Advertisement

ಚಂಡಮಾರುತ ಎದುರಿಸಲು ಒಡಿಶಾ ಮಾದರಿ

01:09 AM May 06, 2019 | ಸಂಪಾದಕೀಯ |

ಒಡಿಶಾಕ್ಕೆ ಶುಕ್ರವಾರ ಅಪ್ಪಳಿಸಿದ ಫೋನಿ ಚಂಡಮಾರುತ ಸಾಕಷು³ ವಿನಾಶವನ್ನುಂಟು ಮಾಡಿದೆ. ನೂರಾರು ಮನೆಗಳು ಕುಸಿದಿವೆ, ಸಾವಿರಾರು ಮನೆಗಳಿಗೆ ಹಾನಿಯಾಗಿವೆ.

Advertisement

ದೂರವಾಣಿ ಮತ್ತು ವಿದ್ಯುತ್‌ ಕಂಬಗಳು ಧರೆಗುರುಳಿವೆ, ವಾಹನಗಳು ಜಖಂಗೊಂಡಿದ್ದು, ಮೂಲಸೌಕರ್ಯಕ್ಕಾಗಿರುವ ಹಾನಿಯನ್ನು ಸರಿಪಡಿಸಲು ಭಾರೀ ಪ್ರಯಾಸಪಡಬೇಕಾಗಿದೆ. ಆದರೆ ಪ್ರಚಂಡ ಚಂಡಮಾರುತ ಅಪ್ಪಳಿಸಿದರೂ ಹೆಚ್ಚಿನ ಸಾವುನೋವು ಸಂಭವಿಸಿದಂತೆ ನೋಡಿಕೊಳ್ಳುವಲ್ಲಿ ಆಡಳಿತ ವ್ಯವಸ್ಥೆ ಸಫ‌ಲವಾಗಿದ್ದು, ಇದು ನಿಜವಾಗಿಯೂ ಮೆಚ್ಚತಕ್ಕ ವಿಚಾರ. ವಿಶ್ವಸಂಸ್ಥೆಯೇ ಆಡಳಿತ ಯಂತ್ರ ಕೈಗೊಂಡ ಮುನ್ನೆಚ್ಚರಿಕೆ ಕ್ರಮಗಳನ್ನು ಶ್ಲಾ ಸಿದೆ. ಹಾಗೇ ನೋಡಿದರೆ ಫೋನಿ ಒಡಿಶಾಕ್ಕೆ ಅಪ್ಪಳಿಸಿದ ಚಂಡಮಾರುತಗಳಲ್ಲೇ ಅತ್ಯಂತ ಪ್ರಬಲವಾಗಿತ್ತು. ತಾಸಿಗೆ 200 ಕಿ. ಮೀ. ವೇಗದಲ್ಲಿ ಬೀಸಿದ ಚಂಡಮಾರುತ ಅಪ್ಪಳಿಸಿದಾಗ ಅಪಾರ ಪ್ರಮಾಣದ ಸಾವುನೋವು ಸಂಭವಿಸಬೇಕಿತ್ತು.ಆದರೆ ಸಕಾಲಿಕವಾಗಿ ಕೈಗೊಂಡ ಮುನ್ನೆಚ್ಚರಿಕೆ ಕ್ರಮಗಳಿಂದಾಗಿ ಇದು ತಪ್ಪಿದೆ. ಸಾವಿರಾರು ಜೀವವುಳಿಸಿದ ರಾಜ್ಯ ಮತ್ತು ಪೂರಕ ನೆರವುಗಳನ್ನಿತ್ತ ಕೇಂದ್ರ ಸರಕಾರ ನಿಜಕ್ಕೂ ಅಭಿನಂದನಾರ್ಹ. ಹವಾಮಾನ ಇಲಾಖೆಯ ಕಾರ್ಯಕ್ಷಮತೆಯೂ ಅಭಿನಂದನಾರ್ಹ.

ಕನಿಷ್ಠ ಪ್ರಕೃತಿ ವಿಕೋಪಗಳನ್ನು ಎದುರಿಸುವ ವಿಚಾರದಲ್ಲಾದರೂ ಒಡಿಶಾ ಬದಲಾಗಿದೆ ಎನ್ನುವುದು ಸಕಾರಾತ್ಮಕವಾದ ಅಂಶ. ಈ ಬದಲಾವಣೆಯಲ್ಲಿ ಆಧುನಿಕ ತಂತ್ರಜ್ಞಾನ ವಹಿಸಿದ ಪಾತ್ರವೂ ಮುಖ್ಯವಾಗುತ್ತದೆ. ಚಂಡಮಾರುತ ಅಪ್ಪಳಿಸಲಿರುವ ಕುರಿತು ಉಪಗ್ರಹಗಳು ಸಾಕಷ್ಟು ಮುಂಚಿತವಾಗಿ ಸುಳಿವು ನೀಡಿದ ಕಾರಣ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಯಿತು. ಜತೆಗೆ ಮೊಬೈಲ್‌ ಫೋನ್‌ಗಳು ಮತ್ತು ಕ್ಷಿಪ್ರ ಸಾರಿಗೆ ಮತ್ತು ಸಾಗಾಟ ಸೌಲಭ್ಯಗಳು ನೆರವಾಗಿವೆ. 20 ವರ್ಷಗಳ ಹಿಂದೆಯೂ ಒಡಿಶಾಕ್ಕೆ ಇದೇ ಮಾದರಿಯ ಚಂಡಮಾರುತ ಅಪ್ಪಳಿಸಿತ್ತು. ಆಗ ಕನಿಷ್ಠ 10,000 ಮಂದಿ ಪ್ರಾಣ ಕಳೆದುಕೊಂಡಿದ್ದರು. ಆ ವಿನಾಶಕ್ಕೆ ಹೋಲಿಸಿದರೆ ಒಡಿಶಾ ಈ ಸಲ ಮಾಡಿದ ಸಾಧನೆ ಏನು ಎನ್ನುವುದು ಮನವರಿಕೆಯಾಗಬಹುದು.

ಬರೀ 36 ತಾಸುಗಳ ಒಳಗೆ 13 ಜಿಲ್ಲೆಗಳ 11.5 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದು ಸಾಮಾನ್ಯ ಸಾಧನೆಯಲ್ಲ. ಮೇಲಿನಿಂದ ಕೆಳಗಿನ ತನಕ ಆಡಳಿತ ವ್ಯವಸ್ಥೆಯ ಪ್ರತಿಯೊಬ್ಬ ಸಿಬಂದಿಯ ಶ್ರಮ ಇದರ ಹಿಂದೆ ಇದೆ. ಮನೆಬಿಟ್ಟು ಬರಲೊಪ್ಪದವರನ್ನು ಮನವೊಲಿಸುವುದು ಸುಲಭದ ಕೆಲಸವಾಗಿರಲಿಲ್ಲ. ಎಷ್ಟೋ ಮಂದಿಯನ್ನು ಬಲವಂತವಾಗಿ ಬಸ್‌ ಹತ್ತಿಸಿಕೊಂಡು ಹೋಗಿದ್ದರು. ವೃದ್ಧರನ್ನು, ಅಸ್ವಸ್ಥರನ್ನು, ಗರ್ಭಿಣಿಯರನ್ನು, ಮಕ್ಕಳನ್ನು ಎತ್ತಿಕೊಂಡೇ ಹೋಗಲಾಗಿತ್ತು. ನಿರಾಶ್ರಿತರಿಗೆ ಆಶ್ರಯ ಕೊಡಲೆಂದೇ 5000 ನಿರಾಶ್ರಿತ ಕೇಂದ್ರಗಳನ್ನು ತೆರೆಯಲಾಗಿತ್ತು. 1500ಕ್ಕೂ ಹೆಚ್ಚು ಬಸ್‌ಗಳನ್ನು ಮತ್ತು ಇತರ ವಾಹನಗಳನ್ನು ಬಳಸಿಕೊಳ್ಳಲಾಗಿತ್ತು. ಸಾವಿರಾರು ಸರಕಾರಿ ನೌಕರರು ಮತ್ತು ಸ್ವಯಂಸೇವಕರು ಸೇರಿ ಗುರುವಾರ ರಾತ್ರಿಯೊಳಗಾಗಿ ಜನರನ್ನು ಸಾಗಿಸುವ ಕೆಲಸವನ್ನು ಬಹುತೇಕ ಮುಗಿಸಿದರು. ಪ್ರವಾಸಿಗರಿಗೆ ಆದಷ್ಟು ಕ್ಷಿಪ್ರವಾಗಿ ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚಿಸಲಾಗಿತ್ತು. ಅಂತೆಯೇ ಪುರಿ-ಕೊನಾರ್ಕ್‌ ಪ್ರವಾಸಿ ವಲಯದಲ್ಲಿ ಹಿಂದಿನ ದಿನವೇ ಪ್ರವಾಸೋದ್ಯಮ ಚಟುವಟಿಕೆಗಳನ್ನೆಲ್ಲ ಸ್ಥಗಿತಗೊಳಿಸಲಾಗಿತ್ತು.ಬೆಸ್ತರಿಗೆ ಸೈರನ್‌ ಮೂಲಕ ಎಚ್ಚರಿಕೆ ನೀಡಿದ್ದಲ್ಲದೆ ಅವರಿಗಾಗಿಯೇ ಪ್ರತ್ಯೇಕ ವಯರ್‌ಲೆಸ್‌ ಸೌಲಭ್ಯವನ್ನು ಪ್ರಾರಂಭಿಸಲಾಗಿತ್ತು. ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಮೊಬೈಲ್‌, ಟಿವಿ ಮತ್ತು ರೇಡಿಯೊ ಮೂಲಕ ಲಕ್ಷಗಟ್ಟಲೆ ಎಚ್ಚರಿಕೆ ಸಂದೇಶಗಳನ್ನು ರವಾನಿಸಿ ಜನರನ್ನು ಪ್ರಕೋಪಗಳನ್ನು ಎದುರಿಸಲು ಮಾನಸಿಕವಾಗಿ ಮತ್ತು ದೈಹಿಕವಾಗಿ ಸಜ್ಜಾಗಿರಿಸಲಾಗಿತ್ತು.ವಿಮಾನ ನಿಲ್ದಾಣಗಳನ್ನು ಮುಚ್ಚಲಾಗಿತ್ತು. ಹೀಗೆ ತಯಾರಿ ಮತ್ತು ಕಾರ್ಯಾಚರಣೆ ಏಕಕಾಲದಲ್ಲಿ ನಡೆದ ಕಾರಣ ವಿಕೋಪದ ಪರಿಣಾಮವನ್ನು ಕಡಿಮೆ ಮಾಡಲು ಸಾಧ್ಯವಾಯಿತು.

ಒಡಿಶಾದ ತಯಾರಿ ಬರೀ ಚಂಡಮಾರುತದ ಹೊಡೆತವನ್ನು ಎದುರಿಸುವುದಕ್ಕಷ್ಟೇ ಸೀಮಿತವಾಗಿರಲಿಲ್ಲ. ಜತೆಗೆ ಅನಂತರದ ಪರಿಣಾಮಗಳನ್ನು ಎದುರಿಸುವ ನಿಟ್ಟಿನಲ್ಲೂ ಆಡಳಿತ ಚಿಂತಿಸಿತ್ತು. ಇದಕ್ಕಾಗಿಯೇ ಲಕ್ಷಗಟ್ಟಲೆ ಆಹಾರ ಪೊಟ್ಟಣಗಳನ್ನು ಕಳಿಂಗ ಸ್ಟೇಡಿಯಂ ಸೇರಿದಂತೆ ವಿವಿಧೆಡೆ ಸಮರೋಪಾದಿಯಲ್ಲಿ ಸಂಗ್ರಹಿಸಿಡಲಾಗಿತ್ತು. ಜತೆಗೆ ದೂರವಾಣಿ, ವಿದ್ಯುತ್‌ ಸಂಪರ್ಕಗಳನ್ನು ಸರಿಪಡಿಸಲು ಮೆಕ್ಯಾನಿಕ್‌ಗಳ ತಂಡಗಳನ್ನು ಅಲ್ಲಲ್ಲಿ ಸನ್ನದ್ಧವಾಗಿಡಲಾಗಿತ್ತು. ಅವಶೇಷಗಳನ್ನು ಸ್ವತ್ಛಗೊಳಿಸಲು ಮತ್ತು ರಸ್ತೆಗಳನ್ನು ತೆರವುಗೊಳಿಸಲು ಕಾರ್ಮಿಕರ ತಂಡಗಳು ತಯಾರಾಗಿ ನಿಂತಿದ್ದವು. ಹೀಗಾಗಿ ಚಂಡಮಾರುತ ಅಪ್ಪಳಿಸಿದ 24 ತಾಸುಗಳಲ್ಲಿ ಸಂಪರ್ಕ ಮತ್ತು ಸಂವಹನ ವ್ಯವಸ್ಥೆಯನ್ನು ಬಹುತೇಕ ಮರುಸ್ಥಾಪಿಸಲು ಸಾಧ್ಯವಾಯಿತು. 36 ತಾಸುಗಳಲ್ಲಿ ವಿಮಾನ ಯಾನವೂ ಆರಂಭಗೊಂಡಿತು. ಕೇಂದ್ರ ಸರಕಾರ ಚಂಡಮಾರುತ ಅಪ್ಪಳಿಸುವ ಮೊದಲೇ ಪರಿಹಾರ ಕಾರ್ಯಗಳಿಗಾಗಿ 1000 ಕೋ. ರೂ. ಬಿಡುಗೊಳಿಸಿ ತನ್ನ ಬದ್ಧತೆಯನ್ನು ತೋರಿಸಿದೆ. ಇದು 20 ವರ್ಷ ಹಿಂದಿನ ವಿಕೋಪಕ್ಕೂ ಶುಕ್ರವಾರದ ವಿಕೋಪಕ್ಕೂ ನಡುವೆ ಇದ್ದ ವ್ಯತ್ಯಾಸ. ಒಡಿಶಾದ ಸಾಧನೆ ಈಗ ಅಂತರಾಷ್ಟ್ರೀಯ ಗಮನ ಸೆಳೆದಿದೆ. ಒಡಿಶಾ ಇತಿಹಾಸದಿಂದ ಪಾಠ ಕಲಿತಿದೆ. ಈ ಪಾಠ ಎಲ್ಲ ರಾಜ್ಯಗಳಿಗೆ ಮಾದರಿ. ನಿರ್ದಿಷ್ಟವಾಗಿ ಒಡಿಶಾದಂತೆ ಪದೇ ಪದೇ ಚಂಡಮಾರುತದ ಹಾವಳಿಗೆ ತುತ್ತಾಗುವ ಆಂಧ್ರ ಪ್ರದೇಶ, ತಮಿಳುನಾಡು ಮತ್ತಿತರ ರಾಜ್ಯಗಳು ಕಲಿತುಕೊಳ್ಳಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next