Advertisement

OBC-Muslim ಮೀಸಲು ವಿವಾದ ತಾರಕಕ್ಕೆ: ಪ್ರಧಾನಿ ಹೇಳಿಕೆ ಅಲ್ಲಗಳೆದ ಸಿದ್ದರಾಮಯ್ಯ

12:52 AM Apr 26, 2024 | Team Udayavani |

ಬರೇಲಿ/ಮೊರೇನಾ: “ಇಡೀ ಮುಸ್ಲಿಮ್‌ ಸಮುದಾಯವನ್ನು ಒಬಿಸಿ ಕೆಟಗರಿಯ ವ್ಯಾಪ್ತಿಗೆ ತಂದಿರುವ ಕರ್ನಾಟಕ ಸರಕಾರದ ಮಾದರಿಯನ್ನೇ ಇಡೀ ದೇಶದಲ್ಲಿ ಅಳವಡಿಸಲು ಕಾಂಗ್ರೆಸ್‌ ಮುಂದಾಗಿದೆ’ ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ.

Advertisement

ವಿಪಕ್ಷಗಳ ಐಎನ್‌ಡಿಐಎ ಒಕ್ಕೂಟದ ವಿರುದ್ಧ ಗಂಭೀರ ವಾಗ್ಧಾಳಿ ಮುಂದುವರಿಸಿರುವ ಪ್ರಧಾನಿ ಮೋದಿಯವರು ಗುರುವಾರ ಉತ್ತರಪ್ರದೇಶದ ಬರೇಲಿ ಮತ್ತು ಮಧ್ಯಪ್ರದೇಶದ ಮೊರೇನಾದಲ್ಲಿ ನಡೆದ ಚುನಾವಣ ಪ್ರಚಾರ ರ್ಯಾಲಿಯಲ್ಲೂ “ಮೀಸಲಾತಿ’ ಅಸ್ತ್ರ ಪ್ರಯೋಗಿಸಿದ್ದಾರೆ. ಕರ್ನಾಟಕದ ಕಾಂಗ್ರೆಸ್‌ ಸರಕಾರವು ಆ ರಾಜ್ಯದಲ್ಲಿರುವ ಮುಸ್ಲಿಮ್‌ ಸಮುದಾಯದ ಎಲ್ಲರನ್ನೂ ಒಬಿಸಿ ಎಂದು ಘೋಷಿಸಿದೆ. ಈಗಾಗಲೇ ಒಬಿಸಿ ಪಟ್ಟಿಗೆ ಹಲವು ಸಮುದಾಯಗಳನ್ನು ಕಾಂಗ್ರೆಸ್‌ ಸೇರ್ಪಡೆ ಮಾಡಿದೆ. ಹಿಂದೆಲ್ಲ ಇತರ ಹಿಂದುಳಿದ ವರ್ಗಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ದೊರೆಯುತ್ತಿತ್ತು. ಆದರೆ ಈಗ ಇವರಿಗೆ ಸಿಗುತ್ತಿದ್ದ ಮೀಸಲಾತಿಯನ್ನು ಸದ್ದಿಲ್ಲದೆ ಕಿತ್ತುಕೊಳ್ಳಲಾಗಿದೆ ಎಂದು ಮೋದಿ ಆರೋಪಿಸಿದ್ದಾರೆ.

2011ರಲ್ಲಿ ಕಾಂಗ್ರೆಸ್‌ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಒಬಿಸಿ ಮೀಸಲಾತಿಯ ಒಂದು ಭಾಗವನ್ನು ಧರ್ಮದ ಆಧಾರದಲ್ಲಿ ಹಂಚಲು ನಿರ್ಧರಿಸಿತ್ತು. 2011ರ ಡಿ. 19ರಂದು ಸಚಿವ ಸಂಪುಟದಲ್ಲಿ ಒಂದು ಟಿಪ್ಪಣಿ ಹರಿದಾಡಿತ್ತು. ಅದರಲ್ಲಿ ಒಬಿಸಿಗಳಿಗಿರುವ ಶೇ. 27 ಮೀಸಲಾತಿಯ ಒಂದು ಭಾಗವನ್ನು ನಿರ್ದಿಷ್ಟ ಸಮುದಾಯಕ್ಕೆ ನೀಡಬೇಕು ಎಂಬ ಬಗ್ಗೆ ಪ್ರಸ್ತಾವಿಸಲಾಗಿತ್ತು.

ದೇಶಾದ್ಯಂತ ಅನುಷ್ಠಾನ
ಅನಂತರ ಆಂಧ್ರಪ್ರದೇಶ ಹೈಕೋರ್ಟ್‌ ಕಾಂಗ್ರೆಸ್‌ನ ಈ ನಿರ್ಧಾರಕ್ಕೆ ತಡೆಯೊಡ್ಡಿತು. ಅದರ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಹೋದಾಗ ಅಲ್ಲೂ ಕಾಂಗ್ರೆಸ್‌ಗೆ ಹಿನ್ನಡೆಯಾಯಿತು ಎಂದು ಮೋದಿ ಹೇಳಿದ್ದಾರೆ. ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬಂದರೆ ಈಗ ಕರ್ನಾಟಕದಲ್ಲಿ ಜಾರಿ ಮಾಡಿರುವ ನೀತಿಯನ್ನೇ ದೇಶಾದ್ಯಂತ ಅನುಷ್ಠಾನ ಮಾಡಲಿದೆ ಎಂದಿದ್ದಾರೆ.

ಸಂವಿಧಾನ ಬದಲಿಸುವ ಉದ್ದೇಶ
ಧರ್ಮಾಧಾರಿತ ಮೀಸಲಾತಿ ಒದಗಿಸುವುದಕ್ಕಾಗಿ ಸಂವಿಧಾನವನ್ನು ಬದಲಿಸಲೆಂದೇ ವಿಪಕ್ಷಗಳ ಐಎನ್‌ಡಿಐಎ ಒಕ್ಕೂಟ ನಿಮ್ಮ ಮತಗಳನ್ನು ಯಾಚಿಸುತ್ತಿದೆ. ಆದರೆ ನಾನು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳ ಕೋಟಾ ಹಕ್ಕುಗಳನ್ನು ಕಿತ್ತುಕೊಳ್ಳದಂತೆ ತಡೆಯಲು 400+ ಸೀಟುಗಳನ್ನು ಕೊಡಿ ಎಂದು ಕೇಳಿಕೊಳ್ಳುತ್ತಿದ್ದೇನೆ. ಯಾದವ, ಕುಶ್ವಾಹ, ಮೌರ್ಯ, ಗುರ್ಜರ್‌, ರಾಜ್‌ಭರ್‌, ತೇಲಿ ಮತ್ತು ಪಾಲ್‌ ಮುಂತಾದ ಹಿಂದುಳಿದ ವರ್ಗಗಳ ಹಕ್ಕುಗಳನ್ನು ಕಾಂಗ್ರೆಸ್‌ ಅಥವಾ ಸಮಾಜವಾದಿ ಪಕ್ಷ ಕಸಿದುಕೊಳ್ಳಲು ನಾನು ಬಿಡುವುದಿಲ್ಲ ಎಂದಿದ್ದಾರೆ ಮೋದಿ.

Advertisement

ಇಬ್ಬರು ನೌಕರಿಯಲ್ಲಿದ್ದರೆ ಒಬ್ಬರ ನೌಕರಿಗೆ ಕತ್ತರಿ: ಮೋದಿ ಆರೋಪ
ಕಾಂಗ್ರೆಸ್‌ ಕೇವಲ ಆರ್ಥಿಕ ಸಮೀಕ್ಷೆ ನಡೆಸುವುದಷ್ಟೇ ಅಲ್ಲ, ಸಂಸ್ಥೆಗಳು ಮತ್ತು ಕಚೇರಿಗಳ ಸಮೀಕ್ಷೆಯನ್ನೂ ನಡೆಸಲು ಉದ್ದೇಶಿಸಿದೆ. ಹಿಂದುಳಿದ ಅಥವಾ ದಲಿತ ಸಮುದಾಯದ ಒಂದೇ ಕುಟುಂಬದಲ್ಲಿ ಇಬ್ಬರು ಉದ್ಯೋಗದಲ್ಲಿದ್ದರೆ ಆ ಪೈಕಿ ಒಬ್ಬರ ಉದ್ಯೋಗವನ್ನು ಕಸಿದು, ದೇಶದ ಸಂಪನ್ಮೂಲಗಳಲ್ಲಿ ಮೊದಲ ಆದ್ಯತೆಯನ್ನು ಯಾರಿಗೆ ನೀಡಬೇಕೆಂದು ಬಯಸುತ್ತಿದ್ದಾರೋ ಅವರಿಗೆ ಕೊಡುವುದು ಐಎನ್‌ಡಿಐಎ ಒಕ್ಕೂಟದ ಉದ್ದೇಶವಾಗಿದೆ. ಎಸ್‌ಪಿ, ಕಾಂಗ್ರೆಸ್‌ ಮತ್ತು ಐಎನ್‌ಡಿಐಎ ಒಕ್ಕೂಟವು ಓಲೈಕೆಗಾಗಿ ಯಾವ ಹಂತಕ್ಕೆ ಬೇಕಿದ್ದರೂ ಹೋಗಲು ಸಿದ್ಧವಾಗಿವೆ. ಅಪಾಯಕಾರಿ ಹಸ್ತವು ಮತ್ತೆ ದೇಶದ ಜನರ ಹಕ್ಕುಗಳನ್ನು ಕಸಿಯಲು ಮುಂದಾಗಿದೆ ಎಂದೂ ಮೋದಿ ಆರೋಪಿಸಿದ್ದಾರೆ.

ಬೊಮ್ಮಾಯಿ ಸರಕಾರ ಮಾಡಿದ್ದು ಪ್ರಧಾನಿ ಮೋದಿಗೆ ಗೊತ್ತಿಲ್ಲವೇ: ಸಿಎಂ ಪ್ರಶ್ನೆ
ಬೆಂಗಳೂರು: ಕರ್ನಾಟಕದ ಮಾದರಿಯಲ್ಲೇ ದೇಶಾದ್ಯಂತ ಮುಸ್ಲಿಮ್‌ ಮೀಸಲಾತಿ ವಿಸ್ತರಿಸಲು ಕಾಂಗ್ರೆಸ್‌ ಯತ್ನಿಸುತ್ತಿದೆ ಎಂಬ ಪ್ರಧಾನಿ ಮೋದಿ ಆರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಮುಸ್ಲಿಮರಿಗೆ ಮೀಸಲಾತಿ ನಿಗದಿಪಡಿಸಿರುವುದು ಈಗಿನ ನಮ್ಮ ಸರಕಾರ ಅಲ್ಲ. ಮೀಸಲಾತಿ ನಿರ್ಣಯಕ್ಕಾಗಿಯೇ ಸ್ಥಾಪಿಸಲಾದ ಹಾವನೂರು, ವೆಂಕಟಸ್ವಾಮಿ, ಚಿನ್ನಪ್ಪ ರೆಡ್ಡಿ ಮತ್ತು ರವಿವರ್ಮ ಕುಮಾರ್‌ ಅಧ್ಯಕ್ಷತೆಯ ನಾಲ್ಕು ಹಿಂದುಳಿದ ವರ್ಗಗಳ ಆಯೋಗಗಳು ಕೂಡ ಮುಸ್ಲಿಮರಿಗೆ ಮೀಸಲಾತಿಯನ್ನು ಶಿಫಾರಸು ಮಾಡಿದ್ದವು ಬಸವರಾಜ ಬೊಮ್ಮಾಯಿ ಸರಕಾರವು ಮುಸ್ಲಿಮ್‌ ಮೀಸಲಾತಿಯನ್ನು ರದ್ದುಪಡಿಸಿ, ಅನಂತರ ಹಳೆಯ ಮೀಸಲಾತಿಯನ್ನೇ ಮುಂದು ವರಿಸುವುದಾಗಿ ಸರ್ವೋಚ್ಚ ಪೀಠಕ್ಕೆ ಮುಚ್ಚಳಿಕೆ ಬರೆದುಕೊಟ್ಟಿತ್ತು. ಇದು ಮೋದಿಯವರಿಗೆ ಗೊತ್ತಿಲ್ಲವೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next