ಔರಾದ: ಗಡಿ ತಾಲೂಕಿನ ಇತಿಹಾದಲ್ಲಿಯೇ ಪ್ರಥಮ ಬಾರಿಗೆ ದಾಖಲೆ ಪ್ರಮಾಣದಲ್ಲಿ ಪೊಲೀಸರು ಗಾಂಜಾ ವಶಪಡಿಸಿಕೊಳ್ಳುವ ಮೂಲಕ ಅಕ್ರಮ ವ್ಯಾಪಾರ ಮಾಡುವರಿಗೆ ನಡುಕ ಶುರುವಾಗುವಂತೆ ಮಾಡಿದ್ದಾರೆ.
ಬೀದರ ಜಿಲ್ಲೆ ಔರಾದ ತಾಲೂಕು ಜಂಬಗಿ ಗ್ರಾಪಂ ವ್ಯಾಪ್ತಿಯ ಘಾಮಾ ತಾಂಡಾದ ನಿವಾಸಿ ಗೋಪಾಲ ಎನ್ನುವರ ಜಾನುವಾರುಗಳ ಕಟ್ಟುವ ಸ್ಥಳದಲ್ಲಿ 6.5 ಕ್ವಿಂಟಲ್ ಗಾಂಜಾ ಪತ್ತೆಯಾಗಿರುವುದು ಚರ್ಚೆಗೆ ಕಾರಣವಾಗಿದೆ. 1995ಕ್ಕಿಂತ ಮೊದಲು ಜಂಬಗಿ ಗ್ರಾಪಂ ವ್ಯಾಪ್ತಿಯ ಕೆಲವು ಗ್ರಾಮ ಹಾಗೂ ತಾಂಡಾದ ಹೊಲದಲ್ಲಿ ಗಾಂಜಾ ಬೆಳೆಸಿ ಮಾರಾಟ ಮಾಡಲಾಗುತ್ತಿತ್ತು ಸಂಗತಿ ಈ ಗಬಯಲಿಗೆ ಬಂದಿದೆ. ಆದರೆ ಪೊಲೀಸರು ಪದೇ ಪದೇ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಗಾಂಜಾ ಮಾರಾಟ ಮಾಡುವ ವ್ಯಕ್ತಿಗಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗಿದೆ.
ಗೋಪಾಲ ಎಂಬ ವ್ಯಕ್ತಿ ಈ ಹಿಂದೆ ಮೂರು ಬಾರಿ ಗಾಂಜಾ ಮಾರಾಟದ ಪ್ರಕಣದಲ್ಲಿ ಸಿಕ್ಕಿಕೊಂಡಿದ್ದಾನೆ. ಸಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಡಿವೈಎಸ್‌ಪಿ ವೆಂಕನಗೌಡ ಪಾಟೀಲ ತಿಳಿಸಿದ್ದಾರೆ.
ಬೇರೆ ಕಡೆಯಿಂದ ತಂದ ಗಾಂಜಾ: ಪೊಲೀಸರ ಮಾಹಿತಿ ಪ್ರಕಾರ ಶನಿವಾರ ಗೋಪಾಲ ಎಂಬಾತನ ಹೊಲದಲ್ಲಿ ವಶಪಡಿಸಿಕೊಂಡ ಗಾಂಜಾ ನೆರೆ ರಾಜ್ಯಗಳಿಂದ ತಂದು ಮಹಾರಾಷ್ಟ್ರದ ಪುಣೆ, ಮುಂಬೈ ಮತ್ತು ರಾಜ್ಯದ ಬೆಂಗಳೂರು ಸೇರಿದಂತೆ ಪ್ರಮುಖ ನಗರದಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಸಂಗ್ರಹಿಸಿ ಇಡಲಾಗಿತ್ತು. ಪ್ರತಿ ಕೆಜಿಗೆ 10ರಿಂದ12 ಸಾವಿರ ರೂ. ಮೌಲ್ಯದಲ್ಲಿ ಗಾಂಜಾ ಮಾರಾಟ ಮಾಡಲಾಗುತ್ತದೆ. ವಿಶೇಷವಾಗಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಮಧ್ಯಮ ವರ್ಗದ ಜನರು ಇದನ್ನು ಸೇವಿಸುತ್ತಾರೆ. ಕಡಿಮೆ ಹಣದಲ್ಲಿ ಹೆಚ್ಚಿನ ನಶೆ ಮತ್ತು ಒಂದು ದಿನದ ಮಟ್ಟಿಗೆ ಮತ್ತೇರಿಸುವ ಶಕ್ತಿ ಗಾಂಜಾಕ್ಕೆ ಇದೆ. ಹಿಗಾಗಿಯೇ ಇದನ್ನು ಕಾಲೇಜು ವಿದ್ಯಾರ್ಥಿಗಳು ಮತ್ತು ಸಾಮಾನ್ಯ ಜನರು ಹೆಚ್ಚಾಗಿ ಬಳಸುತ್ತಾರೆ. ಕಾಲೇಜು ಕ್ಯಾಂಪಸ್‌ನಲ್ಲಿ 400 ರೂ.ಗೆ 50 ಗ್ರಾಂನಂತೆ ನೀಡುವ ಬಗ್ಗೆ ಇಲಾಖೆಯಲ್ಲಿ ಪ್ರಕರಣಗಳು ದಾಖಲಾಗಿವೆ ಎನ್ನುತ್ತಾರೆ ಎಸ್‌ಪಿ ಟಿ. ಶ್ರೀಧರ.
ಜಾನುವಾರುಗಳ ದೊಡ್ಡಿಯೇ ಗಾಂಜಾ ಕೇಂದ್ರ: ಹೈನುಗಾರಿಕೆ ಉದ್ಯೋಗ ಮಾಡುವ ಉದ್ದೇಶದಿಂದ ಜಾನುವಾರುಗಳ ದೊಡ್ಡಿ ನಿರ್ಮಿಸಲಾಗಿತ್ತು. ಅಲ್ಲಿಯೇ ಗಾಂಜಾ ಸಂಗ್ರಹಿಸಲಾಗುತ್ತಿತ್ತು. ಅಲ್ಲಿಂದಲೇ ವಹಿವಾಟು ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದೆ.
ರವೀಂದ್ರ ಮುಕ್ತೇದಾರ