ಬೆಂಗಳೂರು: ಬೇತಾಳನಂತೆ ಮರ, ಕಂಬಗಳು ಎಲ್ಲೆಂದರಲ್ಲಿ ನೇತಾಡುತ್ತಿವೆ, ರಂಗೋಲಿಯಂತೆ ಪಾದಚಾರಿ ಮಾರ್ಗಗಳಲ್ಲಿ ಹರಡಿಕೊಂಡಿವೆ, ಯಾಮಾರಿದರೆ ನಿಮ್ಮನ್ನು ನೆಲಕ್ಕುರುಳಿಸಿ ಪ್ರಾಣಕ್ಕೆ ಸಂಚಕಾರ ತರುವ ಒಎಫ್ಸಿ ವೈರುಗಳಿವು.
ಅನಧಿಕೃತ ಒಎಫ್ಸಿ, ಟಿ.ವಿ.ಕೇಬಲ್ಗಳು ಪಾದಚಾರಿ ಮಾರ್ಗಗಳು, ಮರಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳನ್ನು ಆವರಿಸಿಕೊಂಡಿದ್ದು, ಪಾದಚಾರಿಗಳು ಹಾಗೂ ವಾಹನ ಸವಾರರಿಗೆ ಕಂಟಕವಾಗಿ ಪರಿಗಣಿಸಿವೆ. ಪಾಲಿಕೆಯಿಂದ ಕೆಲ ಕೇಬಲ್ಗಳಿಗೆ ಮರಗಳ ಮೂಲಕ ತೆಗೆದುಕೊಂಡು ಹೋಗಲು ಅವಕಾಶ ನೀಡುವುದನ್ನೇ ದುರ್ಬಳಕೆ ಮಾಡಿಕೊಂಡಿರುವ ಏಜೆನ್ಸಿಗಳು, ಬೇಕಾಬಿಟ್ಟಿ ಅಳವಡಿಸುತ್ತಿರುವ ಕೇಬಲ್ಗಳು ರಸ್ತೆಯಲ್ಲಿ ಇಳಿಬಿದ್ದು, ಅಪಘಾತಗಳಿಗೂ ಕಾರಣವಾಗುತ್ತಿವೆ.
ಇತ್ತೀಚೆಗೆ ಅನಧಿಕೃತ ನಗರದಲ್ಲಿ ಅಳವಡಿಸಿದ ಅನಧಿಕೃತ ಒಎಫ್ಸಿ ಕೇಬಲ್ಗಳ ವಿರುದ್ಧ ಸಮರ ಸಾರಿದ ಪಾಲಿಕೆಯ ಅಧಿಕಾರಿಗಳು ವಿವಿಧೆಡೆಗಳಲ್ಲಿ ನೂರಾರು ಮೀಟರ್ ಒಎಫ್ಸಿ ಕೇಬಲ್ಗಳನ್ನು ತೆರವುಗೊಳಿಸಿದ್ದಾರೆ. ಆದರೆ, ತುಂಡರಿಸಿರುವ ಕೇಬಲ್ಗಳನ್ನು ವಿಲೇವಾರಿ ಮಾಡದೆ ಪಾದಚಾರಿ ಮಾರ್ಗದಲ್ಲಿ ರಾಶಿ ಹಾಕಿರುವುದರಿಂದ ಜನರು ತೊಂದರೆ ಅನುಭವಿಸುವಂತಾಗಿದೆ.
Advertisement
ನಗರದ ಪ್ರತಿಷ್ಠಿತ ಮಹಾತ್ಮ ಗಾಂಧಿ (ಎಂ.ಜಿ. ರಸ್ತೆ)ಯ ಸುತ್ತಮುತ್ತಲಿನ ಭಾಗಗಳ ಪಾದಚಾರಿ ಮಾರ್ಗಗಳು, ಮರಗಳು, ಟೆಲಿಕಾಂ, ವಿದ್ಯುತ್ ಕಂಬಗಳಲ್ಲಿ ಆಪ್ಟಿಕಲ್ ಫೈಬರ್ ಕೇಬಲ್ (ಒಎಫ್ಸಿ) ಗಳು ಹರಡಿಕೊಂಡಿರುವ ಪರಿಯಿದು.
ಪಾದಚಾರಿಗಳಿಗೆ ಸಿಗರೇಟ್ ಹೊಗೆ ಕಾಟ!
ಎಂ.ಜಿ.ರಸ್ತೆಯ ಮೆಟ್ರೋ ನಿಲ್ದಾಣ ಬಳಿ, ಡಿಕನ್‌ಸನ್ ರಸ್ತೆ, ಕಿನ್ಸಿಂಗ್‌ಟನ್ ರಸ್ತೆ ಭಾಗಗಳಲ್ಲಿ ಪಾದಚಾರಿಗಳಿಗೆ ಸಿಗರೇಟ್ ಹೊಗೆ ಕಾಟ ಎದುರಾಗಿದೆ. ಸಾರ್ವಜನಿಕರ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿದರೂ, ರಾಜಾರೋಷವಾಗಿ ಸಿಗರೇಟ್ ಸೇದುತ್ತಿರುವುದು ಸಾರ್ವಜನಿಕರಿಗೆ ಸಮಸ್ಯೆ ಎದುರಿಸುವಂತಾಗಿದೆ.