Advertisement

ಕೋವಿಡ್‌: ಒಡಿಶಾ ಕ್ರಿಕೆಟ್‌ ತಂಡದ ಮಾಜಿ ನಾಯಕ ಮೊಹಾಪಾತ್ರ ನಿಧನ

12:39 AM May 20, 2021 | Team Udayavani |

ಭುವನೇಶ್ವರ: ಒಡಿಶಾ ಕ್ರಿಕೆಟ್‌ ತಂಡದ ಮಾಜಿ ನಾಯಕ ಪ್ರಶಾಂತ್‌ ಮೊಹಾಪಾತ್ರ (47) ಬುಧವಾರ ಬೆಳಗ್ಗೆ ಇಲ್ಲಿನ ಎಐಐಎಂಎಸ್‌ ಆಸ್ಪತ್ರೆಯಲ್ಲಿ ಕೋವಿಡ್‌ನಿಂದ ಕೊನೆಯುಸಿರೆಳೆದರು.

Advertisement

ಇದರೊಂದಿಗೆ ಹತ್ತೇ ದಿನಗಳ ಅಂತರದಲ್ಲಿ ತಂದೆ ಹಾಗೂ ಮಗ ಇಬ್ಬರೂ ಕೋವಿಡ್‌ಗೆ ಬಲಿಯಾದಂತಾಯಿತು. ಪ್ರಶಾಂತ್‌ ಮೊಹಾಪಾತ್ರ ಅವರ ತಂದೆ, ರಾಜ್ಯಸಭಾ ಎಂಪಿ, ಪದ್ಮಭೂಷಣ ಪುರಸ್ಕೃತ ರಘುನಾಥ್‌ ಮೊಹಾಪಾತ್ರ ಮೇ 9ರಂದು ಇದೇ ಸೋಂಕಿನಿಂದ ಸಾವನ್ನಪ್ಪಿದ್ದರು.

ಪ್ರಶಾಂತ್‌ ಸ್ಥಿತಿ ಗಂಭೀರವಾದ್ದರಿಂದ ವೆಂಟಿಲೇಟರ್‌ ಅಳವಡಿಸಲಾಗಿತ್ತು. ಆಸ್ಪತ್ರೆಯ ತಜ್ಞ ವೈದ್ಯರ ತಂಡವೊಂದು ಇವರ ಆರೋಗ್ಯದ ಮೇಲೆ ವಿಶೇಷ ನಿಗಾ ಇರಿಸಿತ್ತು. ಆದರೆ ಇದು ಫ‌ಲಕಾರಿಯಾಗಲಿಲ್ಲ ಎಂದು ಆಸ್ಪತ್ರೆಯ ಸುಪರಿಂಟೆಂಡೆಂಟ್‌ ಡಾ| ಎಸ್‌.ಎನ್‌. ಮೊಹಂತಿ ಹೇಳಿದರು.

ಪ್ರಶಾಂತ್‌ ಅವರ ಸಹೋದರ ಜಸೋಬಂತ್‌ ಕೂಡ ಕೋವಿಡ್‌ ಪಾಸಿಟಿವ್‌ ಫ‌ಲಿತಾಂಶ ಹೊಂದಿದ್ದು, ಇದೇ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬಲಗೈ ಓಪನರ್‌
1973ರ ಸೆ. ಒಂದರಂದು ಜನಿಸಿದ ಪ್ರಶಾಂತ್‌ ಮೊಹಾಪಾತ್ರ ಆತ್ಮೀಯರ ವಲಯದಲ್ಲಿ “ಮುನ್ನಾ’ ಎಂದೇ ಜನಪ್ರಿಯರಾಗಿದ್ದರು. ಬಲಗೈ ಓಪನರ್‌ ಆಗಿದ್ದ ಅವರು ಮೊದಲು ಅಂಡರ್‌-19, ಬಳಿಕ 1990ರಲ್ಲಿ ಒಡಿಶಾ ರಣಜಿ ತಂಡವನ್ನು ಪ್ರವೇಶಿಸಿದರು. ದುಲೀಪ್‌ ಟ್ರೋಫಿ ಹಾಗೂ ದೇವಧರ್‌ ಟ್ರೋಫಿ ಕ್ರಿಕೆಟ್‌ನಲ್ಲಿ ಪೂರ್ವ ವಲಯವನ್ನು ಪ್ರತಿನಿಧಿಸಿದ್ದರು. 45 ಪ್ರಥಮ ದರ್ಜೆ ಪಂದ್ಯಗಳಿಂದ 2,196 ರನ್‌ ಗಳಿಸಿದ್ದರು. ಇದರಲ್ಲಿ 5 ಶತಕ ಸೇರಿತ್ತು. ನಿವೃತ್ತಿ ಬಳಿಕ ಬಿಸಿಸಿಐ ಮ್ಯಾಚ್‌ ರೆಫ್ರಿಯಾಗಿಯೂ ಕರ್ತವ್ಯ ನಿಭಾಯಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next