Advertisement

ಮಮದಾಪೂರ ಸ್ವಚ್ಛತೆ ಯಾವಾಗ?

10:05 AM Jul 05, 2019 | Naveen |

ರವೀಂದ್ರ ಮುಕ್ತೇದಾರ
ಔರಾದ:
ತಾಲೂಕಿನ ಬಾದಲಗಾಂವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಮದಾಪೂರ ಗ್ರಾಮದಲ್ಲಿ ಅನೈರ್ಮಲ್ಯ ಹೆಚ್ಚಾಗಿರುವುದರಿಂದ ಕಸದಿಂದ ತುಂಬಿದ ಚರಂಡಿ, ದುರ್ನಾತ ಹರಡಿದ ತಿಪ್ಪೆಗುಂಡಿಗಳಿಂದ ಗ್ರಾಮದ ನಿವಾಸಿಗಳು ಸಾಂಕ್ರಾಮಿಕ ರೋಗ ಭೀತಿಯಲ್ಲಿ ದಿನ ಕಳೆಯಬೇಕಾಗಿದೆ.

Advertisement

ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಸ್ವಚ್ಛತೆ ಕೈಗೊಂಡು ರೋಗ ಮುಕ್ತ ಜೀವನಕ್ಕೆ ಸಹಕಾರ ನೀಡಿ ಎಂದು ಗ್ರಾಮಸ್ಥರು ಗ್ರಾಪಂ ಕಚೇರಿಗೆ ಅಲೆದು ಮನವಿ ಸಲ್ಲಿಸಿ ತಿಂಗಳು ಕಳೆದರೂ ಕೂಡ ಸ್ವಚ್ಛತಾ ಕಾರ್ಯ ಕೈಗೊಂಡಿಲ್ಲ. ಗ್ರಾಮದ ಹನುಮಾನ ಮಂದಿರ ಮುಂಭಾಗದಲ್ಲಿ ತಿಪ್ಪೆಗುಂಡಿಗಳನ್ನು ಹಾಕಲಾಗಿದೆ. ಅದನ್ನು ತೆಗೆದು ಸ್ವಚ್ಛ ಮಾಡುವಂತೆ ಮನವಿ ಮಾಡಿದರೂ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಸ್ಪಂದಿಸಿಲ್ಲ. ಇದು ಗ್ರಾಮದ ಹಿರಿಯ ಮುಖಂಡರು ಹಾಗೂ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಗ್ರಾಮದಲ್ಲಿನ ಚರಂಡಿಗಳು ತುಂಬಿಕೊಂಡು ಮಳೆ ನೀರು ರಸ್ತೆಗೆ ಹರಿಯುತ್ತಿದೆ. ಇದರಿಂದ ಗ್ರಾಮದ ಮುಖ್ಯರಸ್ತೆಯಲ್ಲಿ ದುರ್ವಾಸನೆ ಹರಡಿದೆ. ಅಲ್ಲದೇ ನಿತ್ಯ ದೇವಸ್ಥಾನಕ್ಕೆ ಹೋಗಿ ಬರುವ ಹಾಗೂ ಭಕ್ತರು ಮಲಿನ ನೀರಿನಲ್ಲಿಯೇ ಹೋಗಿ ಬರುವುದು ಅನಿವಾರ್ಯವಾಗಿದೆ.

ಮನವಿಗೆ ಬೆಲೆಯಿಲ್ಲ: ಗ್ರಾಮದ ಹಿರಿಯ ಮುಖಂಡ ಘಾಳರೆಡ್ಡಿ ಸಂಗಾರೆಡ್ಡಿ ಅವರ ಮನೆ ಸುತ್ತ ಅಕ್ರಮವಾಗಿ ತಿಪ್ಪೆಗುಂಡಿಗಳನ್ನು ಹಾಕಲಾಗಿದೆ. ಇದರಿಂದ ಮನೆಯಲ್ಲಿ ವಾಸವಿರುವವರಿಗೆ ವಿಷ ಜಂತುಗಳ ಕಾಟ ಹಾಗೂ ಸಾಂಕ್ರಾಮಿಕ ರೋಗದ ಭೀತಿ ಕಾಡುತ್ತಿದೆ. ಅಲ್ಲದೆ ತೆರೆದೆ ಬಾವಿ ಪಕ್ಕದಲ್ಲಿಯೂ ತಿಪ್ಪೆಗಳನ್ನು ಹಾಕಲಾಗಿದೆ. ಮಳೆಗಾಲದಲ್ಲಿ ಮಳೆ ನೀರು ಬಾವಿಗೆ ಸೇರಿ ಗ್ರಾಮಸ್ಥರು ಕಲುಷಿತ ನೀರು ಸೇವನೆ ಮಾಡಬೇಕಾಗಿದೆ. ಇದರಿಂದ ಗ್ರಾಮಸ್ಥರಲ್ಲಿ ಹಾಗೂ ಬಡಾವಣೆ ಜನರಲ್ಲಿ ಸಾಂಕ್ರಾಮಿಕ ರೋಗ ಭೀತಿ ಮೂಡಿದೆ. ಈ ಕುರಿತು ಮೂರು ತಿಂಗಳ ಹಿಂದೆಯೇ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೂ ಕೂಡ, ಇಲ್ಲಿವರೆಗೂ ಗ್ರಾಮಕ್ಕೆ ಬಂದು ಸ್ಥಳ ಪರಿಶೀಲನೆ ಮಾಡಿ ಸ್ವಚ್ಛತೆ ಕೆಲಸಕ್ಕೆ ಮುಂದಾಗಿಲ್ಲ ಎಂದು ಗ್ರಾಮದ ಮುಖಂಡರು ಆರೋಪಿಸಿದ್ದಾರೆ.

ಗ್ರಾಮದ ಜನರು ಸಾಂಕ್ರಾಮಿಕ ರೋಗದಿಂದ ಬಳಲಿ ಆಸ್ಪತ್ರೆ ಸೇರುವ ಮುನ್ನ ಗ್ರಾಮದ ಮಧ್ಯ ಭಾಗದಲ್ಲಿರುವ ತಿಪ್ಪೆಗುಂಡಿಗಳನ್ನು ತೆಗೆಯಬೇಕು. ಮತ್ತು ಗ್ರಾಮದಲ್ಲಿ ಕಸದಿಂದ ತುಂಬಿಕೊಂಡ ಚರಂಡಿಗಳನ್ನು ಸ್ವಚ್ಛ ಮಾಡಲು ಅಭಿವೃದ್ಧಿ ಅಧಿಕಾರಿಗಳು ಮುಂದಾಗಬೇಕು. ಇಲ್ಲವಾದಲ್ಲಿ ಜಿಪಂ ಸಿಇಒ ಕಚೇರಿ ಎದುರು ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಗ್ರಾಮದ ಮುಖಂಡರು ತಿಳಿಸಿದ್ದಾರೆ.

Advertisement

ಗ್ರಾಪಂ ಕೇಂದ್ರಸ್ಥಾನ ಸೇರಿದಂತೆ ಪಂಚಾಯತ ವ್ಯಾಪ್ತಿಯ ಪ್ರತಿಯೊಂದು ಗ್ರಾಮದ ಕುಟುಂಬ ಸದಸ್ಯರು ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಗ್ರಾಮದಲ್ಲಿ ಡಂಗುರ ಸಾರುವ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳೇ ಸ್ವಚ್ಛತಾ ಕೆಲಸಕ್ಕೆ ಇಷ್ಟೊಂದು ಸೋಮಾರಿತನ ಮಾಡುತ್ತಿರುವುದು ಗ್ರಾಮಸ್ಥರಲ್ಲಿ ಅಸಮಾಧಾನ ಹುಟ್ಟಿಸಿದೆ.

ಮಮದಾಪೂರ ಗ್ರಾಮದಲ್ಲಿ ಸ್ವಚ್ಛತೆ ಮಾಡುವಂತೆ ಬಾದಲಗಾಂವ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸುವೆ. ಅಲ್ಲದೆ ತಾಲೂಕಿನ ಪ್ರತಿಯೊಂದು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಕೂಡ ತಮ್ಮ ತಮ್ಮ ಪಂಚಾಯತ ವ್ಯಾಪ್ತಿಯಲ್ಲಿ ಸ್ವಚ್ಛತೆ ಕೆಲಸ ಮಾಡುವಂತೆ ಆದೇಶ ಮಾಡುತ್ತೇನೆ.
•ಜಗನ್ನಾಥ ಮೂರ್ತಿ, ತಾಪಂ ಇಒ

ಮಮದಾಪೂರ ಗ್ರಾಮದ ಬಡಾವಣೆಯಲ್ಲಿನ ಸ್ಥಿತಿ ಬಗ್ಗೆ ಬಾದಲಗಾಂವ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಲಿಖೀತ ರೂಪದಲ್ಲಿ ತಿಳಿಸಲಾಗಿದೆ. ಗ್ರಾಮದಲ್ಲಿ ಸ್ವಚ್ಛತೆ ಮಾಡುವಂತೆ ಲಿಖೀತರೂಪದಲ್ಲಿ ಪತ್ರ ಬರೆದು ಸಹ ಮನವಿ ಮಾಡಲಾಗಿದೆ. ಆದರೆ ಇಲ್ಲಿಯವರೆಗೂ ಅಧಿಕಾರಿಗಳು ಸ್ವಚ್ಛತೆ ಮಾಡಿಲ್ಲ. ನಮಗೆ ಸಾಂಕ್ರಾಮಿಕ ರೋಗಬಂದು ಸಾಯುವ ಮುನ್ನ ನಮ್ಮ ಓಣಿ ಸ್ವಚ್ಛ ಮಾಡಿ. ಇಲ್ಲವಾದಲ್ಲಿ ನಮಗೆ ವಿಷ ಕೊಡಿ. ಪ್ರತಿನಿತ್ಯ ಕೊಳಕು ವಾಸನೆ ತೆಗೆದುಕೊಂಡು ಆಸ್ಪತ್ರೆಗೆ ಹೋಗಿ ಸಾಕಾಗಿದೆ.
ಘಾಳರೆಡ್ಡಿ, ಮಮದಾಪೂರ ಗ್ರಾಮದ ನಿವಾಸಿ

Advertisement

Udayavani is now on Telegram. Click here to join our channel and stay updated with the latest news.

Next