Advertisement

2.11 ಲಕ್ಷ ರೈತರ ಪೈಕಿ 16,127 ಮಂದಿಗೆ ಪರಿಹಾರ

09:34 PM Apr 24, 2019 | Lakshmi GovindaRaju |

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ರೈತಾಪಿ ಜನ ಮತ್ತೆ ಮುಂಗಾರಿನ ಹೊಸ್ತಿಲಲ್ಲಿದ್ದರೂ ಕಳೆದ ವರ್ಷ ಬೆಳೆ ನಷ್ಟಕ್ಕೀಡಾದ ಅನ್ನದಾತನಿಗೆ ಮಾತ್ರ ಬೆಳೆ ನಷ್ಟ ಪರಿಹಾರ ಇದುವರೆಗೂ ವಿತರಿಸದಿರುವುದು ಎದ್ದು ಕಾಣುತ್ತಿದ್ದು, ಜಿಲ್ಲೆಯಲ್ಲಿ ಬರೋಬ್ಬರಿ 2.11 ಲಕ್ಷ ರೈತರ ಪೈಕಿ ಇದುವರೆಗೂ ಸರ್ಕಾರ ಬರೀ 16 ಸಾವಿರ ಮಂದಿ ರೈತರಿಗೆ ಮಾತ್ರ ಬೆಳೆ ನಷ್ಟ ಪರಿಹಾರ ವಿತರಿಸಿ ಕೈ ತೊಳೆದುಕೊಂಡಿದೆ. ಹೀಗಾಗಿ ಇನ್ನೂ ಜಿಲ್ಲೆಯ ಎರಡು ಲಕ್ಷ ರೈತರು ಬೆಳೆ ನಷ್ಟ ಪರಿಹಾರಕ್ಕೆ ಕಾಯುತ್ತಾ ಕುಳಿತಿದ್ದಾರೆ.

Advertisement

ಆರ್ಥಿಕ ಸಂಕಷ್ಟಕ್ಕೆ ಗುರಿ: ಕಳೆದ ವರ್ಷ ಮಳೆಯಾಗದೇ ಜಿಲ್ಲೆಯಾದ್ಯಂತ ಸಾವಿರಾರು ಹೆಕ್ಟೇರ್‌ ಪ್ರದೇಶದಲ್ಲಿ ಕೋಟ್ಯಂತ ರೂ. ಮೌಲ್ಯದ ರಾಗಿ, ನೆಲಗಡಲೆ, ಮುಸುಕಿನ ಜೋಳ, ಅವರೆ, ತೊಗರಿ ಸೇರಿದಂತೆ ರೈತರು ಬೆವರು ಸುರಿಸಿ ಬಿತ್ತನೆ ಮಾಡಿದ್ದ ಹಲವಾರು ಬೆಳೆಗಳು ತೀವ್ರ ಮಳೆ ಕೊರತೆಗೆ ಮೊಳಕೆ ಒಡೆಯದೇ ನಷ್ಟಕ್ಕೆ ಒಳಗಾಗಿ ರೈತರು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದರು. ಆದರೆ ಬೆಳೆ ನಷ್ಟ ಪರಿಹಾರ ಈ ಬಾರಿ ಮುಂಗಾರಿಗೂ ಮೊದಲೇ ರೈತರ ಕೈ ಸೇರುವುದು ಅನುಮಾನವಾಗಿದೆ.

ಜಿಲ್ಲೆಯಲ್ಲಿ ಬೆಳೆ ನಷ್ಟಕ್ಕೀಡಾದ ರೈತರನ್ನು ಕಂದಾಯ ಇಲಾಖೆ ಮೂಲಕ ಎರಡು ಹಂತದಲ್ಲಿ ಗುರುತಿಸಿತ್ತು. ಆ ಪೈಕಿ ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿ ಮೊದಲ ಹಂತದಲ್ಲಿ 25,313, ಎರಡನೇ ಹಂತದಲ್ಲಿ 6,731 ಸೇರಿ ಒಟ್ಟು 32,044 ಮಂದಿ ರೈತರನ್ನು ಗುರುತಿಸಿತ್ತು.

ಬಾಗೇಪಲ್ಲಿ ತಾಲೂಕಿನಲ್ಲಿ ಬೆಳೆ ನಷ್ಟ ಪರಿಹಾರಕ್ಕೆ ಎರಡನೇ ಹಂತದಲ್ಲಿ ಒಟ್ಟು 34,631 ರೈತರನ್ನು, ಗುಡಿಬಂಡೆ ತಾಲೂಕಿನಲ್ಲಿ ಮೊದಲ ಹಂತದಲ್ಲಿ 7,202, ಎರಡನೇ ಹಂತದಲ್ಲಿ 8000 ಸಾವಿರ ಸೇರಿ ಒಟ್ಟು 15,202 ರೈತರನ್ನು ಬೆಳೆ ನಷ್ಟ ಪರಿಹಾರಕ್ಕೆ ಗುರುತಿಸಲಾಗಿತ್ತು. ಗೌರಿಬಿದನೂರು ತಾಲೂಕಿನಲ್ಲಿ ಸಹ ಮೊದಲ ಹಂತದಲ್ಲಿ 12,190, ಎರಡನೇ ಹಂತದಲ್ಲಿ 52,344 ಸೇರಿ ಒಟ್ಟು 64,534 ರೈತರನ್ನು ಗುರುತಿಸಲಾಗಿತ್ತು.

ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಮೊದಲ ಹಂತದಲ್ಲಿ 30,433, ಎರಡನೇ ಹಂತದಲ್ಲಿ 785 ಸೇರಿ ಒಟ್ಟು 31,218 ರೈತರನ್ನು ಹಾಗೂ ಶಿಡ್ಲಘಟ್ಟ ತಾಲೂಕಿನಲ್ಲಿ ಮೊದಲ ಹಂತದಲ್ಲಿ ಒಟ್ಟು 33,522 ರೈತರು ಸೇರಿ ಜಿಲ್ಲೆಯಲ್ಲಿ ಒಟ್ಟು 2,11,151 ರೈತರನ್ನು ಬೆಳೆ ನಷ್ಟ ಪರಿಹಾರಕ್ಕೆ ಕಂದಾಯ ಇಲಾಖೆ ಗುರುತಿಸಿತ್ತು.

Advertisement

ಆದರೆ ಇದುವರೆಗೂ ಎಲ್ಲಾ ರೈತರಿಗೆ ಸಕಾಲದಲ್ಲಿ ಕೈ ಸೇರಬೇಕಿದ್ದ ಬೆಳೆ ನಷ್ಟ ಪರಿಹಾರ ಮಾತ್ರ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತೆ ಕೊಡುವುದೇ ಅಲ್ಪಸ್ವಲ್ಪ ಅದರಲ್ಲೂ ಇನ್ನೂ ರೈತರ ಕೈಗೆ ಸೇರದೇ 2 ಲಕ್ಷ ರೈತರ ಪೈಕಿ ಕೇವಲ 16 ಸಾವಿರ ಮಂದಿಗೆ ಮಾತ್ರ ವಿತರಿಸಿರುವುದು ಕಂಡು ಬಂದಿದೆ. ಉಳಿದ ರೈತರ ಕೈಗೆ ಬೆಳೆ ನಷ್ಟ ಪರಿಹಾರ ಯಾವಾಗ ಸೇರುತ್ತೆದೆ ಎನ್ನುವುದು ಇನ್ನೂ ನಿಗೂಢವಾಗಿದೆ.

ಮೊದಲ ಹಂತದಲ್ಲಿನ ರೈತರಿಗೆ ಪರಿಹಾರ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಂಟಿಯಾಗಿ ನೀಡುವ ಬೆಳೆ ನಷ್ಟ ಪರಿಹಾರ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಗುರುತಿಸಿರುವ ಬರೋಬ್ಬರಿ 1,08,660 ಮಂದಿ ರೈತರ ಪೈಕಿ ಕೇವಲ 16,127 ಮಂದಿ ರೈತರಿಗೆ ಮಾತ್ರ ಬೆಳೆ ನಷ್ಟ ಪರಿಹಾರವನ್ನು ಸರ್ಕಾರ ರೈತರ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ನೀಡಿದೆ.

ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಗುರುತಿಸಿರುವ ಬರೋಬ್ಬರಿ 92,533 ರೈತರಿಗೆ ಬೆಳೆ ನಷ್ಟ ಪರಿಹಾರ ಸಿಗಬೇಕಿದೆ. ಇನ್ನೂ ಎರಡನೇ ಹಂತದಲ್ಲಿ ಗುರುತಿಸಲಾಗಿರುವ ಬೆಳೆ ನಷ್ಟಕ್ಕೀಡಾದ ರೈತರು ಜಿಲ್ಲೆಯಲ್ಲಿ ಬರೋಬ್ಬರಿ 1,02,491 ರೈತರು ಇದ್ದಾರೆ. ಆದರೆ ಎರಡನೇ ಹಂತದಲ್ಲಿ ಗುರುತಿಸಿದ ಯಾವ ರೈತನಿಗೂ ಬೆಳೆನಷ್ಟ ಪರಿಹಾರ ಸಿಕ್ಕಿಲ್ಲ.

ವಿಪರ್ಯಾಸ ಅಂದ್ರೆ ಮೊದಲ ಹಂತದಲ್ಲಿ ಗುರುತಿಸಲಾಗಿರುವ ರೈತರಿಗೆ ಪೂರ್ಣ ಪ್ರಮಾಣದಲ್ಲಿ ಬೆಳೆ ನಷ್ಟ ಪರಿಹಾರ ಸಿಗದಿರುವುದರಿಂದ ಎರಡನೇ ಹಂತದ ರೈತರಿಗೆ ಯಾವ ಬೆಳೆ ನಷ್ಟ ಪರಿಹಾರ ಸಿಗುತ್ತದೆ ಎಂದು ಬೆಳೆ ನಷ್ಟ ಪರಿಹಾರಕ್ಕೆ ಎದುರು ನೋಡುತ್ತಿರುವ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಹೇಕ್ಟರ್‌ಗೆ 6800 ರೂ. ಮಾತ್ರ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅವೈಜ್ಞಾನಿಕವಾಗಿ ಬೆಳೆ ನಷ್ಟ ಪರಿಹಾರ ವಿತರಿಸುತ್ತಿವೆಯೆಂಬ ಆರೋಪ ರೈತ ವಲಯದಲ್ಲಿ ಕೇಳಿ ಬರುತ್ತಿದೆ. 1 ಹೆಕ್ಟೇರ್‌ ಪ್ರದೇಶದಲ್ಲಿ ರಾಗಿ, ನೆಲಗಡಲೆ, ಜೋಳ, ಅವರೆ, ತೊಗರಿ, ಹುರುಳಿ ಸೇರಿದಂತೆ ಯಾವುದೇ ಬೆಳೆ ಇಟ್ಟರೂ ಕನಿಷ್ಟ 30 ರಿಂದ 50 ಸಾವಿರ ರೂ.ವರೆಗೂ ಖರ್ಚು ಬರುತ್ತದೆ.

ಆದರೆ ಸರ್ಕಾರಗಳು ರೈತರಿಗೆ ಬೆಳೆ ನಷ್ಟ ಪರಿಹಾರ ಎಂದು ಮಳೆ ಆಶ್ರಿತ ಖುಷ್ಕಿಯಲ್ಲಿ ಹೇಕ್ಟರ್‌ಗೆ 6.800 ರೂ. ಪರಿಹಾರ ಕೊಡುತ್ತಿದ್ದರೆ ಕೆರೆ ಕೆಳಗಿನ ನೀರಾವರಿ ಪ್ರದೇಶದಲ್ಲಿ ಬೆಳೆ ನಷ್ಟಕ್ಕೆ ಹೆಕ್ಟೇರ್‌ಗೆ ಕೇವಲ 13,500 ರೂ. ಹಾಗೂ ತೊಟಗಾರಿಕಾ ಬೆಳೆಗಳಿಗೆ ಹೆಕ್ಟೇರ್‌ಗೆ 18,000 ಸಾವಿರ ರೂ. ಬೆಳೆ ನಷ್ಟ ಪರಿಹಾರ ವಿತರಿಸುತ್ತಿದೆ.

ಮುಂಗಾರು ಒಳಗೆ ಕೊಟ್ಟರೆ ಅನುಕೂಲ: ಸದ್ಯ ಜಿಲ್ಲೆಯಲ್ಲಿ ಮತ್ತೆ ಮುಂಗಾರು ಆರಂಭವಾಗಿದೆ. ಅಲ್ಲಲ್ಲಿ ಮಳೆ ಬಿದ್ದು ರೈತರು ಬಿತ್ತನೆ ಕಾರ್ಯಕ್ಕೆ ಸಜ್ಜಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರೈತರಿಗೆ ಕಳೆದ ವರ್ಷದ ಬೆಳೆ ನಷ್ಟ ಪರಿಹಾರ ಸಿಕ್ಕರೆ ಈ ವರ್ಷ ಬಿತ್ತನೆಗೆ ಬೇಕಾದ ರಸಗೊಬ್ಬರ, ಬಿತ್ತನೆ ಬೀಜ ಸೇರಿದಂತೆ ಭೂಮಿ ಹದ ಮಾಡಿಕೊಳ್ಳಲು ಅನುಕೂಲವಾಗುತ್ತದೆ.

ಆದರೆ ಮುಂಗಾರು ಆರಂಭವಾದರೂ ಜಿಲ್ಲೆಯ ರೈತರಿಗೆ ಕಳೆದ ವರ್ಷದ ಬೆಳೆ ನಷ್ಟ ಪರಿಹಾರ ಸಿಗದಿರುವುದರಿಂದ ರೈತರು ಮುಂಗಾರಿನಲ್ಲಿ ಬಿತ್ತನೆ ಮಾಡಲಿಕ್ಕೆ ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ ಎಂ ಮಾತು ರೈತ ವಲಯದಿಂದ ಕೇಳಿ ಬರುತ್ತಿದೆ.

ಕೇಳಿದ್ದು 52 ಕೋಟಿ, ನೀಡಿದ್ದು 2 ಕೋಟಿ: ಜಿಲ್ಲೆಯ ಆರು ತಾಲೂಕುಗಳನ್ನು ರಾಜ್ಯ ಸರ್ಕಾರ ಸಂಪೂರ್ಣ ಬರಪೀಡಿತ ಪ್ರದೇಶವೆಂದು ಘೋಷಿಸಿದೆ. ಜಿಲ್ಲಾದ್ಯಂತ 110 ಹೆಕ್ಟೇರ್‌ ಬಿತ್ತನೆಯಾಗಿದ್ದರೆ ಆ ಪೈಕಿ 80 ಸಾವಿರ ಹೆಕ್ಟೇರ್‌ಗೂ ಅಧಿಕ ಪ್ರಮಾಣದಲ್ಲಿ ಜಿಲ್ಲೆಯಲ್ಲಿ ರೈತರ ಬೆಳೆಗಳು ಮಳೆ ಇಲ್ಲದೇ ಹಾನಿಯಾಗಿದ್ದವು.

ಜಿಲ್ಲಾಡಳಿತ ಒಟ್ಟು 52 ಕೋಟಿಯಷ್ಟು ಬೆಳೆ ನಷ್ಟ ಪರಿಹಾರಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಮನವಿ ಸಲ್ಲಿಸಿತ್ತು. ಆದರೆ ಮೊದಲ ಹಂತದಲ್ಲಿ ಗುರುತಿಸಿರುವ ರೈತರಿಗೆ ಕೇವಲ 230.23 ಲಕ್ಷ ಮಾತ್ರ ಬಿಡುಗಡೆ ಮಾಡಿದ್ದು, ಜಿಲ್ಲೆಯ ಅನ್ನದಾತರಿಗೆ ಇನ್ನೂ 50 ಕೋಟಿಯಷ್ಟು ಬೆಳೆ ನಷ್ಟ ಪರಿಹಾರ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಬರಬೇಕಿದೆ.

ಮೂರನೇ ಹಂತದಲ್ಲಿ ರೈತರನ್ನು ಗುರುತಿಸಿಲ್ಲ: ಜಿಲ್ಲೆಯಲ್ಲಿ ತೀವ್ರ ಬರಗಾಲದ ಪರಿಣಾಮ ಈ ವರ್ಷ ಎಲ್ಲಾ ಬೆಳೆಗಳು ರೈತರಿಗೆ ಕೈ ಕೊಟ್ಟಿವೆ. ಜಿಲ್ಲಾಡಳಿತ ಈಗಾಗಲೇ ಎರಡು ಹಂತದಲ್ಲಿ ಬರೋಬ್ಬರಿ 2,11,151 ರೈತರನ್ನು ಬೆಳೆ ನಷ್ಟ ಪರಿಹಾರಕ್ಕೆ ಗುರುತಿಸಿದೆ.

ಆದರೆ ಜಿಲ್ಲೆಯಲ್ಲಿ ಮೂರನೇ ಹಂತದಲ್ಲಿ ರೈತರನ್ನು ಗುರುತಿಸುವ ಕಾರ್ಯ ಇನ್ನೂ ಆಗಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಮೂರನೇ ಹಂತದಲ್ಲಿ ಕೂಡ ಸಾಕಷ್ಟು ರೈತರು ಬೆಳೆ ನಷ್ಟ ಪರಿಹಾರಕ್ಕಾಗಿ ಅರ್ಹವಾಗಿದ್ದರೂ ಕಂದಾಯ ಇಲಾಖೆ ಆ್ಯಪ್‌ ಮೂಲಕ ಬೆಳೆ ನಷ್ಟವನ್ನು ಗುರುತಿಸುವ ಕಾರ್ಯ ಇನ್ನೂ ಕೈಗೆತ್ತಿಕೊಂಡಿಲ್ಲ.

ಜಿಲ್ಲೆಯಲ್ಲಿ ಬಹಳಷ್ಟು ರೈತರು ಸರ್ಕಾರದ ಅಲ್ಪ ಪ್ರಮಾಣದಲ್ಲಿ ಕೊಡುವ ಬೆಳೆ ನಷ್ಟ ಪರಿಹಾರದಿಂದ ವಂಚನೆಯಾಗುವ ಸಾಧ್ಯತೆ ಇದೆಯೆಂಬ ಮಾತು ರೈತ ವಲಯದಲ್ಲಿ ಕೇಳಿ ಬರುತ್ತಿದೆ. ಜಿಲ್ಲೆಯಲ್ಲಿ ಮೂರನೇ ಹಂತದಲ್ಲಿ ಬೆಳೆ ನಷ್ಟ ಪರಿಹಾರ ಸಮೀಕ್ಷೆ ಕೈಗೊಳ್ಳಲು ತಾಂತ್ರಿಕ ಸಮಸ್ಯೆ ಇದೆಯೆಂಬ ಮಾತು ಅಧಿಕಾರಿಗಳಿಂದ ಕೇಳಿ ಬಂತು.

ಜಿಲ್ಲೆಯಲ್ಲಿ ಒಟ್ಟು ಎರಡು ಹಂತದಲ್ಲಿ 2,11,151 ಮಂದಿ ರೈತರನ್ನು ಬೆಳೆ ನಷ್ಟ ಪರಿಹಾರಕ್ಕೆ ಗುರುತಿಸಲಾಗಿದ್ದು, ಮೊದಲ ಹಂತದಲ್ಲಿ ಗುರುತಿಸಲಾಗಿರುವ ಒಟ್ಟು 1,08,660 ರೈತರ ಪೈಕಿ ಇದುವರೆಗೂ 16,127 ಮಂದಿ ರೈತರಿಗೆ ಒಟ್ಟು 230.23 ಲಕ್ಷ ರೂ. ಬೆಳೆ ನಷ್ಟ ಪರಿಹಾರವನ್ನು ಆಯಾ ರೈತರ ಖಾತೆಗಳಿಗೆ ಸರ್ಕಾರವೇ ನೇರವಾಗಿ ಜಮೆ ಮಾಡಿದೆ.
-ಅನಿರುದ್ಧ್ ಶ್ರವಣ್‌, ಜಿಲ್ಲಾಧಿಕಾರಿ, ಚಿಕ್ಕಬಳ್ಳಾಪುರ

* ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next