ರಾಣಿಬೆನ್ನೂರ: ಮಾಕನೂರಲ್ಲಿ ಕೋವಿಡ್ ಲಾಕ್‌ಡೌನ್‌ನಿಂದ ಅತಂತ್ರ ಪರಿಸ್ಥಿತಿಗೆ ಸಿಲುಕಿರುವ ಕೃಷಿ ಕೂಲಿಕಾರರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಮೂಲಕ ನೆರವು ನೀಡಬೇಕು ಎಂದು ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ಮತ್ತು ಕೃಷಿ ಕೂಲಿಕಾರರು ಶನಿವಾರ ಪ್ರತಿಭಟನೆ ನಡೆಸಿ ಗ್ರಾಪಂ ಕಾರ್ಯದರ್ಶಿ ಚಂದ್ರಪ್ಪ ಬೇವಿನಮರದಗೆ ಮನವಿ ಸಲ್ಲಿಸಿದರು. ಗ್ರಾಪಂ ಸದಸ್ಯ ನಾಗಪ್ಪ ಬಾರ್ಕಿ ಮಾತನಾಡಿ, ರೈತರು ದೇಶದ ಬೆನ್ನೆಲುಬು ನಿಜ ಆದರೆ, ಅಂತಹ ರೈತನ ಹೆಗಲಿಗೆ ಹೆಗಲು ಕೊಟ್ಟು ಅವರ ಬೆನ್ನಿಗೆ ನಿಂತು ಜಮೀನುಗಳಲ್ಲಿ ದಿನಗೂಲಿಗಾಗಿ ಹಗಲಿರುಳು ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ಕೃಷಿ ಕೂಲಿಕಾರರ ಬದುಕು ಅಕ್ಷರಶಃ ಬೀದಿಗೆ ಬಂದಂತಾಗಿದೆ ಎಂದರು. ದಿನಕ್ಕೆ 100 ರಿಂದ 200 ದಿನಗೂಲಿ ಪಡೆಯುವ ಕೃಷಿ ಕೂಲಿಕಾರರ ದೊಡ್ಡ ಸಮೂಹವಿದೆ. ಇವರ ಕಷ್ಟವನ್ನು ಪರಿಗಣಿಸದೆ ಕಡೆಗಣಿಸಲಾಗಿದೆ ಎಂದು ದೂರಿದರು.
ನರೇಂದ್ರ ನಾಯಕ ಮಾತನಾಡಿ, ರೈತರನ್ನೆ ನಂಬಿಕೊಂಡಿರುವ ನಮಗೆ ಬ್ಯಾಂಕ್‌ನಿಂದ ಸಾಲ ಸಿಗುವುದಿಲ್ಲ. ಸಂಘ ಇಲ್ಲವೆ ಕೈಗಡ ಸಾಲ ಪಡೆದು ತೀರಿಸಲಾಗದ ಅಸಹಾಯಕ ಸ್ಥಿತಿಗೆ ಬಂದಿರುವ ಕೃಷಿ ಜಮೀನಿನಲ್ಲಿ ದುಡಿಯುವ ಕೂಲಿಕಾರರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಒತ್ತಾಯಿಸಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಈರಣ್ಣ ಹಲಗೇರಿ, ಕಾವ್ಯ ಊದಗಟ್ಟಿ, ಸಿಂಚನ ಚಿನ್ನಣ್ಣನವರ, ಮಮತಾ, ಗಂಗಮ್ಮ
ಬೆಳವಿಗಿ, ಬಸಮ್ಮ ಪೂಜಾರ, ರೇಣುಕಾ ತಾವರಗೊಂದಿ, ಮಾಲತೇಶ ಬುರಡಿಕಟ್ಟಿ ಇತರರಿದ್ದರು.