ಔರಾದ: ಗಡಿ ತಾಲೂಕಿನಲ್ಲಿ ಜನಸಾಮಾನ್ಯರು ಕುಡಿಯುವ ನೀರಿನೊಂದಿಗೆ ಜಾನುವಾರುಗಳ ಮೇವಿಗೂ ಭೀಕರ ಬರ ಎದುರಿಸುತ್ತಿದ್ದಾರೆ. ಸರ್ಕಾರದಿಂದ ಆರಂಭವಾದ ಮೇವು ಖರೀದಿ ಕೇಂದ್ರದಲ್ಲಿ ಮೇವು ಇಲ್ಲದೆ ರೈತರು ನಿತ್ಯ ಮೇವು ಕೇಂದ್ರಕ್ಕೆ ಬಂದು ಹೋಗುವಂತಹ ಸ್ಥಿತಿ ಬಂದಿದೆ.
ಪ್ರಸಕ್ತ ಸಾಲಿನಲ್ಲಿ ಬೇಸಿಗೆ ಬಿಸಿಲು ಹೆಚ್ಚಾಗುತ್ತಿದ್ದಂತೆ ಕುಡಿಯುವ ನೀರಿನ ಸಮಸ್ಯೆ ಉಲ್ಭಣವಾಗುತ್ತಿರುವುದು ಒಂದಡೆಯಾಗಿದ್ದರೆ ಇನ್ನೂಂದಡೆ ಜಾನುವಾರುಗಳ ಮೇವಿಗೂ ಬರ ಬಂದು ರೈತರು ಆತಂಕದಲ್ಲಿ ಜೀವಿಸುವ ದಿನಗಳು ಬಂದಿದೆ. ಪ್ರಸಕ್ತ ಸಾಲಿನಲ್ಲಿ ವಾಡಿಕೆಯಂತೆ ಮಳೆಯಾಗದೆ ಇರುವ ಹಿನ್ನೆಲೆಯಲ್ಲಿ ರೈತರು ತಮ್ಮ ಹೊಲದಲ್ಲಿ ಬೆಳೆದ ಜೋಳದ ಮೇವು ಹಾಗೂ ಇನ್ನಿತರ ಮೇವುಗಳನ್ನು ಕಡಿಮೆ ಪ್ರಮಾಣದಲ್ಲಿ ಸಂಗ್ರಹ ಮಾಡಿಕೊಂಡು ತಮ್ಮ ಆಧಾರ ಸ್ಥಂಭಗಳಾಗಿರುವ ಜಾನುವಾರುಳಿಗೆ ಆಹಾರ ನೀಡಿದರು. ಕಳೆದ 15 ದಿನಗಳಿಂದ ಮೇವು ಇಲ್ಲದೆ ರೈತರಿಗೆ ಆತಂಕ ಮನೆ ಮಾಡುತ್ತಿದೆ.
ನೀರು-ಮೇವಿನ ಸಮಸ್ಯೆಯಿಂದ ರೈತರು ಹಾಗೂ ಗೋ ಶಾಲೆ ಆಡಳಿತ ಮಂಡಳಿ ಸದಸ್ಯರು ಚಿಂತೆ ಮಾಡುತ್ತಿದ್ದಾರೆ. ಕಳೆದ ಐದು ತಿಂಗಳ ಹಿಂದೆ ಪಟ್ಟಣದ ಅಮರೇಶ್ವರ ಕಾಲೇಜು ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ| ಎಚ್.ಆರ್ ಮಹಾದೇವ ಸಭೆ ನಡೆಸಿ ತಾಲೂಕಿನ ಪ್ರತಿಯೊಂದು ಹೋಬಳಿ ಕೇಂದ್ರಕ್ಕೂ ಮೇವು ವಿತರಣೆ ಕೇಂದ್ರ ಹಾಗೂ ಅವಶ್ಯಕತೆ ಇರುವ ಕಡೆ ಗೋ ಶಾಲೆ ಆರಂಭಿಸುವಂತೆ ತಾಲೂಕು ಆಡಳಿತಕ್ಕೆ ಸೂಚನೆ ನೀಡಿದ್ದರು. ಜಿಲ್ಲಾಧಿಕಾರಿಗಳು ಸೂಚನೆ ನೀಡಿ ಐದು ತಿಂಗಳು ಕಳೆದರು ಇನ್ನೂ ಗೋಶಾಲೆ ಮತ್ತು ಮೇವು ವಿತರಣೆ ಕೇಂದ್ರಗಳು ತಮ್ಮ ಕರ್ತವ್ಯ ನಿರ್ವಹಿಸುತ್ತಿಲ್ಲ. ಸರ್ಕಾರ ತಾಲೂಕು ಕೇಂದ್ರ ಸ್ಥಾನವಾದ ಔರಾದ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಒಂದೇ ಒಂದು ಮೇವು ವಿತರಣೆ ಕೇಂದ್ರ ಆರಂಭಿಸಿದೆ.ಆರಂಭಿಸಿದ ಒಂದು ದಿನ ಮಾತ್ರ ಮೇವು ರೈತರಿಗೆ ನೀಡಲಾಗಿದೆ. ಅಂದಿನಿಂದ ಇಂದಿನವರೆಗೂ ಮೇವು ವಿತರಣೆ ಕೇಂದ್ರದಲ್ಲಿ ಮೇವು ಇಲ್ಲ. ಹೀಗಾಗಿ ನಿತ್ಯ ಮೇವು ವಿತರಣೆ ಕೇಂದ್ರಕ್ಕೆ ಹೋಗಿ ವಾಪಸ್ ಬರುವಂತಹ ಸ್ಥಿತಿ ನಮ್ಮ ರೈತರಿಗೆ ಬಂದಿದೆ. ಇನ್ನೂ ಮುಂದಾದರು ಸರ್ಕಾರ ಹಾಗೂ ಜಿಲ್ಲಾಡಳಿತ ತಾಲೂಕಿನ ಪ್ರತಿಯೊಂದು ಹೋಬಳಿ ಕೇಂದ್ರದಲ್ಲಿ ಮೇವು ವಿತರಣೆ ಕೇಂದ್ರ ಆರಂಭಿಸಿ ರೈತರ ಜಾನುವಾರುಗಳಿಗೆ ಆಹಾರ ನೀಡಲು ಮುಂದಾಗಬೇಕು ಎನ್ನುವುದು ರೈತರ ಮಾತಾಗಿದೆ.
ಹೊಲದಲ್ಲಿ ಕೂಡಿಟ್ಟ ಮೇವು ಸಂಪೂರ್ಣವಾಗಿ ಖಾಲಿಯಾಗಿದೆ. ಸರ್ಕಾರ ಹಾಗೂ ಅಧಿಕಾರಿಗಳು ಮೇವು ವಿತರಣೆ ಕೇಂದ್ರದಲ್ಲಿ ಮೇವು ಇಟ್ಟು ನಮ್ಮ ರೈತರ ಜಾನುವಾರುಗಳಿಗೆ ಅನ್ನ ನೀಡಲು ಮುಂದಾಗಬೇಕು.
•
ಘಾಳರೆಡ್ಡಿ, ಮಮದಾಪುರ ರೈತ
ಎರಡು ಮೂರು ದಿನಗಳಲ್ಲಿ ಮೇವು ಬರುತ್ತದೆ. ಇನ್ನೂ ತಾಲೂಕಿನ ಪ್ರತಿಯೊಂದು ಹೋಬಳಿ ಮಟ್ಟದಲ್ಲಿ ಮೇವು ವಿತರಣೆ ಕೇಂದ್ರ ಆರಂಭಿಸುವ ಬಗ್ಗೆ ತಹಶೀಲ್ದಾರೊಂದಿಗೆ ಮಾತನಾಡಿ ಪ್ರಾರಂಭಿಸಲಾಗುತ್ತದೆ.
•ರಾಜಕುಮಾರ ಪಾಟೀಲ,
ಪಶು ವೈದ್ಯಾಧಿಕಾರಿ