Advertisement

ನೀರಿಗಾಗಿ ನೀರೆಯರ ಅಲೆದಾಟ

11:44 AM Apr 27, 2019 | Naveen |

ಔರಾದ: ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗಿರುವ ಕಾಳಜಿ ಪಪಂ ಅಧಿಕಾರಿಗಳಿಗೆ ಏಕಿಲ್ಲ? ಎನ್ನುವ ಪ್ರಶ್ನೆ ಪಟ್ಟಣದಲ್ಲಿ ಪ್ರಜ್ಞಾವಂತ ನಾಗರಿಕರಲ್ಲಿ ಕಾಡುತ್ತಿದೆ.

Advertisement

ಔರಾದ ತಾಲೂಕು ಕೇಂದ್ರ ಸ್ಥಾನವಾಗಿದ್ದು, ಪಟ್ಟಣದಲ್ಲಿ 15-20 ಸಾವಿರ ಜನಸಂಖ್ಯೆ ಇದೆ. ಪ್ರತಿ ವರ್ಷ ಬೇಸಿಗೆ ಆರಂಭವಾಗುತ್ತಿದ್ದಂತೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗುತ್ತಿದೆ. ಜನರ ಸಮಸ್ಯೆ ಬಗೆಹರಿಸಲು ಅಧಿಕಾರಿಗಳು ಮುಂದಾಗದಿರುವುದರಿಂದ ವರ್ಷದಿಂದ ವರ್ಷಕ್ಕೆ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ. ಇದರಿಂದ ನೀರಿಗಾಗಿ ಮಹಿಳೆಯರು, ಪುರುಷರು ಸೇರಿದಂತೆ ಚಿಕ್ಕ ಮಕ್ಕಳು ಅಲೆಯುವ ಪರಿಸ್ಥಿತಿ ಎದುರಾಗಿದೆ. ಆದರೂ ಅಧಿಕಾರಿಗಳು ಮಾತ್ರ ಜನರ ಸಮಸ್ಯೆ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ ಎಂದು ನಿವಾಸಿಗಳು ಆರೋಪಿಸುತ್ತಿದ್ದಾರೆ.

ಸಾರ್ವಜನಿಕರ ಆಕ್ರೋಶ: ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಿದ್ದರೆ ಅಲ್ಲಿನ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿ ಸದಸ್ಯರು ವಾರದಲ್ಲಿಯೇ ಸಮಸ್ಯೆ ಬಗೆಹರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ತಾಲೂಕು ಕೇಂದ್ರದಲ್ಲಿ ಪ್ರತಿ ವರ್ಷ ಈ ಸಮಸ್ಯೆ ಬಂದಾಗ ಪಪಂ ಮುಖ್ಯಾಧಿಕಾರಿಗಳು ಹಾಗೂ ಆಡಳಿತ ಮಂಡಳಿ ಸದಸ್ಯರು ಸಮಸ್ಯೆಗೆ ಸ್ಪಂದಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕೊಳವೆಬಾವಿ ಕೊರೆಸಿದರೆ ಸಮಸ್ಯೆಗೆ ಮುಕ್ತಿ: ತಾಲೂಕಿನ ತೇಗಂಪುರ ಗ್ರಾಮದಿಂದ ಔರಾದ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ತೆರೆದಬಾವಿ ಪಕ್ಕದಲ್ಲೇ ಕೊಳವೆ ಕೊರೆಸಿದರೆ ಮಾತ್ರ ನೀರಿನ ಸಮಸ್ಯೆ ಬಗೆ ಹರಿಯುತ್ತದೆ. ಕೆಲ ದಿನಗಳ ಹಿಂದೆ ಇದೇ ರೀತಿ ಸುಂಧಾಳ ಗ್ರಾಪಂ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಬಂದಾಗ ಉದಯವಾಣಿ ವರದಿ ಮಾಡಿದ ಹಿನ್ನೆಲೆಯಲ್ಲಿ ಸುಂಧಾಳ ಗ್ರಾಪಂ ಅಭಿವೃದ್ಧಿ ಅಧಿಕಾರಿ ಶಿವಕುಮಾರ ಘಾಟೆ ಕೊಳವೆ ಬಾವಿ ಕೊರೆಸಿದ್ದರು. ಇದೀಗ ಆ ಎರಡೂ ಗ್ರಾಮಕ್ಕೆ ನೀರಿನ ಸಮಸ್ಯೆಗೆ ಮುಕ್ತಿ ನೀಡಿದ್ದಾರೆ. ಅದರಂತೆ ಪಪಂ ಅಧಿಕಾರಿಗಳು ಎಚ್ಚೆತ್ತುಕೊಂಡು ತೆರೆದ ಬಾವಿ ಪಕ್ಕದಲ್ಲಿಯೇ ಕೊಳವೆಬಾವಿ ಕೊರೆಸಿದರೆ ನೀರಿನ ಸಮಸ್ಯೆ ಬಗೆಹರಿಯಲಿದೆ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

ನೀರಿನ ಮೂಲವಿದೆ: ತಾಲೂಕಿನ ತೇಗಂಪುರ ಗ್ರಾಮದಲ್ಲಿ ಅಂತರ್ಜಲಮಟ್ಟ ಕಡಿಮೆಯಾಗಿದ್ದರೂ 30-40 ಅಡಿ ಆಳ ಅಗೆದರೆ ನೀರು ಬರುತ್ತಿದೆ. ಕೆರೆ ಪಕ್ಕದಲ್ಲಿರುವ ಒಣಗಿದ ಬಾವಿಗೆ ಇದೇ ರೀತಿ ಮಾಡುತ್ತಿರುವುದರಿಂದ ಜಲಧಾರೆ ಮತ್ತೆ ಆರಂಭವಾಗಿದೆ. ಹೀಗಾಗಿ ಪಪಂ ಅಧಿಕಾರಿಗಳು ಜಾಗೃತರಾಗಿ ತೇಗಂಪುರ ಅಥವಾ ಬೋರಾಳ ಗ್ರಾಮದಲ್ಲಿ ಕೊಳವೆ ಬಾವಿ ಕೊರೆಸುವ ಮೂಲಕ ಜನರ ಶಾಶ್ವತ ನೀರಿನ ಪರಿಹಾರಕ್ಕೆ ಮುಂದಾಗಬೇಕು ಎನ್ನುವುದು ಸಾರ್ವಜನಿಕರ ಒತ್ತಾಸೆ.

Advertisement

ನೀರಿನ ಸಮಸ್ಯೆಯಿಂದ ಪಟ್ಟಣದ ನಿವಾಸಿಗಳು ನಿತ್ಯ ನರಳುತ್ತಿದ್ದಾರೆ. ಟ್ಯಾಂಕರ್‌ ಮೂಲಕ ತಾತ್ಕಾಲಿಕವಾಗಿ ಸಾರ್ವಜನಿಕರಿಗೆ ನೀರು ಪೂರೈಸುವ ಜೊತೆಗೆ ಅವರ ಸಮಸ್ಯೆಗೆ ಸ್ಪಂದಿಸುವ ಕೆಲಸ ಪಟ್ಟಣ ಪಂಚಾಯತನಿಂದ ನಡೆಯಲಿದೆ. ವಾರದಲ್ಲಿ ತಾಲೂಕಿನ ತೇಗಂಪುರ ಹಾಗೂ ಬೋರಾಳ ಗ್ರಾಮದಲ್ಲಿನ ಕೊಳವೆ ಬಾವಿ ಕೊರೆಸುವ ಮೂಲಕ ನೀರಿನ ಸಮಸ್ಯೆಗೆ ಶಾಶ್ವತ ಮುಕ್ತಿ ನೀಡಲಾಗುವುದು.
ವಿಠ್ಠಲ ಹಾದಿಮನಿ,
ಪಪಂ ಮುಖ್ಯಾಧಿಕಾರಿ, ಔರಾದ

ನೀರಿಗಾಗಿ ನಿತ್ಯ ನಲ್ಲಿ ಹಾಗೂ ಬಾವಿಗಳಿಗೂ ಅಲೆದರೂ ಹನಿ ನೀರು ಸಿಗುತ್ತಿಲ್ಲ. ಇದರಿಂದ ಮನೆಯಲ್ಲಿ ನಡೆಯುವ ಸಭೆ, ಸಮಾರಂಭ ಹೇಗೆ ಮಾಡಬೇಕೆನ್ನುವ ಆತಂಕ ಮೂಡುತ್ತಿದೆ. ಅಧಿಕಾರಿಗಳು ಕೂಡಲೇ ಜಾಗೃತರಾಗಿ ನೀರಿನ ಸಮಸ್ಯೆ ಬಗೆಹರಿಸಲು ಮುಂದಾಗಬೇಕು.
ಬಸವರಾಜ ಶಟಕಾರ,ನಿವಾಸಿ

ರವೀಂದ್ರ ಮುಕ್ತೇದಾರ

Advertisement

Udayavani is now on Telegram. Click here to join our channel and stay updated with the latest news.

Next