Advertisement
ಈ ಮನೋರೋಗವು ಈ ಕೆಳಗಿನ ಲಕ್ಷಣಗಳನ್ನು ಹೊಂದಿರುತ್ತದೆ
- ಪುನರಾವರ್ತನೆಯಾಗುವ, ಗೊಂದಲವನ್ನು ಉಂಟು ಮಾಡುವ, ಚಿಂತೆಗೀಡು ಮಾಡುವ ಆಲೋಚನೆಗಳು/ಚಿತ್ರಗಳು – ಇವುಗಳನ್ನು ನಿಲ್ಲಿಸಲು ಕಷ್ಟವಾಗುತ್ತದೆ ಮತ್ತು ಇವುಗಳಿಂದಾಗಿ ಆತಂಕ ಉಂಟಾಗುತ್ತದೆ (ಗೀಳು).
- ಈ ಆಲೋಚನೆಗಳನ್ನು ಕಡಿಮೆಗೊಳಿಸುವುದಕ್ಕಾಗಿ ಪುನರಾವರ್ತಿತ ಆಲೋಚನೆಗಳು ಅಥವಾ ಕ್ರಿಯೆಗಳು ಉಂಟಾಗಬಹುದು; ಇವುಗಳನ್ನು ಕೂಡ ನಿಯಂತ್ರಿಸುವುದು ಕಷ್ಟವಾಗುತ್ತದೆ (ಒತ್ತಾಯ).
- ಆಲೋಚನೆಗಳು ಲೈಂಗಿಕ ಸಂಬಂಧಿ, ದೇವನಿಂದನಾತ್ಮಕ, ಆಕ್ರಮಣಕಾರಿ, ವಿಷಮಯ ಅಥವಾ ಸಂಶಯಾತ್ಮಕ ಅಥವಾ ಇವುಗಳ ಸಂಯೋಜನೆಯ ಸ್ವರೂಪದ್ದಾಗಿರಬಹುದು.
- ಒತ್ತಾಯಗಳು ಸಾಮಾನ್ಯವಾಗಿ ಗೀಳುಗಳಿಗೆ ಸಂಬಂಧಿಸಿರುತ್ತವೆ ಮತ್ತು ಮತ್ತೆ ಮತ್ತೆ ತೊಳೆಯುವುದು, ಪರಿಶೀಲಿಸುವುದು, ಪ್ರಾರ್ಥಿಸುವುದು ಅಥವಾ ಇವುಗಳ ಸಂಯೋಜನೆಯಾಗಿರಬಹುದು.
- ಈ ಲಕ್ಷಣಗಳು ಸಾಮಾನ್ಯವಾಗಿ ದಿನಕ್ಕೆ 1 ತಾಸಿಗಿಂತ ಹೆಚ್ಚು ಸಮಯ ಕಾಣಿಸಿಕೊಳ್ಳುತ್ತವೆ ಹಾಗೂ ಗಮನಾರ್ಹ ಚಟುವಟಿಕೆ ಲೋಪ ಮತ್ತು ಒತ್ತಡಕ್ಕೆ ಕಾರಣವಾಗುತ್ತವೆ.
- ರೋಗಿಗಳು ಸ್ವತಃ ಈ ಆಲೋಚನೆಗಳು ಮತ್ತು ಕ್ರಿಯೆಗಳು ಅತಿಯಾದವು ಮತ್ತು ಅಕಾರಣವಾಗಿರುವಂಥವು ಎಂಬುದನ್ನು ಗುರುತಿಸಲು ಶಕ್ತರಾಗಿರುತ್ತಾರೆ; ಆದರೂ ಅವರಿಗೆ ಅವುಗಳನ್ನು ನಿಲ್ಲಿಸಲು ಅಥವಾ ನಿಯಂತ್ರಿಸಲು ಸಾಧ್ಯವಾಗುವುದಿಲ್ಲ.
Related Articles
Advertisement
ಈ ಆಲೋಚನೆಗಳು ಎಷ್ಟು ಒತ್ತಡದಾಯಕ ಮತ್ತು ಪದೇಪದೆ ಮೂಡುತ್ತವೆ ಎಂದರೆ ಕೈಗಳು ಶುಚಿಯಾಗಿವೆ ಎಂಬ ಭಾವನೆ ಮೂಡುವುದಕ್ಕೆ ಹಲವು ಬಾರಿ ಕೈಗಳನ್ನು ತೊಳೆಯುವಂತೆ ಆಗುತ್ತದೆ. ಆಕೆ ಕೈಗಳನ್ನು ತೊಳೆಯುತ್ತ ಬಾತ್‌ರೂಮ್‌ನಲ್ಲಿ ಗಂಟೆಗಟ್ಟಲೆ ಕಳೆಯುತ್ತಾಳೆ, ಇದು ಅತಿಯಾಯಿತು ಎಂಬುದು ಸ್ವತಃ ಆಕೆಗೆ ತಿಳಿದಿದ್ದರೂ ಇದನ್ನು ನಿಯಂತ್ರಿಸುವುದಕ್ಕೆ ಆಕೆಗೆ ಸಾಧ್ಯವಾಗುತ್ತಿಲ್ಲ.
ಇದರಿಂದಾಗಿ ಆಕೆಗೆ ದೈನಂದಿನ ಕೆಲಸಕಾರ್ಯಗಳನ್ನು ಪೂರ್ತಿಗೊಳಿಸುವುದಕ್ಕೆ ಸಾಧ್ಯವಾಗುತ್ತಿಲ್ಲ ಮತ್ತು ಪದೇಪದೆ ಕೈಗಳನ್ನು ತೊಳೆಯುವುದರಿಂದ ಕೈಗಳ ಚರ್ಮ ಎದ್ದು ಬರುವಂತಾಗಿದೆ. ಈ ಮೇಲಿನ ತೊಂದರೆಗಳಿಂದ ಆಕೆ ವೈದ್ಯಕೀಯ ಸಹಾಯವನ್ನು ಯಾಚಿಸಿದ್ದಾಳೆ. ಇದಕ್ಕೆ ಸೂಕ್ತವಾದ ಔಷಧೋಪಚಾರ ಆರಂಭಿಸಿದ ಬಳಿಕ ಈ ಲಕ್ಷಣಗಳ ಮೇಲೆ ಅನಿತಾ ಸಾಕಷ್ಟು ನಿಯಂತ್ರಣ ಹೊಂದುವುದು ಸಾಧ್ಯವಾಗಿದೆ ಮತ್ತು ಹಿಂದಿನಂತೆ ಸಹಜವಾಗಿ ಇರುವುದಕ್ಕೆ ಸಾಧ್ಯವಾಗಿದೆ.
ಗೀಳು ಮನೋರೋಗಕ್ಕೆ ಚಿಕಿತ್ಸೆ
ಗೀಳು ಮನೋರೋಗವನ್ನು ಹೊಂದಿರುವ ರೋಗಿಗಳನ್ನು ಬಾಧಿಸುತ್ತಿರುವ ಗೀಳುಗಳು ಮತ್ತು ಒತ್ತಾಯಗಳನ್ನು ಅರ್ಥ ಮಾಡಿಕೊಳ್ಳಲು ಮತ್ತು ಲಕ್ಷಣಗಳ ತೀವ್ರತೆಯನ್ನು ವಿಶ್ಲೇಷಿಸಲು ವಿವರವಾದ ಪರಿಶೀಲನೆಯನ್ನು ನಡೆಸಬೇಕಾಗುತ್ತದೆ. ಕೆಲವು ಗೀಳುಗಳಿಗೆ ಸಂಬಂಧಿಸಿ ತಪ್ಪಿತಸ್ಥ ಮತ್ತು ದುಃಖ ಭಾವನೆ ಉಂಟಾಗುವುದರಿಂದ ಖನ್ನತೆ ಮತ್ತು ಆತಂಕವನ್ನೂ ವಿಶ್ಲೇಷಿಸಬೇಕಾಗುತ್ತದೆ. ರೋಗಿ ಮತ್ತು ಅವರ ಕುಟುಂಬಕ್ಕೆ ಈ ಕಾಯಿಲೆಯ ಬಗ್ಗೆ ವಿವರವಾದ ಮಾಹಿತಿ, ವಿವರಣೆಯನ್ನು ನೀಡಲಾಗುತ್ತದೆ.
ಗೀಳು ಮನೋರೋಗಕ್ಕೆ ಮುಖ್ಯವಾದ ಚಿಕಿತ್ಸೆಯು ಔಷಧ (ಎಸ್ ಎಸ್‌ಆರ್‌ಐ ಗುಂಪು) ಮತ್ತು ಕೊಗ್ನಿಟಿವ್ ಬಿಹೇವಿಯರಲ್ ಥೆರಪಿ ಆಗಿರುತ್ತದೆ. ಈ ಎರಡೂ ಈ ಮನೋರೋಗಕ್ಕೆ ಪರಿಣಾಮಕಾರಿ ಚಿಕಿತ್ಸೆಯಾಗಿರುವುದು ಸಾಬೀತಾಗಿದೆ. ಆದರೆ ಖನ್ನತೆ ಮತ್ತು ಆತಂಕದಂತೆ ಗೀಳು ಮನೋರೋಗವಲ್ಲ; ಇದು ಗುಣ ಹೊಂದಲು 2-3 ತಿಂಗಳುಗಳು ಬೇಕಾಗುತ್ತವೆ. ಗೀಳು ಮನೋರೋಗಕ್ಕೆ ಸಾಮಾನ್ಯವಾಗಿ ನೀಡಲಾಗುವ ಔಷಧಗಳು ಎಂದರೆ ಎಸಿಟಲೊಪ್ರಾಮ್, ಫ್ಲುಕ್ಸೆಟೀನ್, ಸೆಟ್ರಾಲಿನ್ ಮತ್ತು ಕ್ಲೊಮಿಪ್ರಾಮಿನ್. ಗೀಳು ಮನೋರೋಗಕ್ಕೆ ತುತ್ತಾಗಿರುವವರು ಬೇಗನೆ ವೈದ್ಯರನ್ನು ಕಂಡು ಚಿಕಿತ್ಸೆಗೆ ಒಳಪಟ್ಟರೆ ಲಕ್ಷಣಗಳನ್ನು ಗುಣಪಡಿಸಿಕೊಂಡು ಒತ್ತಡವಿಲ್ಲದ ಸಹಜ ಸಾಮಾನ್ಯ ಜೀವನವನ್ನು ನಡೆಸಬಹುದಾಗಿದೆ.
ಗೀಳು ಮನೋರೋಗದ ಬಗ್ಗೆ ತಪ್ಪು ಕಲ್ಪನೆಗಳು.
- ಕೆಲವೊಮ್ಮೆ ಬಹಳ ಶಿಸ್ತಿನ, ಅಚ್ಚುಕಟ್ಟು ಸ್ವಭಾವವನ್ನು ಹೊಂದಿದ್ದು, ಎಲ್ಲವೂ ಸರಿಯಾಗಿ, ಚೆನ್ನಾಗಿ ಇರಬೇಕು ಎಂದು ಬಯಸುವ ವ್ಯಕ್ತಿಯನ್ನು ವಿವರಿಸಲು ಇದನ್ನು ತಪ್ಪಾಗಿ ಉಪಯೋಗಿಸಲಾಗುತ್ತದೆ. ಒಸಿಡಿ ಅಥವಾ ಗೀಳು ಮನೋರೋಗವು ಒಂದು ಮಾನಸಿಕ ಅನಾರೋಗ್ಯವಾಗಿದ್ದು, ಒತ್ತಡ ಮತ್ತು ಕಾರ್ಯಚಟುವಟಿಕೆಗಳಲ್ಲಿ ಕುಸಿತವನ್ನು ಉಂಟುಮಾಡುತ್ತದೆ, ಇದು ವ್ಯಕ್ತಿಯ ಸ್ವಭಾವಕ್ಕೆ ಸಂಬಂಧಿಸಿದ್ದಲ್ಲ.
- ಕೆಲವೊಮ್ಮೆ ಈ ಮನೋರೋಗವನ್ನು ಹೊಂದಿರುವವರು ಕೆಲವು ಸನ್ನಿವೇಶ ಅಥವಾ ಸ್ಥಳಗಳನ್ನು ಒತ್ತಾಯಪೂರ್ವಕವಾಗಿ ನಿಗ್ರಹಿಸಲು ಪ್ರಯತ್ನಿಸುವ ಮೂಲಕ ಈ ರೋಗದ ಮೇಲೆ ಹೆಚ್ಚು ನಿಯಂತ್ರಣ ಹೊಂದಲು ತೊಡಗುತ್ತಾರೆ. ಆದರೆ ಈ ತಂತ್ರಗಳು ಚಿಕಿತ್ಸೆಯ ಪರಿಣಾಮಕಾರಿ ನಿರ್ವಹಣೆಯಲ್ಲಿ ಸಹಾಯ ಮಾಡಲಾರವು.
- ಗೀಳು ಮನೋರೋಗವು ಶುಚಿಗೊಳಿಸುವುದಕ್ಕೆ ಮಾತ್ರ ಸಂಬಂಧಿಸಿದ್ದಲ್ಲ. ಅತಿಯಾದ ಸಂಶಯ, ಪದೇಪದೆ ಪರಿಶೀಲಿಸುವುದು, ಬೀಗ ಹಾಕುವುದು, ಧರ್ಮ-ದೇವ ನಿಂದಕ ಆಲೋಚನೆಗಳು, ಆಕ್ರಮಣಕಾರಿ ಆಲೋಚನೆಗಳು, ಲೈಂಗಿಕ ಆಲೋಚನೆಗಳು – ಹೀಗೆ ತರಹೇವಾರಿ ವಿಧವಾದ ಲಕ್ಷಣಗಳು ಉಂಟಾಗಬಹುದು. ಸಾಮಾನ್ಯವಾಗಿ ರೋಗಿಗಳು ಒಂದಕ್ಕಿಂತ ಹೆಚ್ಚು ವಿಧವಾದ ಲಕ್ಷಣಗಳನ್ನು ಹೊಂದಿರುತ್ತಾರೆ ಹಾಗೂ ಗೀಳುಗಳು ಮತ್ತು ಒತ್ತಾಯಗಳ ವಿಧ ಮತ್ತು ತೀವ್ರತೆಯನ್ನು ವಿಶ್ಲೇಷಿಸಲು ಕೂಲಂಕಷ ಪರಿಶೀಲನೆಯನ್ನು ನಡೆಸಬೇಕಾಗುತ್ತದೆ. 4. ಗೀಳು ಮನೋರೋಗವು ಚೇತರಿಕೆ ಹೊಂದದೆ ದೀರ್ಘಕಾಲ ಮುಂದುವರಿಯುತ್ತದೆ ಎಂದೂ ನಂಬಲಾಗುತ್ತದೆ. ಇದು ಸರಿಯಲ್ಲ. ಪರಿಣಾಮಕಾರಿ ಚಿಕಿತ್ಸೆಯಿಂದ ರೋಗಿಗಳು ಚೇತರಿಸಿಕೊಳ್ಳುತ್ತಾರೆ ಮತ್ತು ಈ ಚೇತರಿಕೆಯನ್ನು ದೀರ್ಘಕಾಲ ಉಳಿಸಿಕೊಳ್ಳುವುದು ಅವರಿಗೆ ಸಾಧ್ಯವಾಗುತ್ತದೆ.