ದುಬಾೖ: ಏಕದಿನ ಬ್ಯಾಟಿಂಗ್ ರ್‍ಯಾಂಕಿಂಗ್‌ನಲ್ಲಿ ಭಾರತದ ಭರವಸೆಯ ಆರಂಭಕಾರ ಶುಭಮನ್ ಗಿಲ್ ದ್ವಿತೀಯ ಸ್ಥಾನಕ್ಕೆ ಏರಿದ್ದಾರೆ. ಇದು ಅವರ ಜೀವನಶ್ರೇಷ್ಠ ರ್‍ಯಾಂಕಿಂಗ್ ಆಗಿದೆ. ಹಾಗೆಯೇ ವಿರಾಟ್ ಕೊಹ್ಲಿ ಮರಳಿ ಟಾಪ್-10 ಯಾದಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅಗ್ರ ಹತ್ತರಲ್ಲಿರುವ ಭಾರತದ ಮತ್ತೋರ್ವ ಆಟಗಾರ ರೋಹಿತ್ ಶರ್ಮ.
ಪಾಕಿಸ್ಥಾನ ವಿರುದ್ಧದ ಏಷ್ಯಾ ಕಪ್ ಪಂದ್ಯದಲ್ಲಿ 58 ರನ್ ಬಾರಿಸುವುದರ ಜತೆಗೆ ಆರಂಭಿಕ ವಿಕೆಟಿಗೆ 121 ರನ್ ಒಟ್ಟುಗೂಡಿಸಿದ ಸಾಧನೆ ಶುಭಮನ್ ಗಿಲ್ ಅವರದಾಗಿತ್ತು. ಇದರಿಂದ ಅವರು ಮೂರರಿಂದ 2ನೇ ಸ್ಥಾನಕ್ಕೇರಿದರು. ಕೊಹ್ಲಿ ಮತ್ತು ರೋಹಿತ್ ಅವರದು 2 ಸ್ಥಾನಗಳ ಜಿಗಿತ. ಇವರಿಬ್ಬರು ಕ್ರಮವಾಗಿ 8ನೇ ಹಾಗೂ 9ನೇ ಸ್ಥಾನದಲ್ಲಿದ್ದಾರೆ.
ರೋಹಿತ್ ಶರ್ಮ ಪಾಕಿಸ್ಥಾನ ಮತ್ತು ಶ್ರೀಲಂಕಾ ವಿರುದ್ಧವೂ ಅರ್ಧ ಶತಕ ಬಾರಿಸಿದ್ದಾರೆ. ವಿರಾಟ್ ಕೊಹ್ಲಿ ಪಾಕಿಸ್ಥಾನ ವಿರುದ್ಧ ಅಜೇಯ 122 ರನ್ ಹೊಡೆದಿದ್ದರು.
ಪಾಕಿಸ್ಥಾನ ತಂಡದ ನಾಯಕ ಬಾಬರ್ ಆಜಂ 863 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಶುಭಮನ್ ಗಿಲ್ 759 ಅಂಕ ಹೊಂದಿದ್ದಾರೆ. ದಕ್ಷಿಣ ಆಫ್ರಿಕಾದ ರಸ್ಸಿ ವಾನ್ ಡರ್ ಡುಸೆನ್ ತೃತೀಯ ಸ್ಥಾನದಲ್ಲಿದ್ದಾರೆ (745).
ಕುಲದೀಪ್ 4 ಸ್ಥಾನ ನೆಗೆತ
ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ಕುಲದೀಪ್ ಯಾದವ್ 5 ಸ್ಥಾನ ಮೇಲೇರಿ 7ನೇ ಸ್ಥಾನಕ್ಕೆ ಬಂದಿದ್ದಾರೆ. ಮೊಹಮ್ಮದ್ ಸಿರಾಜ್ ಕೂಡ ಟಾಪ್-10 ಯಾದಿಯಲ್ಲಿದ್ದಾರೆ (9).