Advertisement

ಬಸ್‌ ನಿಲ್ದಾಣದಲ್ಲೂ ಕಾಡುತ್ತಿದೆ ಕುಡಿಯುವ ನೀರಿನ ಸಮಸ್ಯೆ

10:23 AM May 16, 2019 | Team Udayavani |

ಔರಾದ: ಕುಡಿಯುವ ನೀರಿನ ಸಮಸ್ಯೆ ಬಿಸಿ ಪಟ್ಟಣದ ತಹಶೀಲ್ದಾರ ಕಚೇರಿಗೆ ಬರುವ ಜನಸಾಮಾನ್ಯರಿಗಷ್ಟೆ ಅಲ್ಲದೇ ಸಾರಿಗೆ ಸಂಸ್ಥೆ ಬಸ್‌ನಲ್ಲಿ ಪ್ರಯಾಣಿಸಲು ಬಸ್‌ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೂ ತಟ್ಟಿದೆ.

Advertisement

ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮದಿಂದ ನಿಲ್ದಾಣಕ್ಕೆ ಬಂದು ಜಿಲ್ಲಾ ಕೇಂದ್ರ ಬೀದರ ಮತ್ತು ಮಹಾರಾಷ್ಟ್ರದ ಉದಗೀರ, ನಾಂದೇಡ, ತೆಲಂಗಾಣದ ನಾರಾಯಣಖೇಡ, ಕಂಗಟಿ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಕ್ಕೆ ತೆರಳಲು ಬಸ್‌ ನಿಲ್ದಾಣದಲ್ಲಿ ಬರುವ ಪ್ರಯಾಣಿಕರಿಗೆ ಕುಡಿಯುವ ನೀರಿನ ಸಮಸ್ಯೆ ನಿತ್ಯ ಕಾಡುತ್ತಿದೆ.

ಬಸ್‌ ನಿಲ್ದಾಣದ ಕಾಮಗಾರಿ ಪ್ರಗತಿಯಲ್ಲಿರುವ ಹಿನ್ನೆಲೆಯಲ್ಲಿ ತಗಡಿನ ಶೆಡ್‌ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಹಾಗೂ ತಮ್ಮ ಗ್ರಾಮಕ್ಕೆ ಹೋಗುವ ಬಸ್‌ ಬರುವ ತನಕ ನಿಂತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಆದರೆ ಬೇಸಿಗೆಯಲ್ಲಿ ಬೆಂಕಿಯಂತೆ ಸುಡುವ ಬಿಸಿಲಿನಲ್ಲಿ ಪ್ರಯಾಣಿಕರ ದಾಹ ನೀಗಿಸುವ ವ್ಯವಸ್ಥೆ ಸಾರಿಗೆ ಸಂಸ್ಥೆ ಅಧಿಕಾರಿಗಳು ಮಾಡದೇ ಇರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ತಾಲೂಕು ಕೇಂದ್ರದಲ್ಲಿರುವ ಬಸ್‌ ನಿಲ್ದಾಣಕ್ಕೆ ಪ್ರತಿ ನಿತ್ಯ 10ರಿಂದ 12 ಸಾವಿರ ಪ್ರಯಾಣಿಕರು ಮತ್ತು ಬೇಸಿಗೆ ಶಿಬಿರದಲ್ಲಿ ಅಭ್ಯಾಸ ಮಾಡಲು ವಿದ್ಯಾರ್ಥಿಗಳು ಬರುತ್ತಾರೆ. ನಿಲ್ದಾಣಕ್ಕೆ ಬರುವ

ಪ್ರತಿಯೊಬ್ಬರು ನೀರು ಹುಡುಕುವ ಸ್ಥಿತಿ ಎದುರಾಗಿದೆ. ನಿಲ್ದಾಣದ ಮುಂಭಾಗದಲ್ಲಿರುವ ಖಾಸಗಿ ಹೋಟೆಲ್ ಮತ್ತು ಅಂಗಡಿಗಳಿಗೆ ಹೋಗಿ ನೀರು ಕುಡಿಯುತ್ತಿದ್ದಾರೆ.

Advertisement

ಪ್ರತಿ ವರ್ಷ ಬೇಸಿಗೆ ಕಾಲದಲ್ಲಿ ಸಾರಿಗೆ ಸಂಸ್ಥೆ ಅಧಿಕಾರಿಗಳು ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಮಡಿಕೆಯಲ್ಲಿ ತಂಪು ನೀರು ಇಡುವ ವ್ಯವಸ್ಥೆ ಮಾಡುತ್ತಿದ್ದರೂ ಆದರೆ ಈ ವರ್ಷ ಮಾತ್ರ ಅಂತಹ ವ್ಯವಸ್ಥೆ ಮಾಡಿಲ್ಲ. ಇದರಿಂದ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ.

ಬಸ್‌ ನಿಲ್ದಾಣದಲ್ಲಿ ಕುಡಿಯುವ ನೀರು ಇಲ್ಲದ್ದರಿಂದ ನಮ್ಮ ಊರಿಗೆ ಹೋಗಿ ಕುಡಿಯುವುದನ್ನು ರೂಢಿಸಿಕೊಂಡಿದ್ದೇವೆ. ಸಾರಿಗೆ ಸಂಸ್ಥೆ ಅಧಿಕಾರಿಗಳು ಇನ್ನೂ ಮುಂದಾದರು ನಿಲ್ದಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಮುಂದಾಗಬೇಕು ಎಂದು ಕಾಲೇಜು ವಿದ್ಯಾರ್ಥಿನಿಯರು ಆಗ್ರಹಿಸಿದ್ದಾರೆ.

ನೂತನ ಬಸ್‌ ನಿಲ್ದಾಣದ ಕಾಮಗಾರಿ ಪ್ರಗತಿಯಲ್ಲಿದೆ. ಹೀಗಾಗಿ ಈ ವರ್ಷ ನೀರಿನ ವ್ಯವಸ್ಥೆ ಮಾಡಿಲ್ಲ. ನಾಳೆಯಿಂದಲೇ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು.
ಎಂ.ಡಿ. ನಯುಮ್‌,
ಘಟಕ ವ್ಯವಸ್ಥಾಪಕರು ಔರಾದ

ರವೀಂದ್ರ ಮುಕ್ತೇದಾರ

Advertisement

Udayavani is now on Telegram. Click here to join our channel and stay updated with the latest news.

Next