ಹೊಸದಿಲ್ಲಿ; ರಾಹುಲ್ ಗಾಂಧಿ ಅವರು ಮತ್ತೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಬೇಕು ಎಂದು ಪಕ್ಷದ ಹಿರಿಯ ನಾಯಕ ಸಲ್ಮಾನ್ ಖುರ್ಷೀದ್ ಅಭಿಪ್ರಾಯಪಟ್ಟಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅನುಭವಿಸಿದ ಹೀನಾಯ ಸೋಲಿನ ಕಾರಣಕ್ಕೆ ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನ ತೊರೆದಿದ್ದರು. ಪಕ್ಷವನ್ನು ನಡು ನೀರಿನಲ್ಲಿ ಬಿಟ್ಟು ಹೋಗಿದ್ದಾರೆ ಎಂಬರ್ಥದಲ್ಲಿ ಖುರ್ಷೀದ್ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಪಕ್ಷದೊಳಗೆ ಟೀಕೆಗಳು ಕೇಳಿ ಬಂದಿದ್ದವು.
ಶನಿವಾರ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡ ಸಲ್ಮಾನ್ ಖುರ್ಷೀದ್ ರಾಹುಲ್ ಮತ್ತೆ ಕಾಂಗ್ರೆಸ್ ಮತ್ತೆ ಪಕ್ಷದ ಚುಕ್ಕಾಣಿ ಹಿಡಿಯಬೇಕೆಂದು ಪುನರುಚ್ಚಿಸಿದರು.
ಪಕ್ಷದ ಕೆಲವು ಸದಸ್ಯರು ನನ್ನ ಈ ಹೇಳಿಕೆಯಿಂದಾಗಿ ಪಕ್ಷಕ್ಕೆ ಹಾನಿಯಾಗುತ್ತದೆ ಎಂದು ಹೇಳುತ್ತಿದ್ದಾರೆ. ಆದರೆ ಪಕ್ಷಕ್ಕೆ ನಿಜವಾಗಿಯೂ ಯಾವುದರಿಂದ ಹಾನಿಯಾಗಿದೆ ಎಂದು ತಿಳಿಯಬೇಕಿದೆ. ನಾವು ನಮಗೆ ಬೇಸರವಾಗಿದೆ, ಹಾನಿಯಾಗಿದೆ ಎಂದು ಅಳುತ್ತ ಕೂರಬಾರದು ನಿಜ. ಆದರೆ ನಮ್ಮಲ್ಲಿ ಎಲ್ಲಾ ಸರಿಯಾಗಿದೆ ಎಂದು ಸುಮ್ಮನಿರುವುದು ಕೂಡಾ ಮಾರಕ ಎಂದು ಹಿರಿಯ ಧುರೀಣ ಅಭಿಪ್ರಾಯ ಪಟ್ಟಿದ್ದಾರೆ.
ಲೋಕಸಭಾ ಚುನಾವಣೆಯ ನಂತರ ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ಸ್ಥಾನವನ್ನು ತುಂಬಲು ಯಾರೂ ಮುಂದೆ ಬರದ ಹಿನ್ನಲೆ ಸೋನಿಯಾ ಗಾಂಧಿ ಮತ್ತೆ ಅಧ್ಯಕ್ಷರಾಗಿದ್ದರು.