ಕುಮಟಾ: ಪಟ್ಟಣದ ತಾ.ಪಂ ಸಭಾಭವನದಲ್ಲಿ ಶಾಸಕ ದಿನಕರ ಶೆಟ್ಟಿ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ನಡೆಯಿತು.
ಗೋಕರ್ಣ ಮುಖ್ಯ ರಸ್ತೆಯಲ್ಲಿ ಬಾಡಿಗೆ ಬೈಕ್ ಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಲಾಗುತ್ತಿದ್ದು ಇದರಿಂದ ಸಾರ್ವಜನಿಕರಿಗೆ ಹಾಗೂ ಇತರ ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿರುವ ಕುರಿತು ದೂರು ಕೇಳಿ ಬಂದಿದೆ. ಈ ನಿಟ್ಟಿನಲ್ಲಿ ಪೊಲೀಸ್ ಮತ್ತು ಸಾರಿಗೆ ಇಲಾಖಾ ಅಧಿಕಾರಿಗಳು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
ಬಾಡಿಗೆ ಬೈಕ್ ನಡೆಸುವವರು ಸೂಕ್ತ ದಾಖಲೆ ಪಡೆದು ನಡೆಸುತ್ತಿದ್ದಾರೆಯೇ ಅನ ಧಿಕೃತವೋ ಎಂಬುದನ್ನು ಎಆರ್‌ಟಿಒ ಖುದ್ದು ಪರಿಶೀಲನೆ ನಡೆಸಬೇಕು. ಗೋಕರ್ಣದಲ್ಲಿಯೇ ಸುಮಾರು 4 ಸಾವಿರ ಬಾಡಿಗೆ ಬೈಕ್‌ಗಳಿವೆ. ಬಹುತೇಕ ಎಲ್ಲವೂ ಬೆಂಗಳೂರು ಸಾರಿಗೆ ನೋಂದಣಿ ಹೊಂದಿವೆ. ಪ್ರತಿ ಬೈಕ್‌ಗೆ ಪ್ರವಾಸಿಗರಿಂದ 1 ರಿಂದ 2 ಸಾವಿರ ಹಣ ಪಡೆದು ಒಂದು ದಿನ ಬಾಡಿಗೆ ನೀಡುತ್ತಿದ್ದಾರೆ. ಜತೆಗೆ ನಿಲುಗಡೆಗೆ ಗ್ರಾಪಂನಿಂದ ಅನುಮತಿ ಪತ್ರ ಪಡೆದಿಲ್ಲ. ಕಂಡ ಕಂಡಲ್ಲಿ ರಸ್ತೆ ಮೇಲೆ ಪಾರ್ಕಿಂಗ್ ಮಾಡುತ್ತಿದ್ದಾರೆ. ಇದರಿಂದ ತೀವ್ರ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಗೋಕರ್ಣದಲ್ಲಿ ಸಾರಿಗೆ ಹಾಗೂ ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ, ಅಗತ್ಯ ಕ್ರಮ ವಹಿಸಿ, 15 ದಿನದ ಒಳಗಡೆ ಸಮರ್ಪಕ ಉತ್ತರ ನೀಡಬೇಕು ಎಂದರು.
ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಜಿ.ಪಂ ಮಾಜಿ ಸದಸ್ಯ ಗಜಾನನ ಪೈ ಮಾತನಾಡಿ, ತಾಲೂಕಿನ ಲುಕ್ಕೇರಿ ಭಾಗದಲ್ಲಿ ಕಗ್ಗ ಭತ್ತ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಾರೆ. ಆದರೆ ರೈತರ ಜಮೀನು ನಕಾಶೆಯಲ್ಲಿ ಕರ್ನಾಟಕ ಸರ್ಕಾರ ಎಂದು ನಮೂದಾಗಿದ್ದು, ಇದರಿಂದ ರೈತರಿಗೆ ಬೆಳೆ ಸಾಲ ಪಡೆಯಲು ಸಾಧ್ಯವಾಗುತ್ತಿಲ್ಲ. ರೈತರ ಹೆಸರಿನಲ್ಲಿ ಜಮೀನು ನೋಂದಣಿ ಮಾಡಿಸಲು ಕೃಷಿ ಇಲಾಖೆ ಮುತುವರ್ಜಿ ವಹಿಸಬೇಕು ಎಂದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ರಶ್ಮಿ ಶಹಾಪೂರಮಠ ಮಾತನಾಡಿ, ಲುಕ್ಕೇರಿ ಭಾಗದ ಕಗ್ಗ ಭತ್ತ ಬೆಳೆಯುವ ಪ್ರದೇಶ ಕರ್ನಾಟಕ ಸರ್ಕಾರ ಎಂದು ನಮೂದಾಗಿರುವ ಬಗ್ಗೆ ಶಾಸಕ ದಿನಕರ ಶೆಟ್ಟಿ ಮುಖ್ಯಮಂತ್ರಿ ಗಮನಕ್ಕೆ ತಂದಿದ್ದಾರೆ. ಆಗ ಮುಖ್ಯಮಂತ್ರಿ ಜಿಲ್ಲಾಧಿಕಾರಿಗೆ ಪರಿಶೀಲಿಸಲು ಆದೇಶ ನೀಡಿದ್ದರು. ಡಿಸಿ ಸೂಚನೆಯಂತೆ ಜಂಟಿ ನಿರ್ದೇಶಕರ ಹಾಗೂ ಕಂದಾಯ, ಕೃಷಿ ಇಲಾಖೆ ವತಿಯಿಂದ ಸರ್ವೇ ನಡೆಸಿ ವರದಿ ಕಳುಹಿಸಿದ್ದೇವೆ ಎಂದರು.
ವಿವಿಧ ಇಲಾಖಾ ಅಧಿಕಾರಿಗಳು ವರದಿ ಸಲ್ಲಿಸಿದರು. ತಹಶೀಲ್ದಾರ್ ವಿವೇಕ ಶೇಣ್ವಿ, ತಾಪಂ ಇಒ ನಾಗರತ್ನಾ ನಾಯಕ, ಆಡಳಿತಾಧಿಕಾರಿ ಎನ್.ಜಿ. ನಾಯಕ, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಚೇತನ ನಾಯ್ಕ, ಪಿಎಸ್‌ಐ ರವಿ ಗುಡ್ಡಿ, ಸಣ್ಣ ನೀರಾವರಿ ಇಲಾಖೆಯ ಅಮಿತಾ ತಳೇಕರ, ಆರ್‌ಎಫ್‌ಒಗಳಾದ ಪ್ರವೀಣ ನಾಯಕ, ಸುಧಾಕರ ಪಟಗಾರ ಸೇರಿದಂತೆ ವಿವಿಧ ಅಧಿಕಾರಿಗಳು ಇದ್ದರು.