Advertisement

ತುಳು ಮಾತನಾಡಲು ನಾಚಿಕೆ ಬೇಡ: ಒಡಿಯೂರು ಶ್ರೀ

12:31 AM Jan 31, 2023 | Team Udayavani |

ವಿಟ್ಲ: ಪ್ರೀತಿ, ವಿಶ್ವಾಸ ತುಳುವರ ಜೀವಾಳ. ತುಳುವರಿಗೆ ತುಳು ಸಂಸ್ಕೃತಿಯನ್ನು ನೆನಪಿಸುವ, ಜಾಗೃತಿ ಮೂಡಿಸುವ‌ ಜತೆಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಸಾಹಿತ್ಯ ಸಮ್ಮೇಳನಗಳ ಆವಶ್ಯಕತೆ ಇದೆ. ತುಳುವಿಗೆ ಸ್ವಾದವಿದೆ, ಸೆಳೆತವಿದೆ. ತುಳುವರು ಔದಾಸೀನ್ಯವನ್ನು ಬಿಡಬೇಕು. ಮಾತೃಭಾಷೆಯಲ್ಲಿ ಮಾತನಾಡಲು ನಾಚಿಕೆ ಬೇಡ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

Advertisement

ಅವರು ಸೋಮವಾರ ಒಡಿಯೂರು ಸಂಸ್ಥಾನದಲ್ಲಿ ತುಳುನಾಡ ಜಾತ್ರೆ-ಶ್ರೀ ಒಡಿಯೂರು ರಥೋತ್ಸವ, 23ನೇ ತುಳು ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಅಜ್ಜಿ ಕಥೆಯಲ್ಲಿ ಜೀವನ ಸಾರವನ್ನು ನೀಡುವ ನೈತಿಕ ಮೌಲ್ಯಗಳು ತುಂಬಿದೆ. ಭಾಷೆ – ಸಂಸ್ಕೃತಿ ಒಂದು ನಾಣ್ಯದ ಎರಡು ಮುಖಗಳು. ಹಿಂದಿನ ಆಚಾರ ವಿಚಾರಗಳನ್ನು ಉಳಿಸುವ ನಿಟ್ಟಿನಲ್ಲಿ ಯುವ ಶಕ್ತಿ ಪ್ರಯತ್ನಿಸಬೇಕು. ಮನೆಯಲ್ಲಿ ಬದಲಾವಣೆಯಾದಾಗ ದೇಶ ಬದಲಾಗಲು ಸಾಧ್ಯ ಎಂದರು. ಸಾಧ್ವಿà ಶ್ರೀ ಮಾತಾನಂದಮಯೀ ದಿವ್ಯ ಸಾನ್ನಿಧ್ಯ ವಹಿಸಿದ್ದರು.
ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಡಾ| ವಸಂತ ಕುಮಾರ ಪೆರ್ಲ ಮಾತನಾಡಿ, ಕೃಷಿ ಪ್ರಧಾನವಾದ ತುಳುನಾಡು ಕೈಗಾರಿಕೀಕರಣದತ್ತ ವಾಲುತ್ತಿದೆ. ಅಭಿವೃದ್ಧಿಯ ಜತೆಗೆ ಕೃಷಿ – ಋಷಿ ಸಂಸ್ಕೃತಿಯೊಂದಿಗೆ ತುಳುವರು ಬೆಳೆಯಬೇಕು. ಹೈನುಗಾರಿಕೆ, ಬೇಸಾಯಕ್ಕೆ ಒತ್ತು ನೀಡಬೇಕು. ಅಂತರ್ಜಲ ಹೆಚ್ಚಿಸಲು ಅಣೆಕಟ್ಟು, ಸುಸಜ್ಜಿತ ಗೋ ಆಸ್ಪತ್ರೆ, ಗೋಸಂರಕ್ಷಣೆ ಕೇಂದ್ರ, ಪಶುವೈದ್ಯಕೀಯ ಕಾಲೇಜು ಸ್ಥಾಪನೆಯಾಗಬೇಕು ಎಂದರು.

ಅಖೀಲ ಭಾರತ ತುಳು ಕೂಟದ ಅಧ್ಯಕ್ಷ ಎ.ಸಿ. ಭಂಡಾರಿ ಅವರು ಮಾತನಾಡಿ, 1.5 ಕೋಟಿ ತುಳುವರು ಇದ್ದರೂ ಮನಸ್ಸು ಮೆತ್ತಗಾಗಿದೆ. ಎದ್ದು ನಿಂತರೆ 15 ದಿನಗಳಲ್ಲಿ ತುಳು ಭಾಷೆ 8ನೇ ಪರಿಚ್ಛೇದಕ್ಕೆ ಸೇರಿಕೊಳ್ಳಬಹುದು ಎಂದರು.

ಕೃತಿ ಬಿಡುಗಡೆ
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಬೇಲಾಡಿ ವಿಠಲ ಶೆಟ್ಟಿ ಅವರು ಒಡಿಯೂರು ಶ್ರೀಗಳ ತುಳುಲಿಪಿಯ ಕೈಬರಹದ “ಈಶಾವಾಸ್ಯೋಪನಿಷತ್‌’ ಕೃತಿ ಬಿಡುಗಡೆಗೊಳಿಸಿದರು.
ಬೆಂಗಳೂರು ತುಳುವರ ಚಾವಡಿ ಗೌರವಾಧ್ಯಕ್ಷ ಪುರುಷೋತ್ತಮ ಚೇಂಡ್ಲ, ದ.ಕ. ಜಿಲ್ಲಾ ಕ್ಯಾಟರಿಂಗ್‌ ಅಸೋಸಿಯೇಶನ್‌ ಅಧ್ಯಕ್ಷ ರಾಜ್‌ಗೊàಪಾಲ ರೈ, ಪೂರ್ಣಿಮಾ ಉಪಸ್ಥಿತರಿದ್ದರು.
ಜಯಪ್ರಕಾಶ್‌ ಶೆಟ್ಟಿ ಎ. ಅಧ್ಯಕ್ಷರ ಪರಿಚಯ ಮಾಡಿದರು. ರೇಣುಕಾ ಎಸ್‌. ರೈ ಒಡಿಯೂರು ಆಶಯಗೀತೆ ಹಾಡಿದರು. ಯಶವಂತ ವಿಟ್ಲ ಸ್ವಾಗತಿಸಿದರು. ದೇವಿಪ್ರಸಾದ್‌ ಶೆಟ್ಟಿ ಬೆಜ್ಜ ವಂದಿಸಿದರು. ಲೋಕೇಶ್‌ ಶೆಟ್ಟಿ ಬಾಕ್ರಬೈಲು ನಿರ್ವಹಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next