ಭುವನೇಶ್ವರ್: ಕೋವಿಡ್ 19 ಸೋಂಕು ತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಒಡಿಶಾ ಸರ್ಕಾರ ರಾಜ್ಯದಲ್ಲಿ 14 ದಿನಗಳ ಲಾಕ್ ಡೌನ್ ಘೋಷಿಸಿದ್ದು, ಇದು ಮೇ 5ರಿಂದ ಜಾರಿಯಾಗಲಿದೆ ಎಂದು ಭಾನುವಾರ(ಮೇ 02) ತಿಳಿಸಿದೆ.
ಇದನ್ನೂ ಓದಿ:ದೀದಿಯೇ ಸಾಕಿದಾ ಗಿಣಿ ಹದ್ದಾಗಿ ಕುಕ್ಕುತ್ತಾ : ನಂದಿಗ್ರಾಮದಲ್ಲಿ ಮಮತಾಗೆ ಭಾರೀ ಹಿನ್ನಡೆ..!
ಮೇ 5ರಿಂದ 19ರವರೆಗೆ ಒಟ್ಟು 14 ದಿನಗಳ ಕಾಲ ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಲ್ಲಿರಲಿದೆ. ಲಾಕ್ ಡೌನ್ ಸಂದರ್ಭದಲ್ಲಿ ಜನರು 500 ಮೀಟರ್ ವ್ಯಾಪ್ತಿಯೊಳಗೆ ಬೆಳಗ್ಗೆ 7ರಿಂದ 12ಗಂಟೆಯೊಳಗೆ ತರಕಾರಿ ಸೇರಿದಂತೆ ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶ ನೀಡಿರುವುದಾಗಿ ಒಡಿಶಾ ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಹೇಳಿದೆ.
ಲಾಕ್ ಡೌನ್ ಸಂದರ್ಭದಲ್ಲಿ ಆರೋಗ್ಯ ಸೇವೆ ಸೇರಿದಂತೆ ತುರ್ತು ಸೇವೆಗಳಿಗೆ ಯಾವುದೇ ನಿರ್ಬಂಧ ವಿಧಿಸಿಲ್ಲ ಎಂದು ತಿಳಿಸಿದೆ. ಕಳೆದ 24ಗಂಟೆಗಳಲ್ಲಿ ಒಡಿಶಾದಲ್ಲಿ 8,105 ಕೋವಿಡ್ ಪ್ರಕರಣ ಹಾಗೂ 14 ಮಂದಿ ಸಾವನ್ನಪ್ಪಿದ್ದರು.
ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ ಕೋವಿಡ್ ಸೋಂಕಿನಿಂದ 3,689 ಜನರು ಸಾವನ್ನಪ್ಪಿದ್ದು, 3,92,488 ಕೋವಿಡ್ 19 ಪ್ರಕರಣ ಪತ್ತೆಯಾಗಿದೆ. ಇದರೊಂದಿಗೆ ದೇಶದಲ್ಲಿ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 1,95,57,457ಕ್ಕೆ ಏರಿಕೆಯಾಗಿದೆ.