Advertisement

ನೆಟ್ಟಾರು: ಸಿಡಿಲಿನ ಅಬ್ಬರಕ್ಕೆ ನಡುಗಿದ ಕುಟುಂಬ

12:46 PM May 29, 2018 | Team Udayavani |

ಸುಳ್ಯ: ರವಿವಾರ ರಾತ್ರಿ 8.45ರ ಹೊತ್ತು. ಕೊಠಡಿಯೊಳಗೆ ಕೂತಿದ್ದೆವು. ಬಾಂಬ್‌ ಬಿದ್ದಂತೆ ಶಬ್ದವಾಯಿತು. ಎರಡು ನಿಮಿಷ ಉಸಿರು ನಿಂತಂತಾಯಿತು. ಮನೆ ಹೋಯಿತು. ಅದೃಷ್ಟವಶಾತ್‌ ನಮ್ಮಿಬ್ಬರ ಜೀವ ಉಳಿಯಿತು !

Advertisement

ಸಿಡಿಲಿನ ಘೋರ ಆಘಾತದಿಂದ ಕೂದಲೆಳೆಯ ಅಂತರದಲ್ಲಿ ಪಾರಾದ ಬೆಳ್ಳಾರೆ ಗ್ರಾಮದ ನೆಟ್ಟಾರಿನ ಬಡಗಿ ಶ್ರೀನಿವಾಸ ಮತ್ತು ಅವರ ಪತ್ನಿ ಕುಸುಮಾ ಕಣ್ಣೀರಿಡುತ್ತಲೇ ವಿವರಿಸಿದರು. ಸುದ್ದಿ ತಿಳಿದು ಮನೆ ಮುಂಭಾಗ ದಲ್ಲಿ ನೆರೆದಿದ್ದ ನೂರಾರು ಮಂದಿ ಘಟನೆಯ ತೀವ್ರತೆ ಕಂಡು ದಂಗಾದರು.

ಕಂದಕ ಸೃಷ್ಟಿಸಿತ್ತು
ಸಿಡಿಲು ಬಿದ್ದ ಸ್ಥಳದಿಂದ ಮನೆ ತನಕ ಮರ, ಕಲ್ಲು, ನೆಲವನ್ನು ಛೇದಿಸಿಕೊಂಡು, ಕಂದಕ ನಿರ್ಮಿಸಿ ಸಾಗಿ ಬಂದು ವಿದ್ಯುತ್‌ ಬೋರ್ಡ್‌ಗೆ ಅಪ್ಪಳಿಸಿದೆ. ಮಿಂಚು ಹರಿದ ನೆಲದಲ್ಲಿ ಮಣ್ಣು ಆಳೆತ್ತರಕ್ಕೆ ಚಿಮ್ಮಿದೆ. ಗೇರು ಮರವಿಡೀ ಮಣ್ಣಿನ ಬಣ್ಣಕ್ಕೆ ತಿರುಗಿರು ವುದು ಅದಕ್ಕೆ ಸಾಕ್ಷಿ.

ವಿದ್ಯುತ್‌ ಬೋರ್ಡ್‌ ತಲುಪಿದ ಸಿಡಿಲಿನ ವಿದ್ಯುತøವಾಹ ಅಲ್ಲಿಂದ ಅಡುಗೆ ಕೊಠಡಿ, ಡೈನಿಂಗ್‌ ಹಾಲ್‌, ಗೋಡೆ, ವಿದ್ಯುತ್‌ ಪರಿಕರಗಳನ್ನು ನಾಶಗೈದಿದೆ. ಎರಡು ಭಾಗದಲ್ಲಿ ಮನೆ ಛಾವಣಿಗೆ ಹಾನಿ ಉಂಟಾಗಿದೆ. ಮನೆ ಮಂದಿ ಕುಳಿತಿದ್ದ ಕೊಠಡಿಯಿಂದ 2 ಮೀ. ದೂರದಲ್ಲಿ ವಿದ್ಯುತ್‌ ವಯರಿಂಗ್‌ ಕಡಿದು, ಅಲ್ಲಿ ಸಿಡಿಲು ಶಕ್ತಿಹೀನವಾಗಿದೆ.
ಮನೆಯೊಳಗೆ ಕನ್ನಡಿ, ಗಡಿಯಾರ, ಪಾತ್ರೆ ಇತ್ಯಾದಿ ಸಾಮಗ್ರಿಗಳು ಚೆಲ್ಲಾ ಪಿಲ್ಲಿ ಯಾಗಿವೆ. ಬೊಬ್ಬೆ ಹಾಕಿದಾಗ ನೆರೆಮನೆಯವರು ಓಡಿ ಬಂದಿದ್ದರು. ಇವೆಲ್ಲವೂ ಕೆಲವೇ ಸೆಕೆಂಡ್‌ಗಳಲ್ಲಿ ನಡೆದು ಹೋಗಿದ್ದವು ಅನ್ನುತ್ತಾರೆ ಶ್ರೀನಿವಾಸ ಮತ್ತು ಕುಸುಮಾ.

ಅಡುಗೆ ಮನೆಗೆ ಹೋಗುವವರಿದ್ದರು
ಸಿಡಿಲು ಅಪ್ಪಳಿಸುವುದಕ್ಕೆ ಕೆಲವೇ ನಿಮಿಷಗಳ ಹಿಂದೆ ಕುಸುಮಾ ಅಡುಗೆ ಮನೆಗೆ ತೆರಳುವವರಿದ್ದರು. ಸಿಡಿಲು, ಮಳೆ ಜೋರಾಗಿದ್ದ ಕಾರಣ ಸ್ವಲ್ಪ ಕಾದಿದ್ದರು. ಕಣ್ಣ ಮುಂದೆಯೇ ಅಡುಗೆ ಮನೆ ಪೂರ್ಣ ಧ್ವಂಸವಾಗಿದೆ. ಮನೆಯಿಂದ 50 ಮೀ. ದೂರದ ತಾಳೆ ಮರಕ್ಕೆ ಮೊದಲು ಬಡಿದಿದೆ.

Advertisement

ಬಡ ಕುಟುಂಬ
ನೆಟ್ಟಾರು ಮುಖ್ಯ ರಸ್ತೆಯಿಂದ ತುಸು ದೂರದಲ್ಲಿ ಪೆರ್ಲಂಪಾಡಿ ಮಾರ್ಗದ ಸನಿಹದಲ್ಲಿ ಈ ಮನೆ ಇದೆ. ಶ್ರೀನಿವಾಸ ಕೆಲವು ತಿಂಗಳ ಹಿಂದೆಯಷ್ಟೆ ವಿವಾಹವಾಗಿದ್ದಾರೆ, ವೃತ್ತಿ ಯಲ್ಲಿ ಬಡಗಿ. ಓರ್ವ ಸಹೋದರ ಮನೆಯಲ್ಲಿದ್ದರೆ, ಇನ್ನೊಬ್ಬರು ವಿಟ್ಲದಲ್ಲಿ ಉದ್ಯೋಗದಲ್ಲಿದ್ದಾರೆ. ಪತ್ನಿ ಗೃಹಿಣಿ.

ಸರಕಾರ ಪ್ರಾಕೃತಿಕ ವಿಕೋಪ ನಿಧಿಯಡಿ ನೀಡುವ ಪರಿಹಾರ ಮೊತ್ತ ದಿಂದ ಮನೆ ಕಟ್ಟಲು ಸಾಧ್ಯವಿಲ್ಲ. ಸಂಪೂರ್ಣ ಹಾನಿ ಆಗಿರುವ ಮನೆ ದುರಸ್ತಿ ಅಸಾಧ್ಯ. ಮರು ನಿರ್ಮಾಣಕ್ಕೆ  ಕನಿಷ್ಠ ಐದಾರು ಲಕ್ಷ ರೂ. ಬೇಕಿದೆ. ಅಲ್ಲಿಯ ತನಕ ಸಹೋದರರ ಮನೆಯಲ್ಲಿ ವಾಸ ಮಾಡಬೇಕಾದ ಸ್ಥಿತಿ ಉಂಟಾಗಿದೆ.
ಘಟನಾ ಸ್ಥಳಕ್ಕೆ ಶಾಸಕ ಎಸ್‌. ಅಂಗಾರ ಭೇಟಿ ನೀಡಿದ್ದಾರೆ.

ನೆಂಟರ ಮನೆಗೆ ತೆರಳಿದ್ದರು
ಶ್ರೀನಿವಾಸ ಅವರ ಸಹೋದರ ಕುಸುಮಾಧರ ಅವರು ರವಿವಾರ ಬೆಳಗ್ಗೆ ಸಂಬಂಧಿಕರ ಮನೆಗೆ ತೆರಳಿ ದ್ದರು. ಇನ್ನೋರ್ವ ಸಂಬಂಧಿ ಈ ಮನೆಗೆ ಬಂದಿದ್ದು, ಸಂಜೆ 4 ಗಂಟೆಗೆ ಮರಳಿದ್ದರು. ಶ್ರೀನಿವಾಸ ಮತ್ತು ಪತ್ನಿ ಕುಸುಮಾ ಮಾತ್ರ ಉಳಿದುಕೊಂಡಿದ್ದರು. ಕುಸುಮಾಧರ ನಿದ್ರಿಸುತ್ತಿದ್ದ ಕೊಠಡಿ ನಾಶವಾಗಿದೆ. ಭಗವಂತನೇ ಪ್ರಾಣ ಉಳಿಸಿದ ಅನ್ನುತ್ತಾರೆ ಸಂಬಂಧಿಕರ ಮನೆಗೆ ತೆರಳಿದ್ದ  ಕುಸುಮಾಧರ.

Advertisement

Udayavani is now on Telegram. Click here to join our channel and stay updated with the latest news.

Next