ಸುನಾದ ಸಂಗೀತ ಕಲಾ ಶಾಲೆ ಸುಬ್ರಹ್ಮಣ್ಯ ಇದರ ಆಶ್ರಯದಲ್ಲಿ ಶ್ರೀ ವನದುರ್ಗಾ ದೇವಿ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಿದ ಸುನಾದ ಸಂಗೀತೋತ್ಸವದಲ್ಲಿ ವಿ| ವಿಷ್ಣುದೇವ ನಂಬೂದಿರಿ ಚೆನ್ನೆ ಇವರು ನಡೆಸಿಕೊಟ್ಟ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ಸಂಗೀತ ರಸಿಕರನ್ನು ಗಾನಲೋಕದಲ್ಲಿ ತೇಲಿಸಿತು.
ಆಭೋಗಿ ರಾಗದ (ಎವ್ವರಿ ಭೋದನ )ವರ್ಣದ ಸುಶ್ರಾವ್ಯ ಪ್ರಸ್ತುತಿಯೊಂದಿಗೆ ಕಛೇರಿ ಸಾಂಪ್ರದಾಯಿಕವಾಗಿ ಆರಂಭಗೊಂಡಿತು. ನಂತರ ಗೌಳರಾಗದಲ್ಲಿ ಶ್ರೀ ಮಹಾಗಣಪತಿ ರವತುಮಾಮ್ ಮುತ್ತುಸ್ವಾಮಿ ದೀಕ್ಷಿತರ ರಚನೆಯನ್ನು ಹಾಡಿ ಗಣೇಶನನ್ನು ಸ್ತುತಿಸಿ, ಮುಂದೆ ಶುದ್ಧ ಧನ್ಯಾಸಿ ರಾಗದಲ್ಲಿ ಪ್ರಧಾನವಾಗಿ ಸುಬ್ರಹ್ಮಣ್ಯೇನ ಕೃತಿಯನ್ನು ಮನೋಜ್ಞವಾಗಿ ಆಲಾಪನೆ, ನೆರವಲ್ ಹಾಗೂ ವೈಶಿಷ್ಟéಪೂರ್ಣ ಸ್ವರ ಪ್ರಸ್ತಾರಗಳಿಂದ ಅಲಂಕರಿಸಿದುದು ರಂಜಿಸಿತು.ಮಧುರವಾದ ವಯೊಲಿನ್ ವಾದನ ಹಿತವಾದ ಭಾವ ನೀಡಿತು. ಮೃದಂಗ ವಾದನವೂ ಪೂರಕವಾಗಿತ್ತು. ನಂತರ ನರಸಿಂಹ ಮಾಮವ… ಆರಭಿ ರಾಗದ ಕೃತಿಯನ್ನು ಭಕ್ತಿಪ್ರಧಾನವಾಗಿ ಪ್ರಸ್ತುತಪಡಿಸಿದರು. ಇದಾದ ಮೇಲೆ ಪುರಂದರ ದಾಸರ ರಚನೆ ನಿನ್ನ ನೋಡಿ ಧನ್ಯನಾದೆನೋ… ದೇವರ ನಾಮವನ್ನು ತೋಡಿ ರಾಗದಲ್ಲಿ ಹಾಡಿದ್ದು ಆಕರ್ಷಣೀಯವಾಗಿ ಮೂಡಿ ಬಂತು. ನಂತರ ತ್ಯಾಗರಾಜರ ಕೃತಿ ಮನಮ್ಯಾಲಕಿಂಚರ ನಳಿನಕಾಂತಿ ರಾಗದಲ್ಲಿ ಮೋಹಕವಾದ ಆಲಾಪನೆಯೊಂದಿಗೆ ಮೂಡಿ ಬಂತು.
ವಾಗಧೇಶ್ವರಿ ರಾಗದ ಪರಮಾತುಡು ಕೃತಿಯನ್ನು ಪ್ರಧಾನ ರಾಗವಾಗಿ ಆಯ್ದುಕೊಂಡು ಸುದೀರ್ಘ ಆಲಾಪನೆ, ನೆರವಲ್,ಸ್ವರ ಪ್ರಸ್ತಾರಗಳಿಂದ ಸವಿಸ್ತಾರವಾಗಿ ಪ್ರಸ್ತುತ ಪಡಿಸಿದ್ದು ವಿ| ವಿಷ್ಣುದೇವರವರ ಪ್ರಬುದ್ಧ ಗಾಯನ ಮತ್ತು ಪಕ್ವತೆಯನ್ನು ಪರಿಚಯಿಸಿತು. ಗಾಯನದ ಭಾವವನ್ನು ಧ್ವನಿಸಿದ ತನಿ ಆವರ್ತನ ವಿ| ಕಾಂಚನ ಈಶ್ವರ ಭಟ್ ಅವರ ವಿದ್ವತ್ ಚಾತುರ್ಯದಿಂದ ಲಯಬದ್ಧ ಗತಿಯಲ್ಲಿ ಮೂಡಿಬಂದು ಪರಿಣಾಮಕಾರಿಯಾದ ಛಾಪನ್ನುಂಟುಮಾಡಿ ಮೈನವಿರೇಳಿಸಿತು. ವಿ| ಮತ್ತೂರು ಶ್ರೀನಿಧಿಯವರ ವಯೊಲಿನ್ ವಾದನವೂ ಮೆಚ್ಚುಗೆ ಪಡೆಯಿತು.
ನಂತರ ದುರ್ಗಾರಾಗದ ಮಂದಮತಿಯು ನಾನು ದೇವರನಾಮವನ್ನು ಶರಣಾಗತಿಯ ಭಾವದಲ್ಲಿ ಹಾಡಿದ್ದು ಸೂಕ್ಷ್ಮ ಸಂವೇದನೆಗಳನ್ನು ನೀಡಿತು.ಅನಂತರ ನೀಲಾಂಬರಿ ರಾಗದಲ್ಲಿ ಕಾಂತ ನೋಡು ಚೆನ್ನು ಮೆಲ್ಲೆ ಸ್ವಾತಿ ತಿರುನಾಳ್ ರಚನೆಯನ್ನು ಭಕ್ತಿಭಾವರಸ ತುಂಬಿ ನಿರೂಪಿಸಿದರು.
ಕೊನೆಯದಾಗಿ ಪುರಂದರದಾಸರ ರಚನೆಯ ದೇವರನಾಮವನ್ನು ಗೋವಿಂದ ನಿನ್ನ ನಾಮವೇ ಚಂದ ಜನ ಸಮ್ಮೊàದಿನಿ ರಾಗದಲ್ಲಿ ಮನೋಹರವಾಗಿ ಹಾಡಿದರು. ಪವಮಾನದೊಂದಿಗೆ ಈ ಭಕ್ತಿರಸ ಭರಿತ ಭಾವಪೂರ್ಣ ಸಂಗೀತ ಕಛೇರಿ ಸಂಪನ್ನಗೊಂಡಿತು.
ಕಲಾವಿದರು ಎಲ್ಲಾ ಪ್ರಸ್ತುತಿಯಲ್ಲೂ ತಾರಸ್ಥಾಯಿಯಲ್ಲೂ ಮಂದ್ರಸ್ಥಾಯಿಯಲ್ಲೂ ಸ್ವರವನ್ನು ಕಾಯ್ದುಕೊಂಡು ಸುಲಲಿತವಾಗಿ ಲವಲವಿಕೆಯಿಂದ ನಿರರ್ಗಳವಾಗಿ ಹಾಡಿದ್ದು ಶ್ರೋತೃಗಳಲ್ಲಿ ನೆನಪುಳಿಯುವ ಭಾವ- ಸಂಗೀತದಲೆಗಳನ್ನು ಸೃಷ್ಟಿಸಿತು.
ಮಮತಾ ದೇವ