Advertisement

Puri Jagannath ದೇವಾಲಯದ 4 ದ್ವಾರಗಳು ಭಕ್ತರಿಗೆ ಮುಕ್ತ… ಮೊದಲ ಭರವಸೆ ಈಡೇರಿಸಿದ ಬಿಜೆಪಿ

10:12 AM Jun 13, 2024 | Team Udayavani |

ಒಡಿಶಾ: ಒಡಿಶಾದ ಪುರಿಯಲ್ಲಿರುವ ಶ್ರೀ ಜಗನ್ನಾಥ ದೇವಾಲಯದ ಎಲ್ಲಾ ನಾಲ್ಕು ದ್ವಾರಗಳನ್ನು ಗುರುವಾರ ಮತ್ತೊಮ್ಮೆ ತೆರೆಯಲಾಗಿದೆ. ಇದರೊಂದಿಗೆ ಚುನಾವಣಾ ಪೂರ್ವದಲ್ಲಿ ಬಿಜೆಪಿ ನೀಡಿದ ಮೊದಲ ಭರವಸೆಯನ್ನು ಈಡೇರಿಸಿದಂತಾಗಿದೆ.

Advertisement

ಬುಧವಾರ ನಡೆದ ಮೊದಲ ಸಂಪುಟ ಸಭೆಯಲ್ಲಿ ದೇವಸ್ಥಾನದ ಬಾಗಿಲು ತೆರೆಯುವ ಕುರಿತು ನಿರ್ಧಾರ ಕೈಗೊಳ್ಳಲಾಗಿತ್ತು ಅದರಂತೆ ರಾಜ್ಯದಲ್ಲಿ ಹೊಸದಾಗಿ ಚುನಾಯಿತವಾದ ಬಿಜೆಪಿ ಸರ್ಕಾರವು ಪುರಿಯ ಶ್ರೀ ಜಗನ್ನಾಥ ದೇವಾಲಯದ ಎಲ್ಲಾ ನಾಲ್ಕು ದ್ವಾರಗಳನ್ನು ಪುನಃ ತೆರೆಯುವ ಪ್ರಸ್ತಾವನೆಗೆ ಬುಧವಾರ ಅನುಮೋದನೆ ನೀಡಿದೆ. ದೇವಸ್ಥಾನಕ್ಕೆ ಸಂಬಂಧಿಸಿದ ಪ್ರಮುಖ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸಲು ಸರ್ಕಾರ 500 ಕೋಟಿ ರೂಪಾಯಿಗಳ ವಿಶೇಷ ನಿಧಿಯನ್ನು ಘೋಷಿಸಿದೆ.

ಅದರಂತೆ ಇಂದು ಬೆಳಿಗ್ಗೆ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಸೇರಿದಂತೆ ಇತರ ಅಧಿಕಾರಿಗಳು ಜಗನ್ನಾಥ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುವ ಮೂಲಕ ದೇವಳದ ನಾಲ್ಕು ಬಾಗಿಲುಗಳನ್ನು ತೆರೆಯುವ ಪ್ರಕ್ರಿಯೆಯಲ್ಲಿ ಭಾಗಿಯಾದರು.

ಈ ಕುರಿತು ಮಾತನಾಡಿದ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ “ನಾವು ನಿನ್ನೆ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಜಗನ್ನಾಥ ದೇವಾಲಯದ ಎಲ್ಲಾ ನಾಲ್ಕು ದ್ವಾರಗಳನ್ನು ತೆರೆಯಲು ಪ್ರಸ್ತಾಪಿಸಿದ್ದೇವೆ. ಪ್ರಸ್ತಾವನೆಯನ್ನು ಅಂಗೀಕರಿಸಲಾಗಿದೆ ಅದರಂತೆ ಇಂದು ಬೆಳಿಗ್ಗೆ 6:30 ಕ್ಕೆ, ನಾನು ನನ್ನ ಶಾಸಕರೊಂದಿಗೆ. ಮತ್ತು ಪುರಿ ಸಂಸದರಾದ ಸಂಬಿತ್ ಪಾತ್ರ, ದೇವಾಲಯಕ್ಕೆ ಭೇಟಿ ನೀಡಿ ‘ಮಂಗಲ ಆರತಿ’ಪೂಜೆಯಲ್ಲಿ ಭಾಗಿಯಾಗಿ ದೇವಳದ ನಾಲ್ಕು ಬಾಗಿಲು ತೆರೆಯುವ ಪ್ರಕ್ರಿಯೆಯಲ್ಲಿ ಭಾಗಿಯಾದೆವು ಎಂದು ಹೇಳಿದರು.

ಜಗನ್ನಾಥ ದೇವಾಲಯದ ಅಭಿವೃದ್ಧಿಗೆ ಮತ್ತು ಇತರ ಕೆಲಸಗಳಿಗೆ, ನಾವು ಮುಂದಿನ ರಾಜ್ಯ ಬಜೆಟ್ ನಲ್ಲಿ ನಿಧಿಯನ್ನು ಮೀಸಲಿಡಲಿದ್ದೇವೆ ಎಂದು ಹೇಳಿದರು

Advertisement

ಕರೋನಾ ಸಮಯದಲ್ಲಿ ದೇವಾಲಯದ ಬಾಗಿಲು ಮುಚ್ಚಲಾಗಿತ್ತು:
ದೇವಸ್ಥಾನದ ಎಲ್ಲಾ ದ್ವಾರಗಳನ್ನು ತೆರೆಯುವುದು ಬಿಜೆಪಿಯ ಚುನಾವಣಾ ಪ್ರಣಾಳಿಕೆಯ ಭರವಸೆಗಳಲ್ಲಿ ಒಂದಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು. ಉಳಿದ ದ್ವಾರಗಳನ್ನು ಮುಚ್ಚಿದ್ದರಿಂದ ಭಕ್ತರು ತೊಂದರೆ ಅನುಭವಿಸಿದರು. ವಾಸ್ತವವಾಗಿ, ಹಿಂದಿನ ಬಿಜೆಡಿ ಸರ್ಕಾರವು ಕೋವಿಡ್ -19 ಸಾಂಕ್ರಾಮಿಕದ ನಂತರ ದೇವಾಲಯದ ಎಲ್ಲಾ ನಾಲ್ಕು ದ್ವಾರಗಳನ್ನು ಮುಚ್ಚಿತ್ತು. ಭಕ್ತರು ಒಂದೇ ದ್ವಾರದ ಮೂಲಕ ಪ್ರವೇಶಿಸಬೇಕಾಗಿತ್ತು ಇದರಿಂದ ಭಕ್ತರಿಗೆ ತೊಂದರೆ ಕೂಡ ಆಗುತ್ತಿತ್ತು ಸಾಕಷ್ಟು ಬಾರಿ ಇತರ ಬಾಗಿಲು ತೆರೆಯಲು ಆಗ್ರಹ ಮಾಡಿದರೂ ಇದುವರೆಗೆ ಸಾಧ್ಯವಾಗಲಿಲ್ಲ ಇದೀಗ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಮೊದಲ ಭರವಸೆಯಾಗಿ ದೇವಾಲಯದ ನಾಲ್ಕು ಬಾಗಿಲುಗಳನ್ನು ತೆರೆಯಲಾಯಿತು.

ದೇವಸ್ಥಾನ ನಿರ್ವಹಣೆಗೆ 500 ಕೋಟಿ ರೂ. ನಿಧಿ
ದೇವಸ್ಥಾನವನ್ನು ಸಂರಕ್ಷಿಸಲು ಮತ್ತು ಅದನ್ನು ಉತ್ತಮವಾಗಿ ನಿರ್ವಹಿಸಲು 500 ಕೋಟಿ ರೂಪಾಯಿ ನಿಧಿ ರಚಿಸಲು ಸಚಿವ ಸಂಪುಟ ನಿರ್ಧರಿಸಿದೆ ಎಂದು ಸಿಎಂ ಮೋಹನ್ ಚರಣ್ ಮಾಝಿ ಹೇಳಿದ್ದಾರೆ.

ಶೀಘ್ರದಲ್ಲೇ ಭತ್ತದ ಬೆಂಬಲ ಬೆಲೆ ಹೆಚ್ಚಳ:
ಭತ್ತದ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಪ್ರತಿ ಕ್ವಿಂಟಲ್‌ಗೆ 3100 ರೂ.ಗೆ ಹೆಚ್ಚಿಸಲು ರಾಜ್ಯ ಸರ್ಕಾರವು ಕ್ರಮಕೈಗೊಳ್ಳಲಿದ್ದು, ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಲು ಸಂಬಂಧಿಸಿದ ಇಲಾಖೆಯನ್ನು ಕೋರಲಾಗಿದೆ ಎಂದು ಮಾಝಿ ಹೇಳಿದರು. ಭತ್ತದ ಎಂಎಸ್‌ಪಿಯನ್ನು ಪ್ರತಿ ಕ್ವಿಂಟಲ್‌ಗೆ 3100 ರೂ.ಗೆ ಹೆಚ್ಚಿಸುವ ಪ್ರಸ್ತಾವನೆಯನ್ನು ಅನುಷ್ಠಾನಗೊಳಿಸಲು ಅತಿ ಶೀಘ್ರದಲ್ಲಿ ಸಮಿತಿ ರಚಿಸಲಾಗುವುದು ಎಂದು ಹೇಳಿದರು.

100 ದಿನಗಳಲ್ಲಿ ಸುಭದ್ರಾ ಯೋಜನೆ ಜಾರಿ:
ಮಹಿಳಾ ಸಬಲೀಕರಣ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಹಿಂದಿನ ಬಿಜೆಡಿ ಸರ್ಕಾರದ ಪ್ರಯತ್ನಗಳು ವಿಫಲವಾಗಿವೆ, ಆದ್ದರಿಂದ ಹೊಸ ಸರ್ಕಾರವು 100 ದಿನಗಳಲ್ಲಿ ಸುಭದ್ರಾ ಯೋಜನೆಯನ್ನು ಜಾರಿಗೆ ತರಲಿದ್ದು, ಇದರ ಅಡಿಯಲ್ಲಿ ಮಹಿಳೆಯರಿಗೆ 50,000 ರೂಪಾಯಿ ನಗದು ಚೀಟಿ ಸಿಗುತ್ತದೆ ಎಂದು ಮಾಝಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next