ಒಡಿಶಾ: ಪತ್ನಿಯ ಒಂದೇ ಒಂದು ಬಯಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಒಡಿಶಾದ ಜಾಜ್ ಪುರ ಜಿಲ್ಲೆಯ ಬಿಂಜಾರ್ಪುರ್ ಬ್ಲಾಕ್ ನ ಚಿಕಾನಾ ಗ್ರಾಮದಲ್ಲಿ ಪತಿ ಬರೋಬ್ಬರಿ 7 ಕೋಟಿ ರೂಪಾಯಿ ವೆಚ್ಚದಲ್ಲಿ ದೇವಾಲಯವನ್ನು ಕಟ್ಟಿಸಿರುವ ಅಪರೂಪದ ಘಟನೆ ಕುರಿತು ವರದಿಯಾಗಿದೆ.
ಇದನ್ನೂ ಓದಿ:ಕಿಚ್ಚ ಸುದೀಪ್, ಉಪೇಂದ್ರ ಬಳಿ ಕ್ಷಮೆ ಕೇಳಿದ ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್
ಕೈಗಾಕಾರಿಕೋದ್ಯಮಿ ಕ್ಷೇತ್ರಬಾಸಿ ಲೆಂಕಾ ಅವರು ಪತ್ನಿ ಬೈಜಯಂತಿ ಲೆಂಕಾ ಅವರೊಂದಿಗೆ ಹೈದರಾಬಾದ್ ನಲ್ಲಿ ವಾಸವಾಗಿದ್ದರು. ಬೈಜಯಂತಿ ಅವರು ಮಾ ಸಂತೋಷಿಯ ಪರಮ ಭಕ್ತೆಯಾಗಿದ್ದರು. ಈ ಸಂದರ್ಭದಲ್ಲಿ ತನ್ನ ಹುಟ್ಟೂರಾದ ಚಿಕಾನಾ ಗ್ರಾಮದಲ್ಲಿಯೂ ಮಾ ಸಂತೋಷಿ ದೇವಿಯ ದೇವಸ್ಥಾನವನ್ನು ಕಟ್ಟಿಸಬೇಕೆಂದು ಪತಿಯಲ್ಲಿ ಮನವಿ ಮಾಡಿಕೊಂಡಿದ್ದರಂತೆ.
ಹೀಗೆ ಪತ್ನಿಯ ಕೋರಿಕೆಯನ್ನು ಪೂರ್ಣಗೊಳಿಸಲು 2008ರಲ್ಲಿ ಕ್ಷೇತ್ರಬಾಸಿ ಅವರು ಪತ್ನಿಯ ಹುಟ್ಟೂರಾದ ಚಿಕಾನಾ ಗ್ರಾಮದಲ್ಲಿ ದೇವಾಲಯದ ಕೆಲಸವನ್ನು ಆರಂಭಿಸಿದ್ದು, ಇದೀಗ ಏಳು ಕೋಟಿ ರೂಪಾಯಿ ವೆಚ್ಚದ ದೇವಸ್ಥಾನದ ನಿರ್ಮಾಣಗೊಂಡಿರುವುದಾಗಿ ವರದಿ ವಿವರಿಸಿದೆ.
ಸಂತೋಷಿ ಮಾ ದೇವಸ್ಥಾನದಲ್ಲಿ ಶಿವ, ಗಣಪತಿ, ಹನುಮಂತ ಹಾಗೂ ನವಗ್ರಹಗಳನ್ನೂ ಪೂಜಿಸಲು ಅವಕಾಶ ಮಾಡಿಕೊಡಲಾಗಿದೆ. ಇತ್ತೀಚೆಗಷ್ಟೇ ದಂಪತಿಯ ಆಶಯದಂತೆ ದೇವಾಲಯ ಉದ್ಘಾಟನೆಗೊಂಡಿತ್ತು. ದಂಪತಿಯ ಈ ಕಾರ್ಯಕ್ಕೆ ಸ್ಥಳೀಯರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿರುವುದಾಗಿ ವರದಿ ತಿಳಿಸಿದೆ.