ಬೆಂಗಳೂರು: ನಗರದಲ್ಲಿ ಇತ್ತೀಚೆಗೆ ಸಾವಿಗೀಡಾಗಿದ್ದ ಮೂರು ಮಂದಿ ಸೇರಿ 42 ಮಂದಿಗೆ ಸೋಂಕು ತಗುಲಿರುವುದು ಭಾನುವಾರ ದೃಢಪಟ್ಟಿದೆ. ಈ ಮೂಲಕ ನಗರದ ಒಟ್ಟಾರೆ ಸೋಂಕು ಪ್ರಕರಣಗಳ ಸಂಖ್ಯೆ 690ಕ್ಕೆ ಏರಿಕೆಯಾದರೆ, ಸೋಂಕಿಗೆ ಬಲಿಯಾದವರ ಸಂಖ್ಯೆ 32ಕ್ಕೆ ಹೆಚ್ಚಳವಾಗಿದೆ. ಸದ್ಯ ನಗರದಲ್ಲಿ 330 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಪೈಕಿ ಆರು ಮಂದಿ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ತುರ್ತು ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆನೀಡಲಾಗುತ್ತಿದೆ. ಬಾಕಿ ಸೋಂಕಿತರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಭಾನುವಾರ ದೃಢಪಟ್ಟ 42 ಸೋಂಕಿತರಲ್ಲಿ ಮೂವರು ಮಹಾರಾಷ್ಟ್ರ, ಒಬ್ಬರು ತಮಿಳು ನಾಡು, ಇಬ್ಬರು ಅಂತರ ಜಿಲ್ಲೆ ಪ್ರಯಾಣ ಹಿನ್ನೆಲೆ ಹೊಂದಿದ್ದಾರೆ. ಎಂಟು ಮಂದಿ ವಿಷಮಶೀತ ಜ್ವರ ಲಕ್ಷಣ, ಇಬ್ಬರಿಗೆ ತೀವ್ರ ಉಸಿರಾಟ ಸಮಸ್ಯೆ ಹಿನ್ನೆಲೆ ಸೋಂಕು ದೃಢಪಟ್ಟಿದೆ.
10 ಮಂದಿಗೆ ಸೋಂಕಿತರ ಸಂಪರ್ಕದಿಂದ ಸೋಂಕು ತಗುಲಿದೆ. ಬಾಕಿ 16 ಮಂದಿಯ ಸೋಂಕು ಹಿನ್ನೆಲೆ ಪತ್ತೆಯಾಗಿಲ್ಲ. ಮೃತಪಟ್ಟ ಐದು ಮಂದಿ ಸೋಂಕಿತರನ್ನು ಹೊರತುಪಡಿಸಿ ಬಾಕಿ ಎಲ್ಲಾ ಸೋಂಕಿತರನ್ನು ನಗರದ ಕೋವಿಡ್ 19 ಚಿಕಿತ್ಸಾ ಕೇಂದ್ರಕ್ಕೆ ದಾಖಲಿ ಸಿದ್ದು, ಅವರ ಪ್ರಾಥಮಿಕ ಸಂಪರ್ಕ ಹೊಂದಿದ್ದವರ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
28 ಮಂದಿ ಗುಣಮುಖ: ಭಾನುವಾರ ನಗರದ ಕೋವಿಡ್ 19 ಚಿಕಿತ್ಸಾ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತರ ಪೈಕಿ 28 ಮಂದಿ ಗುಣಮುಖರಾಗಿದ್ದಾರೆ. ಒಟ್ಟಾರೆ ಗುಣಮುಖರಾ ದವರ ಸಂಖ್ಯೆ 327ಕ್ಕೆ ಏರಿಕೆಯಾಗಿದೆ. ಆಸ್ಪತ್ರೆಯಿಂದ ಬಿಡುಗಡೆಯಾದ 28 ಮಂದಿಗೂ ಕಡ್ಡಾಯ ಎರಡು ವಾರ ಹೋಂ ಕ್ವಾರೆಂಟೈನ್‌ಗೆ ಸೂಚಿಸಲಾಗಿದೆ.
ಕಂಟೈನ್‌ಮೆಂಟ್ ಝೋನ್ ಏರಿಕೆ: ಸೋಂಕು ಹೆಚ್ಚಳ ಹಿನ್ನೆಲೆ ನಗರದ ಕಂಟೈನ್‌ಮೆಂಟ್ ಪ್ರದೇಶಗಳ ಸಂಖ್ಯೆ 146ಕ್ಕೆ ಏರಿಕೆಯಾಗಿದೆ. ಭಾನುವಾರ ಹೊಸದಾಗಿ 26 ವಾರ್ಡ್‌ಗಳನ್ನು ಕಂಟೈನ್‌ಮೆಂಟ್ ವ್ಯಾಪ್ತಿಗೆ ತರಲಾಗಿದೆ.