ಚೆನ್ನೈ : ನನ್ನಿಂದ ಬಲವಂತವಾಗಿ ರಾಜೀನಾಮೆ ಕೊಡಿಸಿ ಮುಖ್ಯ ಮಂತ್ರಿ ಹುದ್ದೆಯಿಂದ ಕೆಳಗಿಳಿಸಲಾಯಿತು ಎಂದು ಆರೋಪಿಸಿ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ವಿರುದ್ಧ ಬಂಡಾಯ ಸಾರಿರುವ ತಮಿಳುನಾಡಿನ ಹಂಗಾಮಿ ಮುಖ್ಯಮಂತ್ರಿ ಓ.ಪನ್ನೀರ್ ಸೆಲ್ವಂ ಸಾಮಾಜಿಕ ತಾಣಗಳಲ್ಲಿ ಹೀರೋ ಎನಿಸಿಕೊಂಡಿದ್ದಾರೆ.
ತೆರವಾದ ಸ್ಥಾನ ತುಂಬಲಷ್ಟೇ ಸೀಮಿತ ಎಂಬ ಹಣೆ ಪಟ್ಟಿಗೆ ಪಾತ್ರವಾಗಿದ್ದ ಪನ್ನೀರ್ ಸೆಲ್ವಂ ಅವರ ಬಂಡಾಯ ರಾಷ್ಟ್ರಮಟ್ಟದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ ಮಾತ್ರವಲ್ಲದೆ ತಮಿಳುನಾಡಿನಲ್ಲಿ ರಾಜಕೀಯ ಧ್ರುವೀಕರಣದ ಸ್ಪಷ್ಟ ಸೂಚನೆ ನೀಡಿದೆ.
ಈ ಹಿಂದೆ 2 ಬಾರಿ ಜಯಲಲಿತಾ ರಾಜೀನಾಮೆಯಿಂದ ತೆರವಾಗಿದ್ದ ಮುಖ್ಯಮಂತ್ರಿ ಸ್ಥಾನವನ್ನು ಪನ್ನೀರ್ ಸೆಲ್ವಂ ಅವರು ಅಲಂಕರಿಸಿದ್ದರಲ್ಲದೆ ನಿಧನಾನಂತರವೂ ಸಿಎಂ ಗಾದಿಗೇರಿದ್ದರು.
ಧಿಡೀರ್ ರಾಜಕೀಯ ಬೆಳವಣಿಗೆಯಲ್ಲಿ ಶಶಿಕಲಾ ನಟರಾಜನ್ ಅವರನ್ನು ಮುಖ್ಯಮಂತ್ರಿಯನ್ನಾಗಿಸುವ ತೀರ್ಮಾನ ಪಕ್ಷದಲ್ಲಿ ಕೇಳಿ ಬಂದ ಹಿನ್ನಲೆಯಲ್ಲಿ ಪನ್ನೀರ್ ಸೆಲ್ವಂ ಬಂಡೆದ್ದು ಜಯಲಲಿತಾ ಸಮಾಧಿ ಬಳಿ ಧ್ಯಾನಕ್ಕೆ ಕುಳಿತಿದ್ದರು.
ಬುಧವಾರ ಮರೀನಾ ಬೀಚ್ ಬಳಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ ಪನ್ನೀರ್ ಸೆಲ್ವಂ ‘ತಮ್ಮ ಪಕ್ಷ ನಿಷ್ಠೆ ಪ್ರಶ್ನಿಸಿಬೇಡಿ, ಅಮ್ಮಾ ಜಯಲಲಿತಾರಲ್ಲಿ ನಾವು ದೇವರನ್ನು ಕಂಡಿದ್ದೆವು’ ಎಂದು ಮುಖ್ಯಮಂತ್ರಿ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ವಾಪಾಸ್ ಪಡೆಯುವುದಾಗಿ ಹೇಳಿದ್ದರು.ಅಮ್ಮಾ ಸಾವಿನ ಕುರಿತು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸುವುದಾಗಿ ಘೋಷಿಸಿದ್ದರು.
ಸುದ್ದಿಗೋಷ್ಠಿ ಮುಕ್ತಾಯವಾಗುತ್ತಿದ್ದಂತೆ ಸಾಮಾಜಿಕ ತಾಣಗಳಲ್ಲಿ ಪನ್ನೀರ್ ಸೆಲ್ವಂ ಅವರಿಗೆ ತಮಿಳು ನಾಡಿನ ಮತ್ತು ದೇಶದ ಜನರ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ಸಾವಿರಾರು ಟ್ವೀಟ್‌ಗಳು, ಚರ್ಚೆಗಳು ನಡೆಯುತ್ತಿದ್ದು ಯಾವುದೇ ಕಾರಣಕ್ಕೂ ಪನ್ನೀರ್ ಸೆಲ್ವಂ ಅವರು ಶಶಿಕಲಾ ಅವರಿಗೆ ಸ್ಥಾನ ಬಿಟ್ಟು ಕೊಡಬಾರದೆಂದು ಮನವಿ ಮಾಡಿದ್ದಾರೆ. ಶಶಿಕಲಾ ಜನರ ಆಯ್ಕೆ ಅಲ್ಲ ಪನ್ನೀರ್ ಸೆಲ್ವಂ ಅವರು ಜನ ಪ್ರತಿನಿಧಿಯಾಗಿದ್ದು ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು ಎಂದು ನೂರಾರು ಜನರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.