Advertisement

ಓಟ್‌ ಬ್ಯಾಂಕ್‌ ರಾಜಕಾರಣ ನಡೆಯಲ್ಲ

03:10 PM Aug 21, 2017 | Team Udayavani |

ಚನ್ನಗಿರಿ: ಅಲ್ಪಸಂಖ್ಯಾತರನ್ನು ಕೇವಲ ಓಟ್‌ಬ್ಯಾಂಕ್‌ ಆಗಿ ಬಳಸಿಕೊಳ್ಳಲಾಗುತ್ತಿದೆಯೇ ಹೊರತು ಸಮುದಾಯದ ಅಭಿವೃದ್ಧಿಗೆ ಯಾವ ಪಕ್ಷದವರು ಪ್ರಾತಿನಿಧ್ಯ ನೀಡಿಲ್ಲ ಎಂದು ಬಿಜೆಪಿ ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ ಅಬ್ದುಲ್‌ ಅಜೀಮ್‌ ಅಸಮಾಧಾನ ವ್ಯಕ್ತಪಡಿಸಿದರು.

Advertisement

ತಾಲೂಕಿನ ನಲ್ಲೂರಿನ ಭಗೀರಥ ಸಮುದಾಯ ಭವನದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಲಾಗಿದ್ದ ಅಲ್ಪಸಂಖ್ಯಾತರ ತಾಲೂಕು ಮಟ್ಟದ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸ್ವಾತಂತ್ರ್ಯ ಪೂರ್ವದಿಂದಲೂ ಕಾಂಗ್ರೆಸ್‌ ಪಕ್ಷವು ಅಲ್ಪಸಂಖ್ಯಾತರಿಗೆ ಪ್ರತಿನಿಧ್ಯ ನೀಡದೇ ಸಮುದಾಯವನ್ನು ಕೇವಲ ಓಟ್‌ ಬ್ಯಾಂಕ್‌ ಆಗಿ ಮಾತ್ರ ಬಳಸಿಕೊಳ್ಳುತ್ತಿದೆ. ಇನ್ನೂ ಮುಂದೆ ಈ ಓಟ್‌ ಬ್ಯಾಂಕ್‌ ರಾಜಕಾರಣ ನಡೆಯುವುದಿಲ್ಲ ಎಂದು
ಎಚ್ಚರಿಸಿದರು.

ಅಲ್ಪಸಂಖ್ಯಾತರಿಂದ ಕಾಂಗ್ರೆಸ್‌ ಮುಕ್ತ ರಾಜ್ಯವನ್ನು ಮಾಡಲು ಕಾಲ ಕೂಡಿಬಂದಿದೆ. ನಮ್ಮ ಸಮಾಜದ ಶ್ರೆಯೋಭಿವೃದ್ಧಿಗೆ ಬಿಜೆಪಿಯ ಆಡಳಿತದಲ್ಲಿ ಸಾಕಷ್ಟು ಅನುದಾನ, ಯೋಜನೆಗಳನ್ನು ನೀಡಲಾಗಿದೆ. ಇಂತಹ ಪಕ್ಷವನ್ನು ಕೋಮುವಾದಿ ಪಕ್ಷವೆಂದು ನಮ್ಮನ್ನು ಮತಗಳಾಗಿ ಪರಿವರ್ತನೆ ಗೊಳಿಸಿದ್ದಾರೆ. ಕಾಂಗ್ರೆಸ್‌ನವರ ತಂತ್ರಗಾರಿಕೆ ರಾಜಕಾರಣ ಜನರಿಗೆ ಗೊತ್ತಿದೆ. ನಾವುಗಳು ಸಂಘಟನೆಯ ಮೂಲಕ ತಕ್ಕ ಪಾಠವನ್ನು ಕಾಂಗ್ರೆಸ್ಸಿಗೆ ಕಲಿಸಲಿದ್ದೇವೆ ಎಂದು ಹೇಳಿದರು. ಸಂಸದ ಜಿ.ಎಂ. ಸಿದ್ದೇಶ್ವರ್‌ ಮಾತನಾಡಿ, ರಾಜ್ಯದ ಕಾಂಗ್ರೆಸ್‌ ಸರ್ಕಾರ ಹಾಗೂ ಸಂಪುಟದ ಮಂತ್ರಿಗಳು
ಭ್ರಷ್ಟಚಾರದಲ್ಲಿ ತೊಡಗಿದ್ದಾರೆ. ಇಂತಹ ಸರ್ಕಾರವನ್ನು ಬೇರು ಸಮೇತ ಕಿತ್ತೂಗೆಯಲು ಕಾರ್ಯಕರ್ತರು ಪಣ ತೊಡಬೇಕು. ರಾಜ್ಯ ಸರ್ಕಾರ ಅಭಿವೃದ್ಧಿಯ ಹೆಸರಿನಲ್ಲಿ ಜನತೆಗೆ ಮಂಕುಬೂದಿ ಎರೆಚುವ ಮೂಲಕ ಅನಾಚರದಲ್ಲಿ ತೊಡಗಿದೆ ಎಂದು ಹೇಳಿದರು.

ಬಿಜೆಪಿ ಅಲ್ಪಸಂಖ್ಯಾತರ ಘಟಕದ ತಾಲೂಕು ಅಧ್ಯಕ್ಷ ಅಹಮ್ಮದ್‌ ಜಾನ್‌ (ಬಾಬು) ಮಾತನಾಡಿ, ಜಾತಿ-ಧರ್ಮವನ್ನು ಮುಂದಿಟ್ಟುಕೊಂಡು ರಾಜಕೀಯ
ಮಾಡುವವರಿಗೆ ಬುದ್ಧಿ ಕಲಿಸಬೇಕಿದೆ. ಬಿಜೆಪಿ ಕೋಮುವಾದಿ ಪಕ್ಷವೆಂದು ದೂರಿ ಜಾತಿ ರಾಜಕಾರಣ ಮಾಡುವವರ ವಿರುದ್ಧ ಅಲ್ಪಸಂಖ್ಯಾತರು ಎಚ್ಚೆತ್ತುಕೊಳ್ಳಬೇಕು. ಮುಂದಿನ ಚುನಾವಣೆಯಲ್ಲಿ ಅಲ್ಪಸಂಖ್ಯಾತರು ಸಂಘಟನೆಯಾಗುವ ಮೂಲಕ ರಾಜಕೀಯವಾಗಿ ಶಕ್ತಿ ಪ್ರದರ್ಶನ ಮಾಡಬೇಕು
ಎಂದರು. ತಾಲೂಕು ಬಿಜೆಪಿ ಅಧ್ಯಕ್ಷ ಮೇದಿಕೆರೆ ಸಿದ್ದೇಶ್‌, ಮಾಜಿ ಶಾಸಕ ಮಾಡಳ್‌ ವಿರೂಪಾಕ್ಷಪ್ಪ, ಮುಖಂಡರಾದ ಟಿಪ್ಪು ಸುಲ್ತಾನ್‌, ಮಹ್ಮದ್‌ ಯೂಸಪ್‌, ಅನ್ಸರ್‌ ಅಹಮ್ಮದ್‌, ಟಿ.ವಿ ರಾಜು, ಲೋಹಿತ್‌ ಕುಮಾರ್‌, ಜಿಪಂ ಸದಸ್ಯ ಲೋಕೇಶ್ವರ, ಟಿಪ್ಪು ಸುಲ್ತಾನ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next