ನ್ಯಾಮತಿ: ಅಂತ್ಯಸಂಸ್ಕಾರಕ್ಕೆ ಜಾಗ ನೀಡುವಂತೆ ಒತ್ತಾಯಿಸಿ ವ್ಯಕ್ತಿ ಯೊಬ್ಬರ ಮೃತದೇಹವನ್ನು ಗ್ರಾ.ಪಂ. ಕಚೇರಿಯಲ್ಲಿಟ್ಟು ಪ್ರತಿಭಟನೆ ನಡೆಸಿದ ಘಟನೆ ರವಿವಾರ ರಾತ್ರಿ ತಾಲೂಕಿನ ಬಸವನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಬಸವನಹಳ್ಳಿ ಗ್ರಾಮದ ದೊಡ್ಡಪ್ಪ (65) ರವಿವಾರ ಮೃತಪಟ್ಟಿದ್ದರು. ಶವಸಂಸ್ಕಾರಕ್ಕೆ ಹೋದಾಗ ಬೇರೆ ಸಮುದಾ
ಯದವರು ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿದ ಮೃತರ ಕುಟುಂಬಸ್ಥರು ಮೃತದೇಹವನ್ನು ಗ್ರಾ.ಪಂ. ಕಚೇರಿ ಒಳಗೆ ತಂದಿಟ್ಟರು. ಅಂತ್ಯಕ್ರಿಯೆಗೆ ಜಾಗ ನೀಡುವವರೆಗೂ ಮೃತದೇಹವನ್ನು ಇಲ್ಲಿಂದ ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದರು.
ವಿಷಯ ತಿಳಿದ ಶಾಸಕ ಡಿ.ಜಿ. ಶಾಂತನಗೌಡ, ತಹಶೀಲ್ದಾರ್ ಎಚ್.ಬಿ. ಗೋವಿಂದಪ್ಪ ಅವರು ಕಂದಾಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಆಗಮಿಸಿ ಮೃತರ ಕುಟುಂಬದವರು ಹಾಗೂ ಗ್ರಾಮಸ್ಥರೊಂದಿಗೆ ಚರ್ಚಿಸಿದರು.
ಬಳಿಕ ಎಸ್‌ಪಿ, ಸರ್ವೆ ಇಲಾಖೆ, ಕಂದಾಯ ಇಲಾಖೆ ಅಧಿ ಕಾರಿಗಳನ್ನು ಕರೆಸಿ ರುದ್ರಭೂಮಿಗೆ ಜಾಗ ಗುರುತಿಸಿ ಹದ್ದುಬಸ್ತು ಮಾಡಿಸಿಕೊಡುವುದಾಗಿ ಶಾಸಕರು ಭರವಸೆ ನೀಡಿ ತೆರಳಿದರು. ಅನಂತರ ಆಗಮಿಸಿದ ಡಿವೈಸ್‌ಪಿ ಪ್ರಶಾಂತ ಮುನ್ನೋಳಿ, ಗ್ರಾ.ಪಂ.ನಲ್ಲಿ ಮೃತದೇಹವನ್ನು ಇಡುವುದು ಕಾನೂನುಬಾಹಿರ ಎಂದು ಕುಟುಂಬ ಸ್ಥರು ಮತ್ತು ಗ್ರಾಮಸ್ಥರಿಗೆ ಮನವರಿಕೆ ಮಾಡಿದರು. ಗ್ರಾಮಕ್ಕೆ ರುದ್ರಭೂಮಿ ಜಾಗ ಒದಗಿಸುವುದಾಗಿ ಅಧಿಕಾರಿಗಳು ನೀಡಿದ ಭರವಸೆ ಮೇರೆಗೆ ಕುಟುಂಬಿಕರು ತಮ್ಮ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿಸಿದರು.