ಹೊಸದಿಲ್ಲಿ: ವರ್ಷಾಂತ್ಯದ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ತಂಡಗಳ ಆಯ್ಕೆಗೆ ಐಸಿಸಿಯ ಅಂತಿಮ ದಿನಾಂಕ ಪ್ರಕಟ ಗೊಂಡಿದೆ. ಎಲ್ಲ 10 ತಂಡಗಳು ಸೆಪ್ಟಂಬರ್ 5ರ ಒಳಗೆ ತಂಡಗಳ ಯಾದಿಯನ್ನು ಕಳುಹಿಸುವಂತೆ ಸೂಚಿಸಿದೆ. ಆದರೆ ಇದರಿಂದ ಆತಿಥೇಯ ಭಾರತಕ್ಕೆ ಕೆಲವು ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ.
ತಂಡದ ಪ್ರಕಟನೆಗೆ ಉಳಿದಿರುವುದು ಇನ್ನೊಂದು ತಿಂಗಳು ಮಾತ್ರ. ಅಷ್ಟರಲ್ಲಿ ಅತ್ಯಂತ ಬಲಿಷ್ಠವಾದ ತಂಡವನ್ನು ಭಾರತ ಪ್ರಕಟಿಸಬೇಕಿದೆ. ತಂಡದ ಅನೇಕ ಸ್ಟಾರ್ ಕ್ರಿಕೆಟಿಗರು ಗಾಯದ ಸಮಸ್ಯೆಗೆ ಒಳಗಾಗಿದ್ದು, ಅಷ್ಟರಲ್ಲಿ ಇವರು ಫಿಟ್ ಆಗಿ ವಿಶ್ವಕಪ್‌ಗೆ ಲಭ್ಯರಾಗಬಹುದೇ ಎಂಬ ದೊಡ್ಡ ಪ್ರಶ್ನೆಯೊಂದು ಭಾರತವನ್ನು ಕಾಡಲಾರಂಭಿಸಿದೆ.
ಕೆ.ಎಲ್. ರಾಹುಲ್ ಈಗಾಗಲೇ ಅಭ್ಯಾಸ ಆರಂಭಿಸಿರುವುದರಿಂದ ಏಷ್ಯಾ ಕಪ್ ಮೂಲಕ ತಂಡಕ್ಕೆ ಮರಳುವ ವಿಶ್ವಾಸವಿದೆ. ಹಾಗೆಯೇ ಶ್ರೇಯಸ್ ಅಯ್ಯರ್ ಕೂಡ ಆಡಲಿಳಿಯಬಹುದು. ಈ ಕೂಟದಲ್ಲಿ ಭಾರತ ತನ್ನ ಮೊದಲ ಪಂದ್ಯವನ್ನು ಆಡುವುದು ಸೆ. 2ರಂದು. ಎದುರಾಳಿ ಪಾಕಿಸ್ಥಾನ. ಕೇವಲ ಈ ಒಂದು ಪಂದ್ಯದ ಮೂಲಕ ಕ್ರಿಕೆಟಿಗರ ಫಾರ್ಮ್ ನಿರ್ಧರಿಸಲಾಗದು. ಈ ಪಂದ್ಯ ಮುಗಿದು ಮೂರೇ ದಿನದಲ್ಲಿ ಭಾರತದ ವಿಶ್ವಕಪ್ ತಂಡ ಪ್ರಕಟಗೊಳ್ಳಬೇಕಿದೆ.
ಅಪಘಾತದಿಂದ ಚೇತರಿಸಿಕೊಂಡ ರಿಷಭ್ ಪಂತ್ ಕೂಡ ಅಭ್ಯಾಸ ಆರಂಭಿಸಿದ್ದಾರೆ. ಆದರೆ ಇವರು ವಿಶ್ವಕಪ್‌ನಲ್ಲಿ ಆಡುವ ಸಾಧ್ಯತೆ ಇಲ್ಲ.
ಬದಲಾವಣೆಗೆ ಅವಕಾಶ
ವಿಶ್ವಕಪ್ ತಂಡಗಳನ್ನು ಸೆ. 5ರೊಳಗೆ ಅಂತಿಮಗೊಳಿಸಬೇಕಾದರೂ ಇದನ್ನು ಬದಲಿಸಲು ಐಸಿಸಿ ಅವಕಾಶ ಕಲ್ಪಿಸಿದೆ. ಆದರೆ ಈ ಬದಲಾವಣೆಯನ್ನು ವಿಶ್ವಕಪ್ ಆರಂಭಕ್ಕೆ ಒಂದು ವಾರ ಮುಂಚಿತವಾಗಿ ಮಾಡಬೇಕು. ಅನಂತರ ಗಾಯದ ಸಮಸ್ಯೆ ತಲೆದೋರಿದರಷ್ಟೇ ಆಟಗಾರರ ಬದಲಾವಣೆಗೆ ಅವಕಾಶವಿರಲಿದೆ. ಇದಕ್ಕೆ ಐಸಿಸಿ ತಾಂತ್ರಿಕ ಸಮಿತಿಯ ಒಪ್ಪಿಗೆ ಅಗತ್ಯ.