Advertisement

ಬಿಜೆಪಿ ಓಬಿಸಿ ಕಾರ್ಯಕಾರಿಣಿ: ಒಗ್ಗಟ್ಟಿನ ಜತೆ ಹೊಗಳಿಕೆ

03:45 AM Feb 19, 2017 | Team Udayavani |

ಬೆಂಗಳೂರು: ರಾಯಣ್ಣ ಬ್ರಿಗೇಡ್‌ ವಿಚಾರದ ಗೊಂದಲ ಹಿನ್ನೆಲೆಯಲ್ಲಿ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಸಂಧಾನದ ನಂತರ ತಣ್ಣನಾಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹಾಗೂ ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಕೆ.ಎಸ್‌. ಈಶ್ವರಪ್ಪ ಒಂದೇ ವೇದಿಕೆಯಲ್ಲಿ ಮುಖಾಮುಖೀಯಾಗುವುದರ ಜತೆಗೆ ಪರಸ್ಪರ ಕೊಂಡಾಡಿ ಒಂದಾಗಿದ್ದೇವೆ ಎಂಬ ಸಂದೇಶ ರವಾನಿಸುವ ಪ್ರಯತ್ನ ಮಾಡಿದರು.

Advertisement

ರಾಜ್ಯ ಹಿಂದುಳಿದ ವರ್ಗಗಳ ಕಾರ್ಯಕಾರಿಣಿಯಲ್ಲಿ ಭಾಗವಹಿಸಿದ್ದ ಇಬ್ಬರೂ ಮುಖಂಡರು, ನಮ್ಮಲ್ಲಿ ಭಿನ್ನಾಭಿಪ್ರಾಯ ಇಲ್ಲ ಎಂಬುದನ್ನು ಪದೇ ಪದೇ ಪುನರುತ್ಛರಿಸಿ ಜತೆಗೂಡಿ ಕೆಲಸ ಮಾಡಿ ಬಿಜೆಪಿ ಅಧಿಕಾರಕ್ಕೆ ತರುವುದೇ ನಮ್ಮ ಗುರಿ ಎಂದು ಪ್ರತಿಪಾದಿಸಿದರು.

ಈಶ್ವರಪ್ಪ ಅವರು ಬಿಜೆಪಿ ರಾಜ್ಯ ಓಬಿಸಿ ಮೋರ್ಚಾ ಉಸ್ತುವಾರಿಯಾಗಿರುವುದು ಪಕ್ಷಕ್ಕೆ ಆನೆಬಲ ಬಂದಂತೆ ಎಂದು ಯಡಿಯುರಪ್ಪ ಬಣ್ಣಿಸಿದರೆ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ 150 ಸ್ಥಾನಗಳಿಸಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವುದೇ ನಮ್ಮ ಗುರಿಯಾಗಬೇಕು ಎಂದು  ಈಶ್ವರಪ್ಪ ಕರೆ ನೀಡಿದರು.

ಕಾರ್ಯಕಾರಿಣಿ ಉದ್ಘಾಟಿಸಿ ಮಾತನಾಡಿದ ಬಿ.ಎಸ್‌.ಯಡಿಯೂರಪ್ಪ, ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾಕ್ಕೆ ಹಿರಿಯ ನಾಯಕ ಕೆ.ಎಸ್‌.ಈಶ್ವರಪ್ಪ ಅವರನ್ನು ಉಸ್ತುವಾರಿಯನ್ನಾಗಿ ನೇಮಿಸಿರುವುದರಿಂದ ಪಕ್ಷಕ್ಕೆ ಆನೆಬಲ ಬಂದಂತಾಗಿದೆ ಎಂದು ಹೇಳಿದರು.

“ಪ್ರಧಾನಮಂತ್ರಿಗಳ “ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌’ ಘೋಷವಾಕ್ಯದೊಂದಿಗೆ ಅಂತ್ಯೋದಯ ಯೋಜನೆ ಮೂಲಕ ಹಿಂದುಳಿದವರ ಕಲ್ಯಾಣಕ್ಕೆ ಎಲ್ಲರೂ ಶ್ರಮಿಸಬೇಕಿದೆ.  ಪ್ರಧಾನಿಯವರ ಕಾರ್ಯವೈಖರಿಗೆ ಎಲ್ಲೆಡೆ ಬೆಂಬಲ ವ್ಯಕ್ತವಾಗುತ್ತಿದ್ದು, ಉತ್ತರ ಪ್ರದೇಶ ಚುನಾವಣೆ ಫ‌ಲಿತಾಂಶ ಬಳಿಕ ಇದು ಸಾಬೀತಾಗಲಿದೆ’ ಎಂದು ತಿಳಿಸಿದರು.

Advertisement

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಲ್ಕು ವರ್ಷದಲ್ಲಿ ಕೈಗೊಳ್ಳದ ಅಭಿವೃದ್ಧಿ ಕಾರ್ಯವನ್ನು ಇನ್ನೊಂದು ವರ್ಷದಲ್ಲಿ ಮಾಡಿ ತೋರಿಸಲು ಸಾಧ್ಯವಿಲ್ಲ. ಇದೇ 22ರಂದು ಬೀದರ್‌ ಹಾಗೂ 23ರಂದು ಯಾದಗಿರಿಯಲ್ಲಿ ಹಿಂದುಳಿದ ವರ್ಗಗಳ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಉಸ್ತುವಾರಿ ಕೆ.ಎಸ್‌.ಈಶ್ವರಪ್ಪ ಮಾತನಾಡಿ, “ಈವರೆಗೆ ಸಣ್ಣಪುಟ್ಟ ಗೊಂದಲಗಳನ್ನು ಇಟ್ಟುಕೊಂಡಿದ್ದೆವು.ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವವಿದ್ದು, ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್‌ ಶಾ ಅವರು ಇಬ್ಬರನ್ನು ಕರೆಸಿ ಮಾತುಕತೆ ನಡೆಸಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುವಂತೆ ಸೂಚಿಸಿದ್ದಾರೆ. ಅದರಂತೆ ಎಲ್ಲರೂ ಸಂಘಟನೆಯಲ್ಲಿ ತೊಡಗಿಸಿಕೊಂಡು ಪಕ್ಷವನ್ನು ಅಧಿಕಾರಕ್ಕೆ ತಂದು ಯಡಿಯೂರಪ್ಪ ಅವರನ್ನು ಮತ್ತೆ ಸಿಎಂ ಮಾಡಬೇಕು’ ಎಂದು ಹೇಳಿದರು.

ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಮೊದಲ ಬಾರಿಗೆ ಹಿಂದುಳಿದ ವರ್ಗದ ಕಲ್ಯಾಣಕ್ಕೆ 1000 ಕೋಟಿ ರೂ. ಅನುದಾನ ನೀಡಿದ್ದರು. ಮಠಮಾನ್ಯಗಳಿಗೂ 1, 2, 5 ಕೋಟಿ ರೂ. ಅನುದಾನ ನೀಡಿದ್ದರು. ಆದರೆ ರಾಜ್ಯ ಕಾಂಗ್ರೆಸ್‌ ಸರ್ಕಾರ ಹಾಸಿಗೆ ದಿಂಬಿನಲ್ಲಿ ಹಣ ಒಡೆದಿದೆ. ಹಾಗಾಗಿ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಎಲ್ಲ ಹಿಂದುಳಿದವರ ಸಂಪರ್ಕ ಇಟ್ಟುಕೊಂಡು, ಪಕ್ಷ ಸಂಘಟನೆಗೆ ಮುಂದಾಗಬೇಕು ಎಂದರು.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಇನ್ನು ಒಂದು ವರ್ಷದ ಆಡಳಿತವನ್ನು ಪೂರ್ಣಗೊಳಿಸುವ ವಿಶ್ವಾಸವಿಲ್ಲ. ಭ್ರಷ್ಟಾಚಾರ ಮಿತಿ ಮೀರಿದ್ದು, ಯಾವ ಸಚಿವರು ಜೈಲು ಸೇರುತ್ತಾರೋ ಗೊತ್ತಾಗುತ್ತಿಲ್ಲ ಎಂದು ವ್ಯಂಗ್ಯವಾಡಿದರು.

ಮಿಷನ್‌ 150
ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಮಾತನಾಡಿ, “ಕಾಂಗ್ರೆಸ್‌ಗೆ ಇಂದು ನಿರಾಸೆಯ ದಿನ. ಬಿಜೆಪಿಯಲ್ಲಿನ ಸಣ್ಣಪುಟ್ಟ ವ್ಯತ್ಯಾಸವನ್ನೇ ದೊಡ್ಡದು ಮಾಡಿ ಆಟವಾಡುತ್ತಿದ್ದ ಕಾಂಗ್ರೆಸ್‌ಗೆ ಬಿಜೆಪಿಯ ಇಬ್ಬರು ನಾಯಕರು ಜೊತೆಯಾಗಿರುವುದನ್ನು ಕಂಡು ನಿರಾಸೆಯಾಗಿದೆ. ವರಿಷ್ಠರು ನೀಡಿರುವ “ಮಿಷನ್‌ 150+’ ಗುರಿ ತಲುಪುವಲ್ಲಿ ಹಿಂದುಳಿದ ವರ್ಗದ ಪಾತ್ರ ಮಹತ್ವದ್ದಾಗಿದೆ. ಕಾಂಗ್ರೆಸ್‌ಮುಕ್ತ ಭಾರತ ಮಾಡುವ ಪ್ರಧಾನಿಯವರ ಪ್ರಯತ್ನ ಸಾಕಾರಗೊಳಿಸಲು ಎಲ್ಲರೂ ದುಡಿಯಬೇಕು’ ಎಂದು ಹೇಳಿದರು.

ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ, “ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 150 ಸ್ಥಾನಗಳಿಸಬೇಕಾದರೆ 224 ಕ್ಷೇತ್ರಗಳಲ್ಲೂ ಪಕ್ಷ ಬಲವರ್ಧನೆಗೊಳಿಸಬೇಕಿದೆ. ಬೂತ್‌ಮಟ್ಟದಿಂದ ರಾಜ್ಯ ಮಟ್ಟದವರೆಗೆ ಯಾವ ಜಾತಿಯವರನ್ನೂ ಬಿಡದೆ ಸಂಘಟಿಸಬೇಕು ಎಂದು ಹೇಳಿದರು. ಮುಖಂಡರಾದ ಹರತಾಳು ಹಾಲಪ್ಪ, ಬೇಳೂರು ಗೋಪಾಲಕೃಷ್ಣ, ಅಶೋಕ್‌ ಕಾಟೆÌ, ಹುಲಿನಾಯ್ಕರ್‌, ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌  ಉಪಸ್ಥಿತರಿದ್ದರು.

ಯಾರೇ ಬಂದರೂ ಸ್ವಾಗತ
ಬಿಜೆಪಿಗೆ ಬೇರೆ ಪಕ್ಷದಿಂದ ನಾಯಕರು ಬರುವುದಾದರೆ ಸ್ವಾಗತ. ಅವರನ್ನು ಗೌರವಯುತವಾಗಿ ನಡೆಸಿಕೊಂಡು ಸ್ಥಾನಮಾನ ನೀಡಲಾಗುವುದು. 150 ವಿಧಾನಸಭಾ ಸ್ಥಾನಗಳಲ್ಲಿ ಪಕ್ಷ ಗೆಲುವು ಸಾಧಿಸುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು.
– ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

ಬಿಜೆಪಿಗೆ ಬೇರೆ ಪಕ್ಷದವರನ್ನೂ ಪಕ್ಷಕ್ಕೆ ಕರೆತರಲು ಪ್ರಯತ್ನಿಸಿ,ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲರೂ ಒಗ್ಗೂಡಿ ಶ್ರಮಿಸೋಣ. ಚುನಾವಣೆಯಲ್ಲಿ ಗೆದ್ದು ಹಿಂದುಳಿದ ಮತ್ತು ದಲಿತರಿಗೆ ನ್ಯಾಯ ಕೊಡಿಸುವ ಪಣ ತೊಡಬೇಕು.
– ಕೆ.ಎಸ್‌. ಈಶ್ವರಪ್ಪ, ವಿಧಾನಪರಿಷತ್‌ ಪ್ರತಿಪಕ್ಷ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next