Advertisement

ನೀರಿನ ಸಮಸ್ಯೆ: ಬರ ನಿರ್ವಹಣೆ ಸಮಿತಿ ಗಪ್‌ಚುಪ್‌

11:19 AM May 04, 2019 | Naveen |

ಔರಾದ: ಗಡಿ ತಾಲೂಕು ಕೇಂದ್ರ ಸ್ಥಾನ ಸೇರಿದಂತೆ ಗ್ರಾಮೀಣ ಭಾಗದಲ್ಲಿಯು ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಬರ ನಿರ್ವಹಣೆ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಸ್ಪಂದಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

Advertisement

ಬೇಸಿಗೆಯಲ್ಲಿ ಬಿಸಿಲಿನ ಕಾವು ದಿನದಿಂದ ಹೆಚ್ಚಾಗುತ್ತಿದಂತೆ ಕುಡಿಯುವ ನೀರಿನ ಸಮಸ್ಯೆ ಸಹ ಹೆಚ್ಚಾಗುತ್ತಿದೆ. ಆದರೂ ಬರ ನಿರ್ವಹಣೆ ಸಮಿತಿ ಜನರ ಸಮಸ್ಯೆಗೂ ನಮಗೂ ಯಾವುದೇ ರೀತಿಯ ಸಂಬಂಧವಿಲ್ಲ ಎನ್ನುವಂತೆ ವರ್ತಿಸುತ್ತಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಪಟ್ಟಣದ ಅಮರೇಶ್ವರ ಕಾಲೇಜು ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳ ಹಾಗೂ ಜಿಪಂ ಸಿಇಒ ಅವರ ಅಧ್ಯಕ್ಷತೆಯಲ್ಲಿ

ಡಿ 19ರಂದು ತಾಲೂಕು ಹೋಬಳಿ ಮತ್ತು ಗ್ರಾಮ ಮಟ್ಟದ ಅಧಿಕಾರಿಗಳ ಸಭೆ ನಡೆದಿತ್ತು. ಪಟ್ಟಣ ಸೇರಿದಂತೆ ತಾಲೂಕಿನ ಪ್ರತಿಯೊಂದು ಗ್ರಾಮದಲ್ಲಿಯೂ ನೀರಿನ ಸಮಸ್ಯೆ ಹಾಗೂ ರೈತರಿಗೆ ಮತ್ತು ಕೂಲಿ ಕಾರ್ಮಿಕರಿಗೆ ದುಡಿಯಲು ಕೆಲಸವಿಲ್ಲದೆ ಕುಳಿತುಕೊಳ್ಳದಂತೆ ಎಚ್ಚರಿಕೆಯಿಂದ ಪ್ರತಿಯೊಂದು ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಸೂಚಿಸಿ ಐದು ತಿಂಗಳು ಕಳೆಯುತ್ತಿದ್ದರೂ ತಾಲೂಕು ಹಾಗೂ ಗ್ರಾಮಮಟ್ಟದಲ್ಲಿ ಬರ ನಿರ್ವಹಿಸಲು ಒಬ್ಬ ಅಧಿಕಾರಿಯೂ ಮುಂದೆ ಬಂದಿಲ್ಲ. 2018-19ನೇ ಸಾಲಿನಲ್ಲಿ ಬರಗಾಲದಲ್ಲಿ ಉದ್ಭವಿಸುವ ಸಮಸ್ಯೆ ಬಗೆಹರಿಸಲು ತಾಲೂಕಿನ ಗ್ರಾಮಮಟ್ಟದಲ್ಲಿ ಸಮಿತಿ ರಚಿಸಲಾಗಿದೆ. ತಾಲೂಕು ಸಮಿತಿಗೆ ತಹಶೀಲ್ದಾರ್‌ರು ಅಧ್ಯಕ್ಷರಾಗಿರುತ್ತಾರೆ.

ಪಟ್ಟಣ ಪಂಚಾಯತ ಮುಖ್ಯಾಧಿಕಾರಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಲೆಕ್ಕಾಧಿಕಾರಿಗಳು,ಕಿರಿಯ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಮತ್ತು ಸರ್ಕಾರಿ ಹಿರಿಯ ಮತ್ತು ಕಿರಿಯ

ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯರು ತಾಲೂಕು ಕೇಂದ್ರಸ್ಥಾನದ ಸಮಿತಿ ಸದಸ್ಯರಾಗಿದ್ದಾರೆ. ಇನ್ನೂ ಗ್ರಾಮೀಣ ಭಾಗದಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು, ಕಿರಿಯ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಜೆಇ, ಸರ್ಕಾರಿ ಶಾಲೆ ಮುಖ್ಯ ಶಿಕ್ಷಕರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ತಂಡ ರಚಿಸಲಾಗಿದೆ. ತಂಡದ ಸದಸ್ಯರು ತಮ್ಮ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಗ್ರಾಮಕ್ಕೂ ಮೂರು ದಿನಕೊಮ್ಮೆ ಹೋಗಿ ಅಲ್ಲಿನ ಜನ, ಜಾನುವಾರುಗಳ ಸಮಸ್ಯೆ ಆಲಿಸಿ ಬಗೆಹರಿಸುವಂತೆ ಜಿಲ್ಲಾಧಿಕಾರಿಗಳು ಕಟ್ಟು ನಿಟ್ಟಿನ ಆದೇಶ ನೀಡಿದ್ದರು. ಆದರೆ ಗಡಿ ತಾಲೂಕಿನಲ್ಲಿ ಸಮಿತಿ ತಾಲೂಕು ಅಧ್ಯಕ್ಷರು ಹಾಗೂ ಸದಸ್ಯರು ಮಾತ್ರ ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ.

Advertisement

ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನೀರು ಇಲ್ಲದೆ ಇರುವುದರಿಂದ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಶಸ್ತ್ರಚಿಕಿತ್ಸೆ ಸಹ ಸ್ಥಗಿತಗೊಳಿಸಿದ್ದಾರೆ. ಅಮರೇಶ್ವರ ಗೋಶಾಲೆ ಜಾನುವಾರುಗಳಿಗೆ ಮತ್ತು ಬಿಡಾದಿ ದನಗಗಳು ಸಹ ಕುಡಿಯುವ ನೀರು ಇಲ್ಲದೆ ರಸ್ತೆಯಲ್ಲಿ ನರಳುತ್ತಿವೆ.

ಗೋಶಾಲೆ ಆರಂಭಿಸಿಲ್ಲ: ರೈತರ ಜಾನುವಾರುಗಳಿಗೆ ಕುಡಿಯಲು ನೀರು ಹಾಗೂ ತಿನ್ನಲು ಮೇವು ಇಲ್ಲ. ಇದರಿಂದ ರೈತರು ತಮ್ಮ ಜಾನುವಾರುಗಳನ್ನು ಕಡಿಮೆ ದರದಲ್ಲಿ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ತಾಲೂಕು ಆಡಳಿತಾಧಿಕಾರಿಗಳು ಹಾಗೂ ಜಿಲ್ಲಾಡಳಿತಾಧಿಕಾರಿಗಳು ಮತ್ತು ಬರ ನಿರ್ವಹಣೆ ಸಮಿತಿ ಸದಸ್ಯರು ತಾಲೂಕಿನಲ್ಲಿ ಇಂದಿಗೂ ಒಂದೇ ಒಂದು ಗೋ ಶಾಲೆ ಸಹ ಆರಂಭಿಸಿಲ್ಲ. ಕಾಟಾಚಾರಕ್ಕಾಗಿ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಮೇವು ವಿತರಣಾ ಕೇಂದ್ರ ಆರಂಭಿಸಲಾಗಿದೆಯಾದರು ಅದಕ್ಕೂ ಬೀಗ ಹಾಕಲಾಗಿದೆ.

ಪಟ್ಟಣದ ಜನರ ಹಾಗೂ ನಮ್ಮ ಜಾನುವಾರುಗಳು ಮೃತಪಟ್ಟ ನಂತರ ಬಳಿಕವೇ ಜಿಲ್ಲಾಡಳಿತ ಮತ್ತು ಬರ ನಿರ್ವಹಣ ಸಮಿತಿ ಸದಸ್ಯರು ಮತ್ತು ಅಧ್ಯಕ್ಷರು ನಮಗೆ ಹಾಗೂ ಜಾನುವಾರುಗಳಿಗೆ ಆಶ್ರಯ ನೀಡಲು ಮುಂದೆ ಬರುತ್ತಾರೆ.
ಶ್ರೀಮಂತ ಬಿರಾದಾರ,
ರೈತ ಸಂಘದ ತಾಲೂಕು ಅಧ್ಯಕ್ಷ

ಜಿಲ್ಲಾಧಿಕಾರಿಗಳು ಕಚೇರಿಯಲ್ಲಿ ಕುಳಿತುಕೊಳ್ಳದೆ ಹೊರಗೆ ಬಂದು ರೈತರು ಹಾಗೂ ಜನಸಾಮಾನ್ಯರ ಸಮಸ್ಯೆ ಆಲಿಸಿ ಬಗೆಹರಿಸಲು ಮುಂದಾಗಬೇಕು.ಇಲ್ಲವಾದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಉಗ್ರ ಹೋರಾಟ ಮಾಡುತ್ತೇವೆ.
ಗೋವಿಂದ ಇಂಗಳೆ,ಪ್ರಗತಿ ಪರ ರೈತ

ರವೀಂದ್ರ ಮುಕ್ತೇದಾರ

Advertisement

Udayavani is now on Telegram. Click here to join our channel and stay updated with the latest news.

Next