ಹುಬ್ಬಳ್ಳಿ: ಪೌಷ್ಟಿಕಾಂಶದ ಪ್ರಯೋಜನ, ಅನ್ನದ ಮಹತ್ವವನ್ನು ಮಕ್ಕಳಿಗೆ ಮನನ ಮಾಡಿಕೊಡಲು ಇಸ್ಕಾನ್ ತನ್ನ 38 ಅಕ್ಷಯಪಾತ್ರಾ ಮೂಲಕ ಸೆಪ್ಟೆಂಬರ್‌ನಲ್ಲಿ 12 ರಾಜ್ಯಗಳಲ್ಲಿ ಜಾಗೃತಿ ಅಭಿಯಾನ ಕೈಗೊಳ್ಳಲಿದೆ. ಅಭಿಯಾನದಲ್ಲಿ ಮಕ್ಕಳ ಸಹಿಯೊಂದಿಗೆ ಸಂಗ್ರಹಿಸಿದ ಕಾರ್ಡ್‌ಗಳ ಮಾಹಿತಿಯನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಕಳುಹಿಸಲಾಗುತ್ತದೆ. ಇಸ್ಕಾನ್ ಅಕ್ಷಯಪಾತ್ರೆ ಕೇಂದ್ರ ಹಾಗೂ ಆಯಾ ರಾಜ್ಯ ಸರ್ಕಾರಗಳ ಸಹಕಾರದೊಂದಿಗೆ ದೇಶಾದ್ಯಂತ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಪೂರೈಸುತ್ತಿದೆ. ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿಯ ಹಸಿವು ನಿವಾರಣೆ, ಉತ್ತಮ ಆರೋಗ್ಯ, ಯೋಗಕ್ಷೇಮ ಅರಿವು ಹಾಗೂ ರಾಷ್ಟ್ರೀಯ ಪೌಷ್ಟಿಕ ಮಾಸಾಚರಣೆ ಅಂಗವಾಗಿ ದೇಶಾದ್ಯಂತ ಅಭಿಯಾನಕ್ಕೆ ಮುಂದಾಗಿದೆ.
ಇಸ್ಕಾನ್ ಅಕ್ಷಯಪಾತ್ರಾ ರಾಜ್ಯದಲ್ಲಿ ಅಲ್ಲದೆ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ತಮಿಳುನಾಡು, ರಾಜಸ್ಥಾನ, ಉತ್ತರ ಪ್ರದೇಶ, ಆಸ್ಸಾಂ, ಛತ್ತೀಸಗಡ, ಗುಜರಾತ್, ಓಡಿಶಾ ಹಾಗೂ ತ್ರಿಪುರಾಗಳಲ್ಲಿ 38 ಅಡುಗೆ ಮನೆ(ಕಿಚನ್)ಗಳನ್ನು ಹೊಂದಿದೆ. ಕೇಂದ್ರ ಸರ್ಕಾರ 1995ರ ಆಗಸ್ಟ್ 15ರಂದು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಪೌಷ್ಟಿಕಾಂಶ ಬೆಂಬಲ ಯೋಜನೆ ಘೋಷಿಸಿತ್ತು. ಅಪೌಷ್ಟಿಕತೆಯಿಂದ ಮಕ್ಕಳ ಸಾವಿನ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ 2001ರಲ್ಲಿ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಪೌಷ್ಟಿಕಯುತ ಮಧ್ಯಾಹ್ನದ ಬಿಸಿಯೂಟದ ಕಡ್ಡಾಯ ಅನುಷ್ಠಾನಕ್ಕೆ ಆದೇಶಿಸಿತ್ತು. ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಬಿಸಿಯೂಟ ನೀಡಿಕೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮಹತ್ವದ ಪಾಲುದಾರಿಕೆ ಹೊಂದುವ ನಿಟ್ಟಿನಲ್ಲಿ ಇಸ್ಕಾನ್ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ನೀಡಿಕೆಗೆ 2000 ಇಸ್ವಿಯಲ್ಲಿ ಅಕ್ಷಯಪಾತ್ರಾ ಯೋಜನೆ ಆರಂಭಿಸಿತ್ತು.
ಕೇವಲ ಐದು ಶಾಲೆಗಳ ಸುಮಾರು 1,500 ವಿದ್ಯಾರ್ಥಿಗಳೊಂದಿಗೆ ಆರಂಭವಾದ ಅಕ್ಷಯಪಾತ್ರಾ ಮಧ್ಯಾಹ್ನದ ಬಿಸಿಯೂಟ ಇಂದು ದೇಶದಲ್ಲಿ ಒಟ್ಟು 38 ಅಕ್ಷಯಪಾತ್ರಾ ಕಿಚನ್‌ಗಳಿಂದ ಸುಮಾರು 14,214 ಶಾಲೆಗಳ, ಒಟ್ಟು 17,61,734 ಮಕ್ಕಳಿಗೆ ನಿತ್ಯವೂ ಮಧ್ಯಾಹ್ನದ ಬಿಸಿಯೂಟ ಪೂರೈಸುತ್ತಿದೆ. 2020ರ ವೇಳೆಗೆ 5 ಮಿಲಿಯನ್ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಪೂರೈಕೆ ಗುರಿ ಹೊಂದಿದೆ. ರಾಜ್ಯದಲ್ಲಿ ಬೆಂಗಳೂರಿನಲ್ಲಿ ಎರಡು ಸೇರಿದಂತೆ ಜಿಗಣಿ, ಹುಬ್ಬಳ್ಳಿ, ಬಳ್ಳಾರಿ, ಮೈಸೂರು ಹಾಗೂ ಮಂಗಳೂರಿನಲ್ಲಿ ಕಿಚನ್‌ಗಳು ಇವೆ. ಒಟ್ಟು 2,866 ಶಾಲೆಗಳ, ಸುಮಾರು 4,43,476 ಮಕ್ಕಳಿಗೆ ನಿತ್ಯ ಮಧ್ಯಾಹ್ನದ ಬಿಸಿಯೂಟ ಪೂರೈಸಲಾಗುತ್ತಿದೆ.
ಮಕ್ಕಳು-ಯುವಕರಿಗೆ ಜಾಗೃತಿ: ಮಧ್ಯಾಹ್ನದ ಬಿಸಿಯೂಟದಲ್ಲಿ ಆಗತ್ಯ ಪೌಷ್ಟಿಕಾಂಶ ಇರಬೇಕು ಎಂಬ ಹಿನ್ನೆಲೆಯಲ್ಲಿ ಸಾಂಬಾರ್‌ನಲ್ಲಿ ಕ್ಯಾರೇಟ್ ಸೇರಿದಂತೆ ವಿವಿಧ ತರಕಾರಿ ಹಾಗೂ ಪಲ್ಯ ಹಾಕಲಾಗುತ್ತದೆ. ಆದರೆ, ಅನೇಕ ವಿದ್ಯಾರ್ಥಿಗಳು ಭೋಜನ ವೇಳೆ ತರಕಾರಿ-ಪಲ್ಯವನ್ನು ಬದಿಗಿರಿಸಿ ಅನ್ನ-ಸಾಂಬಾರ್ ಸೇವನೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಮಕ್ಕಳಿಗೆ ಇದರ ಬಗ್ಗೆ ಜಾಗೃತಿ ಮೂಡಿಸಲು ರಾಷ್ಟ್ರೀಯ ಪೌಷ್ಟಿಕಾಂಶ ಮಾಸಾಚರಣೆಯನ್ನು ಬಳಸಿಕೊಳ್ಳಲು ಮುಂದಾಗಿದೆ.
ಪ್ರಾಥಮಿಕ ಶಾಲೆ ಮಕ್ಕಳಿಗೆ ಸುಮಾರು 450 ಕ್ಯಾಲರಿ, 12 ಗ್ರಾಂ ಪ್ರೋಟಿನ್ ಹಾಗೂ ವಿವಿಧ ಖನಿಜಾಂಶಯಕ್ತ ಬಿಸಿಯೂಟ ನೀಡುತ್ತಿದ್ದರೆ, ಪ್ರೌಢಶಾಲಾ ಮಕ್ಕಳಿಗೆ 700 ಕ್ಯಾಲರಿ, 20 ಗ್ರಾಂ ಪ್ರೋಟಿನ್ ಹಾಗೂ ಖನಿಜಾಂಶಯುಕ್ತ ಆಹಾರ ನೀಡಲಾಗುತ್ತದೆ. ಪೌಷ್ಟಿಕಾಂಶದ ಪ್ರಯೋಜನ ಕುರಿತು ಶಾಲೆ ಮುಖೋಪಾಧ್ಯಾಯ, ಪ್ರಾಂಶುಪಾಲರು ಹಾಗೂ ವಿದ್ಯಾರ್ಥಿಗಳಿಗೆ ಅಗತ್ಯ ಮಾಹಿತಿ ನೀಡುವ ಮೂಲಕ ಜಾಗೃತಿ ಮೂಡಿಸಲಾಗುತ್ತದೆ. ಶಾಲೆಗಳಲ್ಲಿ ಕರಪತ್ರ, ಭಾಷಣೆ, ಸಂವಾದ ಮೂಲಕ ಮಕ್ಕಳಿಗೆ ದೇಹಕ್ಕೆ ಪೌಷ್ಟಿಕಾಂಶದ ಅವಶ್ಯಕತೆ, ಪೌಷ್ಟಿಕಾಂಶ ಯಾವ ಮೂಲಗಳಿಂದ ದೇಹಕ್ಕೆ ಸಿಗಲಿದೆ ಎಂಬುದರ ಕುರಿತು ಮನವರಿಕೆ ಮಾಡಿಕೊಡಲಾಗುತ್ತದೆ.
ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ಪೌಷ್ಟಿಕಾಂಶದ ಮಹತ್ವದ ಜತೆಗೆ ಜನ್ಮದಿನ, ವಿವಾಹ ವಾರ್ಷಿಕೋತ್ಸವ ಇನ್ನಿತರ ದಿನಗಳ ಆಚರಣೆ ವೇಳೆ ನಿರ್ಗತಿಕರು, ಬಡವರಿಗೆ ಕೈಲಾದಮಟ್ಟಿಗೆ ಅನ್ನಸಂತರ್ಪಣೆ ಮೂಲಕ ಹಸಿವು ನಿವಾರಣೆಗೆ ಅಳಿಲು ಸೇವೆಗೆ ಮುಂದಾಗುವಂತೆ ಪ್ರೇರಣೆ ನೀಡುವ ಕೆಲಸ ಮಾಡಲಾಗುತ್ತದೆ. ಪೌಷ್ಟಿಕಾಂಶದ ಮಹತ್ವ ವಿವರಣೆ ಜತೆಗೆ ಪೌಷ್ಟಿಕಾಂಶ ಸೇವನೆ ಕುರಿತು ಮಕ್ಕಳಿಂದ ಪ್ರತಿಜ್ಞೆ ಮಾಡಿಸುವುದರ ಜತೆಗೆ ಪ್ರತಿಜ್ಞಾ ಕಾರ್ಡ್‌ಗೆ ಸಹಿ ಪಡೆಯಲಾಗುತ್ತದೆ.
ಪ್ರಧಾನಿಗೆ ವರದಿ
ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಛ ಭಾರತ ಅಭಿಯಾನ ಯೋಜನೆ ಘೋಷಣೆ ವೇಳೆ ಇಸ್ಕಾನ್ ಸಂಸ್ಥೆಗೂ ಪತ್ರ ಬರೆದು, ಮಹತ್ತರ ಅಭಿಯಾನದಲ್ಲಿ ಪಾಲುದಾರರಾಗುವಂತೆ ಕೋರಿದ್ದರು. ಇಸ್ಕಾನ್ ಸ್ವಚ್ಛ ಭಾರತ ಆಭಿಯಾನದಲ್ಲಿ ತೊಡಗಿಕೊಂಡು ತಾನು ಕೈಗೊಂಡ ಕಾರ್ಯದ ಸಚಿತ್ರ ವರದಿಯನ್ನು ಪ್ರಧಾನಿಯವರಿಗೆ ಕಳುಹಿಸಿತ್ತು. ಇದೀಗ ಪೌಷ್ಟಿಕಾಂಶದ ಅಭಿಯಾನದ ಮೂಲಕ ಮಕ್ಕಳಿಂದ ಸಹಿ ಪಡೆದ ಕಾರ್ಡ್‌ಗಳ ಮಾಹಿತಿಯೊಂದಿಗೆ ಪ್ರಧಾನಿಯವರಿಗೆ ವರದಿ ಸಲ್ಲಿಸಲು ಹಾಗೂ ಇದರ ಕುರಿತು ಮನ್ ಕಿ ಬಾತ್‌ನಲ್ಲಿ ಪ್ರಸ್ತಾಪಿಸಲು ಮನವಿ ಮಾಡಲು ಇಸ್ಕಾನ್ ನಿರ್ಧರಿಸಿದೆ.
ಅಮರೇಗೌಡ ಗೋನವಾರ