ಕೋಲಾರ: ಮೇ ತಿಂಗಳಲ್ಲಿ ಆಲಿಕಲ್ಲು ಮಳೆ ಹಾಗೂ ಬಿರುಗಾಳಿಯಿಂದ ಬೆಳೆನಷ್ಟ ಹೊಂದಿದ ಜಿಲ್ಲೆಯ ರೈತರಿಗೆ ಕೂಡಲೇ ಪರಿಹಾರ ವಿತರಿಸುವ ವ್ಯವಸ್ಥೆ ಮಾಡುವಂತೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಜಿಪಂ ಅಧ್ಯಕ್ಷೆ ಗೀತಮ್ಮ ಆನಂದರೆಡ್ಡಿ ತಿಳಿಸಿದರು.
ಜಿಪಂ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ಸಿಗುವಂತೆ ಮಾಡಬೇಕು. ಸೌಲಭ್ಯಗಳನ್ನು ಒದಗಿಸುವಲ್ಲಿ ಯಾವುದೇ ರಾಜಕೀಯ ಮಾಡಬಾರದು. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಕರ್ತವ್ಯದ ವೇಳೆಯಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿಜಯ್‌ಕುಮಾರ್ ಅವರಿಗೆ ತಿಳಿಸಿದರು.
ಜಿಪಂ ಸಿಇಒ ಜಿ.ಜಗದೀಶ್ ಮಾತನಾಡಿ, ಕಳೆದ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಗೆ 8 ಸ್ಥಾನ ಬಂದಿದ್ದು, ಈ ಬಾರಿ 5ನೇ ಸ್ಥಾನದೊಳಗೆ ಬರುವಂತೆ ನೋಡಿಕೊಳ್ಳಬೇಕು. ಪ್ರತಿ ತಿಂಗಳು ಪರೀಕ್ಷೆ ನಡೆಸಿ ಮೌಲ್ಯಮಾಪನ ವರದಿಯನ್ನು ವಸ್ತುನಿಷ್ಠವಾಗಿ ನೀಡಿ, ಇದರಿಂದ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ಒತ್ತು ನೀಡಿ ಫಲಿತಾಂಶವನ್ನು ಹೆಚ್ಚಿಸಬಹುದಾಗಿದೆ. ಇದೇ ಯೋಜನೆಯನ್ನು ಅನುಸರಿಸಿದ ಬೆಂಗಳೂರು ಗ್ರಾಮಾಂತರ ಜಿಲ್ಲೆ 3ನೇ ಸ್ಥಾನಕ್ಕೆ ಬಂದಿದೆ. ನಮ್ಮ ಜಿಲ್ಲೆಯಲ್ಲಿ ಪ್ರಯತ್ನ ಪಟ್ಟರೆ ಮೊದಲ ಸ್ಥಾನಕ್ಕೆ ಬರಬಹುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ರತ್ನಯ್ಯಗೆ ಸೂಚಿಸಿದರು.
ನೋಂದಣಿ ಮಾಡಿಸಿ: ಪ್ರಧಾನಮಂತ್ರಿ ಕೃಷಿ ಸಮ್ಮಾನ್ ಯೋಜನೆಯಡಿ ಕೇಂದ್ರ ಸರ್ಕಾರದಿಂದ ರೈತರಿಗೆ ವಾರ್ಷಿಕವಾಗಿ 6 ಸಾವಿರ ರೂ. ಅನ್ನು 3 ಕಂತುಗಳಲ್ಲಿ ನೀಡಲಾಗುತ್ತಿದೆ. ಈ ಯೋಜನೆಗೆ ನಮ್ಮ ಜಿಲ್ಲೆಯಿಂದ 3 ಲಕ್ಷದ 3 ಸಾವಿರ ರೈತರನ್ನು ನೋಂದಾಯಿಸಬೇಕಿದೆ. ಜೂ.25 ರೊಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಬೇಕು. ಜೂ.25 ರೊಳಗೆ ನೋಂದಣಿಯಾದ ರೈತರಿಗೆ ಮೊದಲ ಕಂತಿನ 2 ಸಾವಿರ ರೂ. ಬಿಡುಗಡೆಯಾಗುತ್ತದೆ. ನೋಂದಣಿ ಅರ್ಜಿಗಳು ರೈತ ಸಂಪರ್ಕ ಕೇಂದ್ರಗಳು, ಗ್ರಾಪಂ ಹಾಗೂ ಕೃಷಿ ಇಲಾಖೆಯ ಕಚೇರಿಗಳಲ್ಲಿ ದೊರೆಯುತ್ತವೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಹೊರಗಡೆ ಚೀಟಿ ಬರೆಯಬೇಡಿ: ಕೋಲಾರ ಜಿಲ್ಲೆಯಲ್ಲಿ ಕಳೆದ ವರ್ಷ ನಕಲಿ ಕ್ಲಿನಿಕ್‌ಗಳನ್ನು ಬಂದ್ ಮಾಡಿಸಿದ್ದು, ಇನ್ನೂ ಕೆಲವರು ಆಂಧ್ರದ ಗಡಿ ಭಾಗಗಳಲ್ಲಿ ತೆರೆದಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಂಡು ಕ್ಲಿನಿಕ್ ಬಂದ್ ಮಾಡಿಸಲು ಆಂಧ್ರ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಮುಖ್ಯ ಕಾರ್ಯದರ್ಶಿಗಳು ತಿಳಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಯ ವೈದ್ಯರು ಔಷಧಿಗಳನ್ನು ಹೊರಗಡೆಯಿಂದ ಖರೀದಿಸುವಂತೆ ಚೀಟಿಗಳನ್ನು ಬರೆದುಕೊಡುವಂತಿಲ್ಲ ಎಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯಲ್ಲಿ ಅಕ್ಷರ ಬರದವರಿಗೆ ವಾರ್ಡನ್ ಜವಾಬ್ದಾರಿ ನೀಡಿದ್ದು, ಅವರ ಬದಲಿಗೆ ಹೊಸದಾಗಿ ನೇಮಕವಾಗಿರುವ ಅಡುಗೆಯವರು ಪಿಯುಸಿ, ಪದವಿ ಶಿಕ್ಷಣ ಪಡೆದಿದ್ದು, ಅಂತಹವರಿಗೆ ಜವಾಬ್ದಾರಿ ನೀಡುವಂತೆ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಸಿಂಧುಗೆ ತಿಳಿಸಿದರು.
ಕೆಪಿಎಸ್ ದಾಖಲಾತಿ ಹೆಚ್ಚಿಸಿ: ಜಿಲ್ಲೆಯಲ್ಲಿ 24 ಪಬ್ಲಿಕ್ ಶಾಲೆಗಳು ಪ್ರಾರಂಭವಾಗಿದ್ದು, ಇಲ್ಲಿ ಈ ಹಿಂದೆ ಇದ್ದ 30 ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣವನ್ನು 60ಕ್ಕೆ ಹೆಚ್ಚಿಸಲಾಗಿದೆ. 60ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದರೆ ಅವರಿಗೂ ದಾಖಲಾತಿ ನೀಡಿ ಅವರಿಗೆ ಶಿಕ್ಷಣ ನೀಡಲು ತಗಲುವ ವೆಚ್ಚವನ್ನು ಸಿಎಸ್‌ಆರ್ ಅನುದಾನ ಅಥವಾ ಜಿಪಂ ಅನುದಾನದಲ್ಲಿ ಭರಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.