ಸದಾ ಲವಲವಿಕೆಯಿಂದ ಇರುವ ಹುಡುಗಿಯೊಬ್ಬಳು ಇದ್ದಕ್ಕಿದ್ದಂತೆ ಸಾವಿಗೀಡಾಗುತ್ತಾಳೆ. ಆಕೆಯ ಸಾವು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಅನುಮಾನದಿಂದ ಸಾವಿನ ತನಿಖೆಗೆ ಇಳಿಯುವ ಪೊಲೀಸ್ ಇನ್ಸ್‌ಪೆಕ್ಟರ್‌ಗೆ ನಿಧಾನವಾಗಿ ಅದರ ಹಿಂದಿನ ನಿಗೂಢ ಸತ್ಯದ ದರ್ಶನವಾಗುತ್ತದೆ. ಅಲ್ಲಿಯವರೆಗೂ ಪ್ರೀತಿ, ಪ್ರೇಮದ ಟ್ರ್ಯಾಕ್‌ನಲ್ಲಿ ಸಾಗುತ್ತಿದ್ದ ಚಿತ್ರಕಥೆ, ಕ್ರೈಂ-ಥ್ರಿಲ್ಲರ್‌ನತ್ತ ಹೊರಳುತ್ತದೆ. ಇದು ಈ ವಾರ ತೆರೆಗೆ ಬಂದಿರುವ “ಓ ಮನಸೇ’ ಸಿನಿಮಾದ ಕಥೆಯ ಎಳೆ.
ಸಿನಿಮಾದ ಹೆಸರೇ ಹೇಳುವಂತೆ, “ಓ ಮನಸೇ’ ಮನಸ್ಸಿನ ಸ್ನೇಹ, ಪ್ರೀತಿ, ಅನುಮಾನ, ಅನುಕಂಪ, ಪಶ್ಚಾತ್ತಾಪ ಹೀಗೆ ಎಲ್ಲದರ ಚಿತ್ರಣವಿರುವ ಚಿತ್ರ. ಅದೆಲ್ಲವನ್ನು ಹಿಡಿದು ಲವ್ ಕಂ ಕ್ರೈಂ-ಥ್ರಿಲ್ಲರ್ ಶೈಲಿಯಲ್ಲಿ ಸಿನಿಮಾವನ್ನು ಕಟ್ಟಿಕೊಡಲು ನಿರ್ದೇಶರು ಸಾಕಷ್ಟು ಶ್ರಮಿಸಿದ್ದಾರೆ. ಆದರೆ ಚಿತ್ರಕಥೆ, ನಿರೂಪಣೆ ಮತ್ತು ಕೆಲವೆಡೆ ಅತಿಯೆನಿಸುವ ಪಾತ್ರಗಳು ಪ್ರೇಕ್ಷಕರ ಮನಮುಟ್ಟುವ ಸರಾಗ ಅವಕಾಶಕ್ಕೆ ಅಲ್ಲಲ್ಲಿ ಬ್ರೇಕ್ ಹಾಕುವಂತಿದೆ. ಅದನ್ನು ಹೊರತುಪಡಿಸಿದರೆ, ಸುಂದರ ಲೊಕೇಶನ್‌ಗಳು, ಮೆಲೋಡಿ ಹಾಡುಗಳು ಮನಸ್ಸಿಗೆ ಮುದ ನೀಡಿ ನೋಡುಗರನ್ನು ಹಾಗೆಯೇ ಮುಂದಕ್ಕೆ ಕರೆದುಕೊಂಡು ಹೋಗುತ್ತವೆ.
ಇನ್ನು ನಟ ವಿಜಯ ರಾಘವೇಂದ್ರ ಖಡಕ್ ಪೊಲೀಸ್ ಅಧಿಕಾರಿಯಾಗಿ ಮತ್ತು ಪ್ರೇಮಿಯಾಗಿ ಎರಡು ಶೇಡ್‌ನ ಪಾತ್ರಗಳಲ್ಲಿ ಕಾಣಿಸಿಕೊಂಡರೆ, ನಟ ಧರ್ಮ ಕೀರ್ತಿರಾಜ್ ಕೂಡ ಎರಡು ಶೇಡ್‌ನ ಪಾತ್ರಗಳನ್ನು ನಿಭಾಯಿಸಿದ್ದಾರೆ. ನಾಯಕಿ ಸಂಚಿತಾ ಪಡುಕೋಣೆ ಹೋಮ್ಲಿಲುಕ್‌ನಲ್ಲಿ ಇಷ್ಟವಾಗುತ್ತಾರೆ. ಉಳಿದಂತೆ ಸಾಧುಕೋಕಿಲ, ಶೋಭರಾಜ್, ಹರೀಶ್ ರಾಯ್, ಚಿಕ್ಕಹೆಜ್ಜಾಜಿ ಮಹಾದೇವ್, ಜಯರಾಮ್, ಗಣೇಶ್‌ರಾವ್ ಕೇಸರ್ಕರ್ ಹೀಗೆ ಬೃಹತ್ ಕಲಾವಿದರ ದಂಡೇ ಸಿನಿಮಾದಲ್ಲಿದ್ದು, ಬಹುತೇಕರು ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ತಾಂತ್ರಿಕವಾಗಿ ಸಿನಿಮಾದ ಛಾಯಾಗ್ರಹಣ ಮತ್ತು ಸಂಗೀತ ಹೈಲೈಟ್ಸ್ ಎನ್ನಬಹುದು. ಕೊಡಗಿನ ಹಸಿರು, ಕಡಲತೀರ, ಬ್ಯಾಂಕಾಕ್ ಎಲ್ಲದರ ಚಿತ್ರಣ “ಓ ಮನಸೇ’ ದೃಶ್ಯಗಳನ್ನು ಶ್ರೀಮಂತವಾಗಿ ಕಾಣುವಂತೆ ಮಾಡಿದೆ. ಜೆಸ್ಸಿಗಿಫ್ಟ್ ಸಂಗೀತ ಸಂಯೋಜನೆಯ ಹಾಡುಗಳು ಅಲ್ಲಲ್ಲಿ ಗುನುಗುವಂತೆ ಮಾಡುತ್ತದೆ. ಸ್ನೇಹ, ಪ್ರೀತಿ-ಪ್ರೇಮದ ಜೊತೆಗೆ ಕ್ರೈಂ-ಥ್ರಿಲ್ಲರ್ ಶೈಲಿಯನ್ನು ಬಯಸುವವರು ಒಮ್ಮೆ “ಓ ಮನಸೇ’ ಸಿನಿಮಾ ನೋಡಲು ಮನಸ್ಸು ಮಾಡಲು ಅಡ್ಡಿಯಿಲ.
ಜಿ.ಎಸ್.ಕಾರ್ತಿಕ ಸುಧನ್