ಆತ್ಮಗಳ ಆಟಗಳನ್ನು ನೀವು ಹೇಗೆ ಬೇಕಾದರೂ ತೋರಿಸಬಹುದು. ಇದು ಹಾರರ್ ಸಿನಿಮಾಕ್ಕಿರುವ ಫ್ರೀಡಂ. ಹಾರರ್ ಸಿನಿಮಾಗಳಲ್ಲಿ ಆತ್ಮಗಳನಲ್ಲಿ ನೀವು ಬೆನ್ನಲ್ಲಾದರೂ ನೇತಾಕಬಹುದು ಅಥವಾ ಮನೆ ತುಂಬಾ ಓಡಾಡಿಸಬಹುದು… ನೀವು ಯಾವ ದೇಶದಿಂದಾದರೂ ಆತ್ಮಗಳನ್ನು ತಂದುಬಿಡಬಹುದು. ಅದು ನಿರ್ದೇಶಕನ ಕಲ್ಪನೆಗೆ ಬಿಟ್ಟಿದ್ದು.
ಈ ವಾರ ತೆರೆಕಂಡಿರುವ “ಓ’ ಸಿನಿಮಾ ಒಂದು ಹಾರರ್ ಸಿನಿಮಾವಾಗಿ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಹಾರರ್ ಸಿನಿಮಾವೆಂದರೆ ಒಂದಷ್ಟು ರೆಗ್ಯುಲರ್ ಪ್ಯಾಟರ್ನ್ಗಳಿವೆ. ಆದರೆ, “ಓ’ ಸಿನಿಮಾದಲ್ಲಿ ನಿರ್ದೇಶಕರು ಆ ಸೂತ್ರವನ್ನು ಬ್ರೇಕ್ ಮಾಡಿ, ಹೊಸದನ್ನು ನೀಡಲು ಪ್ರಯತ್ನಿಸಿದ್ದಾರೆ.
ಸಿನಿಮಾದ ಕಥೆಯ ಬಗ್ಗೆ ಹೇಳುವುದಾದರೆ ಇಲ್ಲಿ ಆತ್ಮಗಳು ಗಡಿ ದಾಟಿದವು. ಚೀನಿ ಮಾಂತ್ರಿಕನೊಬ್ಬ ಬರೆದಿಟ್ಟ ಪುಸ್ತಕದಿಂದ ಎದ್ದು ಬರುವ ಆತ್ಮಗಳು. ಅಲ್ಲಿಂದ ಈ ಸಿನಿಮಾದ ಅಸಲಿ ಆಟ ಶುರು. ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುತ್ತಾ, ಅಲ್ಲಲ್ಲಿ ಭಯ ಬೀಳಿಸುತ್ತಾ ಸಾಗುವ “ಆತ್ಮ’ಗಳ ಆಟ ಹಾರರ್ ಪ್ರಿಯರಿಗೆ ಮಜಾ ಎನಿಸುತ್ತದೆ. ಈ ಆತ್ಮಗಳ ಆಟಕ್ಕೆ ನಾಂದಿ ಅಕ್ಕ-ತಂಗಿಯರು. ಅಕ್ಕ-ತಂಗಿಯರ ನಡುವಿನ ಪ್ರೀತಿಯ ವಿಷಯ ನೇರವಾಗಿ “ಆತ್ಮ’ಗಳ ಆಟಕ್ಕೆ ಆಹ್ವಾನ ನೀಡುತ್ತದೆ. ಈ ಆಟದಲ್ಲಿ ಸಿಗುವ ಟ್ವಿಸ್ಟ್‌ಗಳು ಸಿನಿಮಾದ ನಿಜವಾದ ಜೀವಾಳ. ಈ ಚಿತ್ರದ ಪ್ಲಸ್ ಪಾಯಿಂಟ್ ಎಂದರೆ ನಿರ್ದೇಶಕರು ಕೆಲವೇ ಕೆಲವು ಪಾತ್ರಗಳನ್ನು ಬಳಸಿಕೊಂಡು ಇಡೀ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ಪ್ರತಿ ಪಾತ್ರಕ್ಕೂ ಮಹತ್ವವಿದೆ.
ನಾಯಕಿಯರಾದ ಮಿಲನಾ ಹಾಗೂ ಅಮೃತಾ ಈ ಸಿನಿಮಾದ ಹೈಲೈಟ್. ಇಬ್ಬರೂ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಉಳಿದಂತೆ ಚಿತ್ರದ ಛಾಯಾಗ್ರಹಣ, ಹಿನ್ನೆಲೆ ಸಂಗೀತ ಚಿತ್ರಕ್ಕೆ ಪೂರಕವಾಗಿದೆ. ಹಾರರ್ ಸಿನಿಪ್ರಿಯರು “ಓ’ ಎನ್ನಬಹುದು.
ಶಿವು