Advertisement

ನ. 4ರಂದು ಸಂಪಾಜೆ ಯಕ್ಷೋತ್ಸವ

11:13 AM Oct 28, 2017 | |

ಸುಳ್ಯ: ಸಂಪಾಜೆಯ ಡಾ| ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ಆಶ್ರಯದಲ್ಲಿ ವರ್ಷಂಪ್ರತಿ ನಡೆಯುವ ಸಂಪಾಜೆ ಯಕ್ಷೋತ್ಸವ ನ. 4ರಂದು ಬೆಳಗ್ಗೆ 10.30ಕ್ಕೆ ಕಲ್ಲುಗುಂಡಿ ಶಾಲಾ ವಠಾರದಲ್ಲಿ ನಡೆಯಲಿದೆ.

Advertisement

ಎಡನೀರು ಮಠದ ಶ್ರೀ ಕೇಶವಾನಂದ ಭಾರತೀ ಸ್ವಾಮಿಗಳು ಸಭಾಧ್ಯಕ್ಷತೆ ವಹಿಸಲಿದ್ದು, ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಮಹಾಸ್ವಾಮಿಗಳು ಆಶೀರ್ವಚನ ನೀಡುವರು. ಒಡಿಯೂರು ಶ್ರೀ ಗುರುದೇವಾನಂದ ಮಹಾಸ್ವಾಮಿಗಳು ಉಪಸ್ಥಿತರಿರುವರು.

ಶೇಣಿ ಪ್ರಶಸ್ತಿ ಶತಕ
ಇದೇ ವೇಳೆ ಯಕ್ಷ ದಿಗ್ಗಜ ಶೇಣಿ ಜನ್ಮಶತಾಬ್ದ-ಪ್ರಶಸ್ತಿ ಶತಕ ಕಾರ್ಯಕ್ರಮ ನಡೆಯಲಿದ್ದು, ಶೇಣಿ ಒಡನಾಡಿ ಕಲಾವಿದರಾದ ಸುಮಾರು 85 ಮಂದಿಯನ್ನು ಮತ್ತು 10 ಮಂದಿ ಶೇಣಿ ಒಡನಾಡಿ ಕಲಾವಿದರ ಉತ್ತರಾಧಿಕಾರಿಗಳಿಗೆ ಶೇಣಿ ಜನ್ಮಶತಾಬ್ದ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

ಸಮ್ಮಾನ
ನಿವೃತ್ತ ಪ್ರಾಂಶುಪಾಲ ಪ್ರೊ| ಎಂ.ಎಸ್‌. ಭಟ್‌ ಅವರು ಡಾ| ಕೀಲಾರು ಗೋಪಾಲಕೃಷ್ಣಯ್ಯ ಸಂಸ್ಮರಣೆ ಮಾಡುವರು.
ವೈದಿಕ ವಿದ್ವಾಂಸ ವೇ|ಮೂ| ಕೇಕಣಾಜೆ ಶಂಭಟ್ಟ ಅವರಿಗೆ ಅಭಿನಂದನೆ, ಪ್ರಸಿದ್ಧ ಬಣ್ಣದ ವೇಷಧಾರಿ ಸಿದ್ಧಕಟ್ಟೆ ಸದಾಶಿವ
ಶೆಟ್ಟಿಗಾರ್‌ ಅವರಿಗೆ ಸಮ್ಮಾನ ನಡೆಯಲಿದೆ. ಶೇಣಿ ಸಂಸ್ಮರಣೆಯನ್ನು ಖ್ಯಾತ ವಿಮರ್ಶಕ ಎ. ಈಶ್ವರಯ್ಯ ಅವರು ಮಾಡಲಿದ್ದು, ಸಮ್ಮಾನಿತರ ಅಭಿನಂದನಾ ಭಾಷಣವನ್ನು ವೇ|ಮೂ| ಹಿರಣ್ಯ ವೆಂಕಟೇಶ್ವರ ಭಟ್‌ ಮಾಡುವರು. ಸಭಾ ಕಾರ್ಯಕ್ರಮ ಮುಗಿದ ಬಳಿಕ ಪ್ರಸಿದ್ಧ ಕಲಾವಿದ ರಿಂದ ಯಕ್ಷಗಾನ ಬಯಲಾಟ ವೀರಮಣಿ ಕಾಳಗ, ಕನಕಾಂಗಿ ಕಲ್ಯಾಣ (ಬಡಗು), ಯಶೋಮತಿ-ಏಕಾವಳಿ ವಿವಾಹ ಮತ್ತು ಧೀರ ದುಂದುಭಿ ಪ್ರಸಂಗ ಪ್ರದರ್ಶನಗೊಳ್ಳಲಿದೆ. ಯಕ್ಷೋತ್ಸವಕ್ಕೆ ಉಚಿತ ಪ್ರವೇಶವಿದ್ದು, ಬಂದ ಎಲ್ಲ ಪ್ರೇಕ್ಷಕರಿಗೂ ಕಾರ್ಯಕ್ರಮ ಉದ್ದಕ್ಕೂ ಉಚಿತ ಊಟ, ಉಪಾಹಾರದ ವ್ಯವಸ್ಥೆ ಮಾಡಲಾಗುತ್ತದೆ.

ಹವ್ಯಾಸಿ ಕಲಾವಿದರ ಸ್ಪರ್ಧೆ
ಯಕ್ಷಕಲೆಗೆ ಉತ್ತೇಜನ ನೀಡುವ ಸಲುವಾಗಿ ಈ ಬಾರಿ ತೆಂಕುತಿಟ್ಟು ಹವ್ಯಾಸಿ ಕಲಾವಿದರ ಯಕ್ಷಗಾನ ಸ್ಪರ್ಧೆಯನ್ನು 3 ದಿನಗಳ ಕಾಲ ಏರ್ಪಡಿಸಲಾಗಿದೆ. ಈ ಸ್ಪರ್ಧೆ ನ. 2 ಮತ್ತು 3ರಂದು ಬೆಳಗ್ಗೆ 9ರಿಂದ ಸಂಜೆ 7.30ರ ವರೆಗೆ ಮತ್ತು ನ. 4ರಂದು ಬೆಳಗ್ಗೆ 8.30ರಿಂದ ಮರುದಿನ ಬೆಳಗ್ಗೆ 10ರ ತನಕ ನಡೆಯಲಿದೆ. 15 ವರ್ಷಕ್ಕಿಂತ ಮೇಲ್ಪಟ್ಟ ವಯೋಮಾನದ ಹವ್ಯಾಸಿ ಕಲಾವಿದರಿಗೆ ಮಾತ್ರ ಅವಕಾಶವಿದ್ದು, ತಂಡದ 7 ಮಂದಿ ಕಲಾವಿದರು ಪಾತ್ರ ಚಿತ್ರಣ ಮಾಡಬೇಕಾಗಿದೆ. ಸಂಘಟಕರು ಸಂಯೋಜಿಸಿದ ಇಂದ್ರಜಿತು ಕಾಳಗ ಪ್ರಸಂಗದ ಸನ್ನಿವೇಷಗಳನ್ನು ಮತ್ತು ಆಯ್ಕೆಯ ಪದ್ಯಗಳನ್ನೇ ಬಳಸಿಕೊಳ್ಳಬೇಕು. ಅಲ್ಲದೆ ಆಯ್ಕೆ ಮಾಡಿದ 7
ಪಾತ್ರಗಳು ಪ್ರಸಂಗವನ್ನು 45 ನಿಮಿಷದೊಳಗೆ ಪ್ರದರ್ಶಿಸಬೇಕು. ಹಿಮ್ಮೇಳದಲ್ಲಿ ವೃತ್ತಿಪರರು ಭಾಗವಹಿಸಬಹುದು.

Advertisement

ಪ್ರಥಮ ಮತ್ತು ದ್ವಿತೀಯ ಪ್ರಶಸ್ತಿಗೆ ಗರಿಷ್ಠ ಮೊತ್ತದ ನಗದು ಮತ್ತು ಪ್ರಶಸ್ತಿ ಪತ್ರ ಅಲ್ಲದೆ ವೈಯಕ್ತಿಕ ಪ್ರಶಸ್ತಿಯೂ ಇದೆ. ಭಾಗವಹಿಸುವ ಪ್ರತಿತಂಡಕ್ಕೂ ಖರ್ಚು ವೆಚ್ಚ ಗೌರವಧನ ನೀಡಲಾಗುತ್ತದೆ. ಒಟ್ಟು 32 ತಂಡಗಳ ಪ್ರವೇಶ ಪತ್ರ ಬಂದಿದ್ದು ಅವುಗಳಲ್ಲಿ 18 ತಂಡಗಳನ್ನು ಆಯ್ಕೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next