Advertisement

ಅಡಿಕೆ ಮರ ಸ್ಥಳಾಂತರ ಕಾರ್ಯಾಚರಣೆ ಯಶಸ್ವಿ 

12:12 PM Dec 28, 2018 | |

ಪುತ್ತೂರು : ಪರ್ಯಾಯ ಕೃಷಿ ಕಾರ್ಯಕ್ಕಾಗಿ ಅಡಿಕೆ ಗಿಡ ಕಡಿಯಲು ಮುಂದಾಗಿದ್ದೀರಾದರೆ, ಆ ಪ್ರಯತ್ನವನ್ನು ಇಲ್ಲಿಗೇ ಬಿಟ್ಟುಬಿಡಿ. ಪುತ್ತೂರಿನ ಮುಂಡೂರಿನಲ್ಲಿ ಕೃಷಿಕರೋರ್ವರು 6 ವರ್ಷದ ಅಡಿಕೆ ಗಿಡಗಳನ್ನು ಯಂತ್ರ ಬಳಸಿ ಯಶಸ್ವಿಯಾಗಿ ಶಿಫ್ಟ್‌ ಮಾಡಿದ್ದಾರೆ.

Advertisement

ಅಡಿಕೆ ಗಿಡವನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಶಿಫ್ಟ್‌ ಮಾಡುವ ಪ್ರಯತ್ನ ಇದೇ ಮೊದಲ ಬಾರಿಗೆ ಯಶಸ್ವಿಯಾಗಿ ನಡೆಯಿತು. ಇದರ ಮೊದಲು ಕೆಲ ಪ್ರಯತ್ನ ನಡೆದಿದ್ದಾವೆಯಾದರೂ ಯಶಸ್ವಿಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಪುತ್ತೂರಿನ ಮುಂಡೂರಿನ ರಾಜೇಶ್‌ ಎ. ಅವರ ಪ್ರಯತ್ನಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

ಮನೆ ನಿರ್ಮಿಸುವ ಉದ್ದೇಶದಿಂದ 40 ಅಡಿಕೆ ಗಿಡಗಳನ್ನು ಶಿಫ್ಟ್‌ ಮಾಡುವ ಅನಿವಾರ್ಯತೆ ಅವರಿಗೆ ಎದುರಾಯಿತು. ಮನೆ ಕಟ್ಟಲು ಪ್ರಶಸ್ತವಾದ ಸ್ಥಳ ಅಡಿಕೆ ತೋಟದ ನಡುವೆಯೇ ಆಗಿತ್ತು. ಈ ಹಿನ್ನೆಲೆಯಲ್ಲಿ 40 ಗಿಡಗಳನ್ನು ಕಡಿದು ತೆಗೆಯುವುದು ಸೂಕ್ತ ಎಂಬ ಅಭಿಪ್ರಾಯವೂ ವ್ಯಕ್ತವಾಗಿತ್ತು. ಆದರೆ ಸ್ವತಃ ಕೈಯಾರೇ ನೆಟ್ಟು ಬೆಳೆಸಿದ ಅಡಿಕೆ ಗಿಡಗಳನ್ನು ಕಡಿದು ಉರುಳಿಸುವುದು ಹೇಗೆ? ಫಲ ನೀಡುವ ಗಿಡಗಳು ದೈವತ್ವಕ್ಕೆ ಸಮಾನ ಎಂಬ ನಂಬಿಕೆ ನಮ್ಮಲ್ಲಿದೆ. ಆದ್ದರಿಂದ ಒಂದು ಪ್ರಯತ್ನವಾಗಿ ಅಡಿಕೆ ಗಿಡಗಳನ್ನು ಶಿಫ್ಟ್‌ ಮಾಡುವ ಕಾರ್ಯಕ್ಕೆ ಮುಂದಾದರು.

ಇದಕ್ಕೆ ಮೊದಲು ಪ್ರಾಯೋಗಿಕವಾಗಿ ಕೆಲ ಮರಗಳನ್ನು ಶಿಫ್ಟ್‌ ಮಾಡಲಾಗಿತ್ತು. ತೋಟದ ನಡುವೆ ಬೆಳೆದು ನಿಂತ ಫಸಲು ನೀಡುವ ಅಡಿಕೆ ಮರಗಳನ್ನು ಯಶಸ್ವಿಯಾಗಿ ಶಿಫ್ಟ್‌ ಮಾಡಿದ್ದರು. ಇದಕ್ಕಾಗಿ ಮರಗಳ ಸುತ್ತಲು ಕೈಯಾರೆ ಗುಂಡಿ ತೋಡಿದರು. ಅಡಿಯ ಮಣ್ಣನ್ನು ತೆಗೆದು, ಸಮೀಪದ ಇನ್ನೊಂದು ಕಡೆ ನೆಟ್ಟಿದ್ದರು. 4 ವರ್ಷದ ಹಿಂದೆ ಶಿಫ್ಟ್‌ ಮಾಡಿದ ಈ ಮರಗಳು ಈಗಲೂ ಫಸಲು ನೀಡುತ್ತವೆ. ಇದನ್ನೇ ದೊಡ್ಡ ಮಟ್ಟಿನಲ್ಲಿ ಯಶಸ್ವಿ ಮಾಡುವ ಪ್ರಯತ್ನವಾಗಿ ಯಂತ್ರವನ್ನು ಬಳಸಿಕೊಂಡಿರುವುದು ಹೊಸ ಯೋಜನೆ.

ಹೀಗೆ ನಡೆಯಿತು ಶಿಫ್ಟ್‌
6 ವರ್ಷದ ಅಡಿಕೆ ಗಿಡಗಳು ಸುಮಾರು 25 ಅಡಿಯಷ್ಟು ಎತ್ತರಕ್ಕೆ ಬೆಳೆದು ನಿಂತಿತ್ತು. ಇದಕ್ಕಾಗಿ ಮೊದಲು ಜೆಸಿಬಿ ಯನ್ನು ಬಳಸಿಕೊಂಡರು. ಆದರೆ ಇದರಿಂದ ಗಿಡ ತುಂಡರಿಯುವ ಅಪಾಯ ಎದುರಾಯಿತು. ಆದ್ದರಿಂದ ಜೆಸಿಬಿ ಬದಲು ಹಿಟಾಚಿ ಬಳಸುವ ತೀರ್ಮಾನಕ್ಕೆ ಬಂದರು. ತೆಂಗಿನಗಿಡವನ್ನು ಶಿಫ್ಟ್‌ ಮಾಡಿ ನುರಿತರಿದ್ದ ಹಿಟಾಚಿ ಚಾಲಕರ ಬಳಿ ಸಲಹೆ ಕೇಳಿದರು. ಪ್ರಯತ್ನ ಮಾಡುವ ಎಂಬ ಆಶ್ವಾಸನೆ ಸಿಕ್ಕಿತು.

Advertisement

ತೆಂಗಿನ ಮರದಂತೆ ಅಡಿಕೆ ಮರವಲ್ಲ. ತೆಂಗಿನಮರ ಗಟ್ಟಿ. ಆದ್ದರಿಂದ ಬಿದ್ದರೂ ತುಂಡಾಗದು. ಆದರೆ ಅಡಿಕೆ ಗಿಡ ತುಂಬಾ ಮೆದು. ಆದ್ದರಿಂದ ಒಂದಿನಿತು ಅಲುಗಾಡದಂತೆ, ಬೀಳದಂತೆ ಶಿಫ್ಟ್‌ ಕಾರ್ಯ ನಡೆಸಬೇಕು. ಇದಕ್ಕಾಗಿ ಅಡಿಕೆ ಗಿಡ ಸುತ್ತ ಸ್ವಲ್ಪ ಜಾಗ ಬಿಟ್ಟು 4 ಭಾಗದಿಂದಲೂ ಗುಂಡಿ ತೋಡಬೇಕು. ಬಳಿಕ ಅಡಿ ಭಾಗದಿಂದ ಮಣ್ಣನ್ನು ಸಡಿಲ ಮಾಡಬೇಕು. ಹಿಟಾಚಿಯ ಬಕೆಟ್‌ಗೆ ಮಣ್ಣು ಸಹಿತ ಮೆಲ್ಲನೆ ಗಿಡವನ್ನು ಇಡಬೇಕು. ಹಿಟಾಚಿಗೆ ಎರಡು ಕಡೆಯಿಂದ ಹಗ್ಗದಿಂದ ಬಿಗಿಯಬೇಕು. ಮೊದಲೇ ತೋಡಿಟ್ಟ ಗುಂಡಿಯಲ್ಲಿ ಗಿಡವನ್ನು ಮೆಲ್ಲಗೇ ನೆಡಬೇಕು. ಈ ಗುಂಡಿಯನ್ನು ನಿಗದಿಗಿಂತ ಸ್ವಲ್ಪ ದೊಡ್ಡದಾಗಿಯೇ ಮಾಡಬೇಕು. ಬಳಿಕ ಬುಡಕ್ಕೆ ಮಣ್ಣು ಹಾಕಿ ಮುಚ್ಚಿದರೆ, ಗಿಡ ಸೇಫ್‌.

ಯಶಸ್ವಿಯಾಗಿದೆ, ಖುಷಿ ಇದೆ
ತೋಟದಲ್ಲಿ 3 ಸಾವಿರ ಗಿಡಗಳಿವೆ. ಇದರಲ್ಲಿ 40 ಗಿಡಗಳನ್ನು ಕಡಿಯುವ ಅನಿವಾರ್ಯತೆ ಎದುರಾಯಿತು. ಕಡಿಯಲು ಮನಸ್ಸು ಬಾರದ ಕಾರಣ ಶಿಫ್ಟ್‌ ಮಾಡುವ ಸಾಹಸಕ್ಕೆ ಕೈ ಹಾಕಿದ್ದೇನೆ. ಯಶಸ್ವಿಯಾಗಿದ್ದೇನೆ. ಖುಷಿ ಆಗಿದ್ದೇನೆ.
-ರಾಜೇಶ್‌ ಎ. ಮುಂಡೂರು,
ಕೃಷಿಕ

ಪ್ರಮುಖಾಂಶ
·ಒಂದು ಗಿಡ ಶಿಫ್ಟ್‌ಗೆ ಅರ್ಧ- ಮುಕ್ಕಾಲು ಗಂಟೆ ಸಾಕು. 
·ಹೊಸ ಸ್ಥಳದಲ್ಲಿ ಗಿಡ ನೆಡುವಾಗ ಮೆದುವಾದ ಮಣ್ಣು ಉತ್ತಮ.
·ಶಿಫ್ಟ್‌ ಮಾಡುವಾಗ ಗಿಡ ಸ್ವಲ್ಪ ವಾಲಿದರೂ ತುಂಡಾಗುವ ಅಥವಾ ಸೀಳುವ ಸಾಧ್ಯತೆ.
·1 ಗಿಡ ಶಿಫ್ಟ್‌ಗೆ 1 ಸಾವಿರ ರೂ.ನಷ್ಟು ಖರ್ಚು.
·7 ವರ್ಷದವರೆಗಿನ ಗಿಡಗಳನ್ನು ಹೀಗೆ ಶಿಫ್ಟ್‌
ಮಾಡಬಹುದು. ದೊಡ್ಡ ಗಿಡ ತುಂಡಾಗಬಹುದು.

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next