ಬ್ಯಾಡಗಿ: ಬಾಲ್ಯದಲ್ಲಿರುವ ಮಗುವಿನ ಆರೋಗ್ಯ ಅದರ ಜೀವಿತಾವಧಿ ವರೆಗೂ ಕಾಯ್ದುಕೊಳ್ಳಲಿದೆ. ಹೀಗಾಗಿ ತಾಯಂದಿರು ಮಕ್ಕಳಿಗೆ ಕೇವಲ ಜನ್ಮ ನೀಡಿದರಷ್ಟೇ ಸಾಲದು ಯಾವುದೇ ಕಾರಣಕ್ಕೂ ಅಪೌಷ್ಟಿಕತೆಯಿಂದ ಬಳಲದಂತೆ ನೋಡಿಕೊಳ್ಳುವುದು ಅವರೆಲ್ಲರ ಬಹುದೊಡ್ಡ ಜವಾಬ್ದಾರಿ ಎಂದು ಸಿಡಿಪಿಒ ರಾಮಲಿಂಗಪ್ಪ ಅರಳಗುಪ್ಪಿ ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ಥಳೀಯ ಶಿಶು ಅಭಿವೃದ್ಧಿ ಇಲಾಖೆ ಅಂಗನವಾಡಿ ಕಾರ್ಯಕರ್ತೆಯರ ಸಹಕಾರದೊಂದಿಗೆ ಆಯೋಜಿಸಿದ್ದ ಪೋಷಣ ಅಭಿಯಾನ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮಕ್ಕಳು ಅಪೌಷ್ಟಿಕತೆಯಿಂದ ಬಳಲಾರಂಭಿಸಿದರೆ ಬದುಕಿನುದ್ದಕ್ಕೂ ಅದು ನರಳಬೇಕಾಗುತ್ತದೆ. ಮಗುವಿಗೆ ಎಲ್ಲ ಸೌಲಭ್ಯಗಳು ದೊರಕಿದರೂ ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ. ಹೀಗಾಗಿ ಅಪೌಷ್ಟಿಕತೆಯಾಗದಂತೆ ನೋಡಿಕೊಳ್ಳಬೇಕಾಗಿದೆ ಎಂದರು.
ಮಗುವಿನ ಆರೋಗ್ಯ ಗರ್ಭಾವಸ್ಥೆಯಿಂದಲೇ ಪ್ರಾರಂಭವಾಗುತ್ತದೆ. ಬಾಣಂತಿ ವ್ಯವಸ್ಥೆಯಲ್ಲೇ ಆರೋಗ್ಯಕರ ಅಥವಾ ಪೌಷ್ಟಿಕ ಆಹಾರ ಸೇವನೆ ಮಾಡುವುದರಿಂದ ಹುಟ್ಟುವ ಮಗು ದಷ್ಟಪುಷ್ಟವಾಗಿ ಪೌಷ್ಟಿಕವಾಗಿ ಜನ್ಮ ತಾಳಲಿದೆ. ಬಳಿಕ ಸುಮಾರು 10 ರಿಂದ 12 ವರ್ಷದವರೆಗೂ ಆ ಮಗುವಿನ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲ ಪೌಷ್ಟಿಕಾಂಶಗಳನ್ನು ಒದಗಿಸಿಕೊಟ್ಟಲ್ಲಿ ಮುಂದೊಂದು ದಿವಸ ಅದೇ ಮಗುವು ಆರೋಗ್ಯವಂತ ಸಮಾಜದ ಸೃಷ್ಟಿಕರ್ತನಾಗಬಹುದು ಎಂದರು.
ಬಾಣಂತಿ ಸೇರಿದಂತೆ ಮಕ್ಕಳ ಪೋಷಣೆಗೆ ಶಿಶು ಅಭಿವೃದ್ಧಿ ಇಲಾಖೆ ಸದಾ ಸನ್ನದ್ಧವಾಗಿದೆ. ಬಾಣಂತಿಯರು ಯಾವುದೇ ಕಾರಣಕ್ಕೂ ಮುಜುಗುರಪಟ್ಟುಕೊಳ್ಳದೇ ಸರ್ಕಾರ ನಿರ್ದೇಶಿಸಿದಂತೆ ನಡೆದುಕೊಳ್ಳಬೇಕು ಮತ್ತು ಉಚಿತವಾಗಿ ಕೊಡ ಮಾಡಿದ ವಸ್ತುಗಳನ್ನು ಪಡೆದು ಇಲಾಖೆಯ ಕಾರ್ಯಕ್ರಮಗಳಿಗೆ ಸ್ಪಂದಿಸುವ ಮೂಲಕ ಕೈಜೋಡಿಸುಂತೆ ಕರೆ ನೀಡಿದರು.
ಮೇಲ್ವಚಾರಕಿ ಮಂಜುಳಾ ಮಣ್ಣಮ್ಮನವರ, ಉಷಾ ಸೊಪ್ಪಿನ, ಹೇಮಾ ಅಸಾದಿ, ಛಾಯಾ ತಂಬಾಕದ, ಅನಿತಾ ಮೋಟೆಬೆನ್ನೂರ, ಹೇಮಾ ಎಲಿ, ಸುಮಿತ್ರ, ವನಜಾಕ್ಷಿ ಆಡಿನವರ ಸುಧಾ ಅಂಗಡಿ, ಫಾತೀಮಾ ಹುಬ್ಬಳ್ಳಿ, ಮಂಜುಳ ಪಾಟೀಲ, ನಿರ್ಮಲ ಕರಮುಡಿ, ಚನ್ನಮ್ಮ ತಳವಾರ, ಚನ್ನಮ್ಮ ಹಿರೇಮನಿ, ಮಂಗಳಾ ಭೋವಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.