Advertisement

NZvsAFG: ಇನ್ನೆಂದೂ ಇಲ್ಲಿ ಬರುವುದಿಲ್ಲ..: ಭಾರತದ ಮೈದಾನದ ಬಗ್ಗೆ ಕಿಡಿಕಾರಿದ ಅಫ್ಘಾನಿಸ್ತಾನ

04:48 PM Sep 10, 2024 | Team Udayavani |

ಗ್ರೇಟರ್‌ ನೋಯ್ಡಾ: ನ್ಯೂಜಿಲ್ಯಾಂಡ್‌ ಮತ್ತು ಅಫ್ಘಾನಿಸ್ಥಾನ (New Zealand Vs Afghanistan) ನಡುವಣ ಏಕೈಕ ಟೆಸ್ಟ್‌ ಪಂದ್ಯದ ತಾಣವಾದ ಗ್ರೇಟರ್‌ ನೋಯ್ಡಾದ ಶಹೀದ್‌ ವಿಜಯ್‌ ಸಿಂಗ್‌ ಪಥಿಕ್ ಕ್ರೀಡಾ ಸಂಕೀರ್ಣದ (Shaheed Vijay Singh Pathik Sports Complex) ಹೊರ ಮೈದಾನ ಒದ್ದೆಯಾಗಿದ್ದರಿಂದ ಎರಡನೇ ದಿನದ ಆಟವೂ ರದ್ದಾಗಿದೆ.‌

Advertisement

ಒದ್ದೆ ಮೈದಾನದ ಕಾರಣದಿಂದ ಪಂದ್ಯದಲ್ಲಿ ಇದುವರೆಗೆ ಒಂದೇ ಒಂದು ಬಾಲ್‌ ಎಸೆಯಲು ಸಾಧ್ಯವಾಗಲಿಲ್ಲ. ಪಂದ್ಯಕ್ಕೂ ಮೊದಲು ನ್ಯೂಜಿಲ್ಯಾಂಡ್‌ ಗೆ ಅಭ್ಯಾಸ ನಡೆಸಲೂ ಸಾಧ್ಯವಾಗಿರಲಿಲ್ಲ.

ರಾತ್ರಿಯ ತುಂತುರು ಮಳೆಯ ಹೊರತಾಗಿ, ಸೋಮವಾರದಾದ್ಯಂತ ಮೈದಾನದಲ್ಲಿ ಮಳೆ ಬಂದಿರಲಿಲ್ಲ. ಆದರೆ ಆಧುನಿಕ ಸೌಲಭ್ಯಗಳಿಲ್ಲದ ಕಾರಣ ಅನನುಭವಿ ಮೈದಾನದ ಸಿಬ್ಬಂದಿ ಮೈದಾನವನ್ನು ಸಿದ್ಧಪಡಿಸಲು ಹರಸಾಹಸ ಪಡಬೇಕಾಯಿತು.

ಅಫ್ಘಾನಿಸ್ತಾನದ ಕೋಚ್ ಜೊನಾಥನ್ ಟ್ರಾಟ್ ಕೂಡ ಮೈದಾನದ ಪರಿಸ್ಥಿತಿಯಿಂದ ಪ್ರಭಾವಿತರಾಗಿಲ್ಲ. ಸೋಮವಾರ ಮಧ್ಯಾಹ್ನ 1 ಗಂಟೆಯ ನಂತರ ಮಾತ್ರ ಸೂಪರ್ ಸಾಪರ್ಸ್ ಬಳಕೆ ಮಾಡಲಾಯಿತು.

Advertisement

ಕಳೆದ ವಾರ ಬಂದ ಮಳೆಯ ಕಾರಣದಿಂದ ಮೈದಾನ ಇನ್ನೂ ಒಣಗಿಲ್ಲ. ಸರಿಯಾದ ಡ್ರೈನೇಜ್‌ ವ್ಯವಸ್ಥೆ ಇಲ್ಲದಿರುವುದು ಕೂಡಾ ಇದಕ್ಕೆ ಕಾರಣವಾಗಿದೆ. ಎರಡನೇ ದಿನದಾಟದಲ್ಲಿ, ಮೈದಾನದ ಸಿಬ್ಬಂದಿ ಮೈದಾನದ ವಿವಿಧ ಪ್ರದೇಶಗಳಿಂದ ಹುಲ್ಲು ತುಂಡುಗಳನ್ನು ಕತ್ತರಿಸಿ ತೇವ ಪ್ರದೇಶಕ್ಕೆ ಸಾಗಿಸುತ್ತಿರುವ ದೃಶ್ಯಗಳು ಕಂಡುಬಂದವು. ಅಷ್ಟೇ ಅಲ್ಲದೆ, ಮೈದಾನದಲ್ಲಿ ಒದ್ದೆಯಾದ ಜಾಗಗಳನ್ನು ಒಣಗಿಸಲು ಫ್ಯಾನ್‌ ಗಳನ್ನು ಸಹ ಬಳಸಲಾಗಿದೆ.

15 ಹೊರಗುತ್ತಿಗೆ ಕಾರ್ಮಿಕರನ್ನು ಒಳಗೊಂಡಂತೆ ಸುಮಾರು 20-25 ಜನರಿಗೆ ನೆಲವನ್ನು ಒಣಗಿಸುವ ಕೆಲಸವನ್ನು ನೀಡಲಾಗಿತ್ತು. ಆದರೆ ಯಾವುದೇ ಫಲನೀಡದ ಕಾರಣದಿಂದ ಎರಡನೇ ದಿನದಾಟಕ್ಕೂ ತೆರೆ ಎಳೆಯಲಾಗಿದೆ.

ವರದಿಯ ಪ್ರಕಾರ ಮೈದಾನಕ್ಕೆ ಐದು ಸೂಪರ್‌ ಸಾಪರ್ರ್‌ ಗಳನ್ನು ತರಲಾಗಿದೆ. ಆದರೆ ಅವರು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಅಲ್ಲದೆ ಕವರ್‌ ಗಳನ್ನು ಕೂಡ ಸ್ಥಳೀಯ ಟೆಂಟ್‌ ಹೌಸ್‌ ನಿಂದ ಬಾಡಿಗೆಗೆ ಪಡೆಯಲಾಗಿದೆ. ಅಂತಾರಾಷ್ಟ್ರೀಯ ಪಂದ್ಯಕ್ಕೆ ಬೇಕಾದ ಸಿದ್ದತೆಯನ್ನು ಇಲ್ಲಿ ಮಾಡಲಾಗಿಲ್ಲ ಎನ್ನುವುದನ್ನು ಗಮನಿಸಬಹುದು.

ಸ್ಟೇಡಿಯಂನ ಕಳಪೆ ನಿರ್ವಹಣೆಯ ಕಾರಣದಿಂದ ಅಫ್ಘಾನಿಸ್ತಾನ ಕ್ರಿಕೆಟ್‌ ಮಂಡಳಿ ಅಸಮಾಧಾನಗೊಂಡಿದೆ. “ಇದೊಂದು ದೊಡ್ಡ ಅವ್ಯವಸ್ಥೆ, ನಾವು ಇಲ್ಲಿಗೆ ಮತ್ತೆ ಬರುವುದಿಲ್ಲ. ಆಟಗಾರರು ಸಹ ಇಲ್ಲಿನ ಸೌಲಭ್ಯಗಳ ಬಗ್ಗೆ ಅಸಮಾಧಾನ ಹೊಂದಿದ್ದಾರೆ” ಎಂದು ಎಸಿಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆಂದು ವರದಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next