Advertisement

ಅ. 29: ಅರ್ಜಿ ವಿಲೇವಾರಿಗೆ ವಿಶೇಷ ಸಭೆ

01:35 AM Oct 17, 2021 | Team Udayavani |

ಪುತ್ತೂರು: ಗ್ರಾಮ ವಾಸ್ತವ್ಯದಲ್ಲಿ ಗ್ರಾಮಸ್ಥರು ಸಲ್ಲಿಸಿರುವ ವಿವಿಧ ಸಮಸ್ಯೆಗಳ ಅರ್ಜಿಗಳನ್ನು ಇತ್ಯರ್ಥಗೊಳಿಸಲು ಅ. 29ರಂದು ವಿಶೇಷ ಸಭೆ ನಡೆಸಲಾಗುವುದು. ಆಯಾ ಇಲಾಖೆಗಳು ಈ ಅವಧಿಯೊಳಗೆ ಅರ್ಜಿಗಳನ್ನು ಪರಿಶೀಲಿಸಿ ಜನರಿಗೆ ನ್ಯಾಯ ಒದಗಿಸುವ ಪ್ರಯತ್ನ ಮಾಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಅಂಗಾರ ಹೇಳಿದರು.

Advertisement

ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ನೇತೃತ್ವದಲ್ಲಿ ಶನಿವಾರ ಅಮರಮುಟ್ನೂರು ಮತ್ತು ಅಮರ ಪಟ್ನೂರು ಗ್ರಾಮಗಳಲ್ಲಿ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಶಕ್ತರ ಮನೆಗೆ ಲಸಿಕೆ
ಜಿಲ್ಲಾಧಿಕಾರಿ ಮಾತನಾಡಿ, ಜಿಲ್ಲೆಯಲ್ಲಿ ಎಲ್ಲರೂ ಕೋವಿಡ್‌ ಲಸಿಕೆ ಪಡೆಯಬೇಕು ಎಂಬುದು ನಮ್ಮ ಗುರಿ. ನಡೆದಾಡಲು ಅಸಾಧ್ಯವಾದ ಅಶಕ್ತರ ಮನೆಗೇ ತೆರಳಿ ಲಸಿಕೆ ನೀಡಲು ಉದ್ದೇಶಿಸಲಾಗಿದೆ ಎಂದರು.

ಕೋವಿಡ್‌ ಮುಕ್ತ ಸುಳ್ಯ
ಸುಳ್ಯದಲ್ಲಿ ಕೇವಲ ಒಂದು ಕೊರೊನಾ ಸ‌ಕ್ರಿಯ ಪ್ರಕರಣ ಇದ್ದು, ಕೋವಿಡ್‌ ಮುಕ್ತ ತಾಲೂಕು ಆಗಿ ಸುಳ್ಯವನ್ನು ಘೋಷಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಗ್ರಾಮ ವಾಸ್ತವ್ಯದಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಪರಿಶೀಲಿಸಿ ಕಾನೂನು ವ್ಯಾಪ್ತಿಯಲ್ಲಿ ಗರಿಷ್ಠ ರೀತಿಯಲ್ಲಿ ಸ್ಪಂದಿಸಲಾಗುವುದು ಎಂದು ತಿಳಿಸಿದರು.

ಅಮರಮುಟ್ನೂರು ಗ್ರಾ.ಪಂ. ಅಧ್ಯಕ್ಷೆ ಪದ್ಮಪ್ರಿಯಾ, ಭೂದಾಖಲೆಗಳ ಜಿಲ್ಲಾ ಉಪನಿರ್ದೇಶಕ ನಿರಂಜನ್‌, ಜಿ.ಪಂ. ಯೋಜನಾ ನಿರ್ದೇಶಕ ಎಚ್‌.ಆರ್‌. ನಾಯಕ್‌, ತಹಶೀಲ್ದಾರ್‌ ಅನಿತಾಲಕ್ಷ್ಮೀ ಉಪಸ್ಥಿತರಿದ್ದರು. ಪುತ್ತೂರು ಎಸಿ ಡಾ| ಯತೀಶ್‌ ಉಳ್ಳಾಲ್‌ ಸ್ವಾಗತಿಸಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಎನ್‌. ಭವಾನಿಶಂಕರ ವಂದಿಸಿದರು. ಅಚ್ಯುತ ನಿರೂಪಿಸಿದರು.

Advertisement

ಇದನ್ನೂ ಓದಿ:ಜೆಡಿಎಸ್ ಪಕ್ಷದಲ್ಲಿ ಅಲ್ಪಸಂಖ್ಯಾತರನ್ನು ಸಿಎಂ ಸ್ಥಾನದ ಅಭ್ಯರ್ಥಿಯೆಂದು ಘೋಷಣೆ ಮಾಡಲಿ

ಭೂ ದಾಖಲೆ ಸಮಸ್ಯೆ ಪರಿಹಾರಕ್ಕೆ ಆದ್ಯತೆ
ಏಕ ಸರ್ವೇ ನಂಬರ್‌ನಲ್ಲಿ ಹತ್ತಾರು ಜನರಿಗೆ ಭೂ ಹಂಚಿಕೆಯಾದಾಗ ಆ ಸರ್ವೇ ನಂಬರ್‌ನ ವಿಸ್ತೀರ್ಣ ಹೆಚ್ಚು ಅಥವಾ ಕಡಿಮೆ ಬರುವ ಸಮಸ್ಯೆ ಇದ್ದು ಅದನ್ನು ನಿವಾರಿಸುವುದಕ್ಕೆ ಸರಕಾರ ಮುಂದಡಿ ಇಟ್ಟಿದೆ. ಡೀಮ್ಡ್ ಅರಣ್ಯ ಸಮಸ್ಯೆ, ಭಾಗಶಃ ಅರಣ್ಯ ಪ್ರದೇಶಕ್ಕೆ ಸಂಬಂಧಿಸಿರುವ ಸಮಸ್ಯೆ ಪರಿಹರಿಸಲು ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಸಚಿವ ಎಸ್‌. ಅಂಗಾರ ಅವರು ಹೇಳಿದರು.

ಅಡಿಕೆ ಹಳದಿ ರೋಗ: 18 ಕೋ.ರೂ. ಪ್ಯಾಕೆಜ್‌ಗೆ ಪ್ರಸ್ತಾವನೆ
ಕರಾವಳಿ ಹಾಗೂ ಮಲೆನಾಡಿನ ಅಡಿಕೆ ತೋಟ ಗಳಲ್ಲಿ ಕಂಡುಬಂದಿರುವ ಹಳದಿ ಎಲೆ ರೋಗಕ್ಕೆ18 ಕೋ.ರೂ. ಪ್ಯಾಕೇಜ್‌ ನೀಡುವಂತೆ ರಾಜ್ಯ ಸರಕಾರಕ್ಕೆ ತೋಟಗಾರಿಕಾ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಸಲಾಗಿದ್ದು ಶೀಘ್ರ ಮಂಜೂರು ಗೊಳ್ಳುವ ನಿರೀಕ್ಷೆ ಇದೆ ಎಂದು ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರು ತಿಳಿಸಿದರು.

ಅಡಿಕೆ ಬೆಳೆಗಾರರೊಬ್ಬರ ಅಹವಾಲಿಗೆ ಉತ್ತರಿಸಿದ ಅವರು, 3 ಸಾವಿರ ಎಕ್ರೆ ಪ್ರದೇಶದಲ್ಲಿ ಹಳದಿ ಎಲೆ ರೋಗ ಅಧ್ಯಯನ ಹಾಗೂ ಪರ್ಯಾಯ ಬೆಳೆಗಳ ಬಗ್ಗೆ ಪ್ಯಾಕೆಜ್‌ನಲ್ಲಿ ಪ್ರಸ್ತಾವಿಸಲಾಗಿದೆ. ರೋಗಬಾಧಿತ ಅಡಿಕೆ ಮರಗಳನ್ನು ಕಡಿದು ಅಲ್ಲಿ ಬದಲಿ ಬೆಳೆ ಬೆಳೆಯಲು ಈ ಪ್ಯಾಕೇಜ್‌ ನೆರವಾಗಲಿದೆ ಎಂದು ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next