಚಾಯ್ತಿಯಲ್ಲಿ ನಡೆಯುವ ಆನೇಕ ಕಾರ್ಯಕ್ರಮಗಳು ಮತ್ತು ನರೇಗಾ ಯೋಜನೆಗಳ ಬಗ್ಗೆ ಮಾಹಿತಿ ಕೊಡಬೇಕಾದ ಅಧಿಕಾರಿಗಳು ಪ್ರತಿಗ್ರಾಮ ಸಭೆಗೂ ಗೈರಾಗುತ್ತಿದ್ದಾರೆ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಗ್ರಾಪಂ ಸದಸ್ಯ ಕುಮಾರ್ ಇಒ ಶಿವರಾಮ್ ಅವರನ್ನು ಆಗ್ರಹಿಸಿದರು.
ತಾಲೂಕಿನ ಸಾತನೂರು ಹೋಬಳಿಯ ಅಚ್ಚಲು ಗ್ರಾಪಂನ 2019-20ನೇ ಸಾಲಿನ ಮೊದಲ ಸುತ್ತಿನ ಗ್ರಾಮ ಸಭೆಯಲ್ಲಿ ಮಾತನಾಡಿ, ನರೇಗಾ ಯೋಜನೆಯ ಬಗ್ಗೆ ಮಾಹಿತಿ ಕೊಡಬೇಕಾದ ಇಲಾಖೆಯ ಅಧಿಕಾರಿಗಳೇ ಬಂದಿಲ್ಲ. ಅಂಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಒತ್ತಾಯಿಸಿದರು.
ಯೋಜನೆಗಳು ಸಾರ್ವಜನಿಕರಿಗೆ ತಲುಪಬೇಕು: ತಾಪಂ ಇಒ ಟಿ.ಎಸ್.ಶಿವರಾಮ್ ಮಾತನಾಡಿ, ಕಳೆದ ಹತ್ತು ವರ್ಷಗಳ ಹಿಂದೆ ನಿಮ್ಮ ಗ್ರಾಮ ಹೇಗಿತ್ತು ಈಗ ಹೇಗಿದೆ ಎಂದು ವಿಮರ್ಶೆಮಾಡಿಕೊಳ್ಳಿ ವಿವಿಧ ಇಲಾಖೆಗಳಿಂದ ಸರ್ಕಾರದ ಮೂಲಕ ಬರುವ ಎಲ್ಲ ಅನುದಾನಗಳು ಎಲ್ಲ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪ ಬೇಕು ಎನ್ನುವುದು ನಮ್ಮ ಮೂಲ ಮುಖ್ಯ ಉದ್ದೇಶ ಎಂದರು.
ಇಂಗುಗುಂಡಿ ನಿರ್ಮಾಣದಿಂದ ಅಂತರ್ಜಲ ಹೆಚ್ಚಳ: ನಂಜುಂಡಪ್ಪ ವರದಿಯಲ್ಲಿ ಕಳೆದ ಕೆಲವು ವರ್ಷಗಳಿಂದ ಹಿಂದುಳಿದ ತಾಲೂಕು ಎಂದು ಹಣೆಪಟ್ಟಿ ಕಟ್ಟಿಕೊಂಡಿದ್ದ ಕನಕಪುರ ತಾಲೂಕು ಈಗ ಎಲ್ಲ ಇಲಾಖಾ ಅಧಿಕಾರಿಗಳ ಶ್ರಮದಿಂದ ಮಾದರಿ ತಾಲೂಕಾಗಿ ಬದಲಾಗಿದೆ. ಕಳೆದ ಎರಡು ಮೂರು ವರ್ಷಗಳಿಂದ ತಾಲೂಕಾದ್ಯಾಂತ ಮಳೆ ಕಡಿಮೆ ಯಾಗಿದೆ. ಇಂಗು ಗುಂಡಿಗಳ ನಿರ್ಮಾಣದಿಂದ ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ ಹಾಗಾಗಿ ನೀರಿನ ಅಭಾವ ತಲೆದೂರಿಲ್ಲ ಸರ್ಕಾರದ ಯೋಜನೆಗಳನ್ನು ಸರಿಯಾಗಿ ಬಳಸಿಕೊಂಡು ಸಮೃದ್ಧರಾಗಬೇಕು ಎಂದು ತಿಳಿಸಿದರು.
ಗ್ರಾಪಂ ಅಧ್ಯಕ್ಷೆ ಗೌರಮ್ಮ, ಸದಸ್ಯರಾದ ಕೆಂಚೇಗೌಡ, ನಂಜೇಶ್, ಲೋಕೇಶ್, ರತ್ನಮ್ಮ, ಇಒ ಶಿವರಾಮ್, ತೋಟಗಾರಿಕೆ ಇಲಾಖೆ ಪ್ರಸನ್ನ, ರೇಷ್ಮೆ ಇಲಾಖೆ ರವಿಗೌಡ, ಸಾಮಾಜಿಕ ಅರಣ್ಯ ಅಧಿಕಾರಿ ಗುರುಬಸವೇಗೌಡ, ಬೆಸ್ಕಾಂ ಜೆಇ ಬಾಬು ಪ್ರಾಸಾದ್, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಗ್ರಾಮಸ್ಥರು ಇದ್ದರು.
ಗೈರಾದವರ ವಿರುದ್ಧ ಕ್ರಮ:
ತಾಪಂ ಅಧ್ಯಕ್ಷ ಧನಂಜಯ್ ಮಾತನಾಡಿ, ಕೆಲವು ಅಧಿಕಾರಿಗಳು ಸಭೆಗೆ ಗೈರಾಗಿದ್ದಾರೆ ಸಕಾರಣ ಕೊಡದೇ ಇರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ಕೊಟ್ಟರು. ಕೆಲವು ರೈತರಿಗೆ ಮಾಹಿತಿ ಕೊರತೆಯಿಂದ ಆರ್ಥಿಕವಾಗಿ ಹಿಂದುಳಿದ್ದಿದ್ದಾರೆ. ಇನ್ನೂ ಕೆಲವು ರೈತರು ಯೋಜನೆಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಆರ್ಥಿಕವಾಗಿ ಸಬಲರಾಗಿದ್ದಾರೆ. ಕಡಿಮೆ ನೀರಾವರಿ ಇದ್ದರೂ ಕೂಡ ಹನಿ ನೀರಾವರಿ ಪದ್ಧತಿಯನ್ನು ಬಳಸಿಕೊಂಡು ನೀರಿನ ಮಿತ ಬಳಕೆಯಿಂದಲೇ ಉತ್ತಮವಾದ ಬೆಳೆಗಳನ್ನು ಬೆಳೆಯಬಹುದು ಎಂದರು.
ಅಧಿಕಾರಿಗಳಿಗೂ ಸೂಚನೆ:
ತಾಂತ್ರಿಕ ಬೆಳೆಗಳನ್ನು ಬೆಳೆಯುವುದರಿಂದ ನೀರಿನ ಅಭಾವ ಇರುವುದಿಲ್ಲ ಜೊತೆಗೆ ಕೃಷಿ ಉತ್ಪನ್ನಗಳ ಗುಣಮಟ್ಟ ಹೆಚ್ಚಾಗಿ ಅಧಿಕ ಲಾಭ ಪಡೆಯಬಹುದು. ಕೃಷಿ ಮತ್ತು ತೋಟಗಾರಿಕೆ ಇಲಾಖಾ ಅಧಿಕಾರಿಗಳು ರೈತರಿಗೆ ಬೇಕಾದ ಕ್ರಿಮಿ ನಾಶಕಗಳು ಯಂತ್ರೋಪಕರಣಗಳು ಬಿತ್ತನೆ ಬೀಜಗಳನ್ನು ಸರಿಯಾದ ಸಮಯಕ್ಕೆ ಸಿಗುವ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ತಾಕೀತು ಮಾಡಿದರು.