Advertisement

ಅಡಿಕೆ, ರಬ್ಬರ್‌, ಗೇರು ಬಹುವಾರ್ಷಿಕ ಮಿಶ್ರ ಬೆಳೆ ಸಾಧಕಿ

09:59 AM Dec 30, 2019 | mahesh |

ಹೆಸರು: ಪ್ರಪುಲ್ಲಾ ರೈ
ಏನು ಕೃಷಿ: ಮಿಶ್ರಬೆಳೆ,
ಕೋಳಿ ಸಾಕಾಣಿಕೆ
ವಯಸ್ಸು: 77
ಕೃಷಿ ಪ್ರದೇಶ: 17ಎಕ್ರೆ

Advertisement

ನಾವು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಆದ್ದರಿಂದಲೇ ಭೂಮಿಯ ಜತೆಗೆ ಒಡನಾಡುವ ಕೃಷಿಗೆ ಮಹತ್ವದ ಸ್ಥಾನವಿದೆ. ಇದೇ ಹಿನ್ನೆಲೆಯಲ್ಲಿ ಉದಯವಾಣಿಯು ಕಿಸಾನ್‌ ದಿನಾಚರಣೆ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿ ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.

ಕಲ್ಲಡ್ಕ: ಬಂಟ್ವಾಳ ತಾಲೂಕು ಮಾಣಿ ಗ್ರಾಮದ ವಿಠuಲಕೋಡಿ ನಿವಾಸಿ ದಿ| ಎಂ. ರಾಮಕೃಷ್ಣ ರೈಯವರ ಪತ್ನಿ ಪ್ರಪುಲ್ಲಾ ರೈ ಭತ್ತ ಕೃಷಿ ಜತೆಗೆ ನಾಟಿ – ಫಾರಂ ಕೋಳಿ, ಜಾನುವಾರು ಸಾಕಣೆ, ಅಡಿಕೆ, ರಬ್ಬರ್‌, ಗೇರು ಬಹು ವಾರ್ಷಿಕ ಬೆಳೆ ಮಾಡುವ ಸಾಧಕಿಯಾಗಿ ಗುರುತಿಸಿಕೊಂಡಿದ್ದಾರೆ. ಇವರು ಕೃಷಿ ಚಟುವಟಿಕೆ ಮಾತ್ರವಲ್ಲದೆ ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ದುಡಿದಿದ್ದಾರೆ.17ಎಕ್ರೆ ಜಮೀನಿನಲ್ಲಿ ನಾಲ್ಕು ಎಕ್ರೆಯಲ್ಲಿ ಭತ್ತ, ಐದು ಎಕ್ರೆಯಲ್ಲಿ 3 ಸಾವಿರ ಅಡಿಕೆ ಗಿಡಗಳು, ಐದು ಎಕ್ರೆಯಲ್ಲಿ 650 ಗೇರು ಗಿಡಗಳು, ಮೂರು ಎಕ್ರೆ ರಬ್ಬರ್‌ ಕೃಷಿ ಹೊಂದಿದ್ದಾರೆ. ಹತ್ತಿರದ ಹಡಿಲು ಗದ್ದೆಯನ್ನೂ ಪಡೆದು ಭತ್ತದ ಕೃಷಿಯನ್ನು ಮಾಡುತ್ತಿದ್ದಾರೆ. ಭದ್ರ ಎಂ 04 ತಳಿಯ ಬೀಜವನ್ನು ಹೆಚ್ಚಾಗಿ ಬಳಸುತ್ತಾರೆ. 120 ದಿನಗಳಲ್ಲಿ ಭತ್ತದ ಫಸಲು ಕಟಾವಿಗೆ ಬರುತ್ತದೆ. ಹಾಗಾಗಿ ಭತ್ತದ ಕೃಷಿ ಲಾಭ ತರುತ್ತದೆ. ಆಧುನಿಕ ಯಂತ್ರೋಪಕರಣ ಬಳಸಿಕೊಳ್ಳಬೇಕು ಎನ್ನುತ್ತಾರೆ. ಒಟ್ಟು ಐದು ಎಕ್ರೆ ಭತ್ತದ ಕೃಷಿ ಮಾಡಲು ಸುಮಾರು 1.25 ಲಕ್ಷ ರೂ. ಖರ್ಚು ಬರುತ್ತದೆ. 1.75 ಲಕ್ಷ ರೂ. ಅಂದಾಜು ಆದಾಯ ಬರುತ್ತದೆ. ಆರ್ಥಿಕವಾಗಿ ಸುಮಾರು 50 ಸಾವಿರ ರೂ. ಲಾಭ, ಜತೆಗೆ ಬೈಹುಲ್ಲು ದೊರೆಯುತ್ತದೆ. ಮನೆಗೆ ಬೇಕಾಗುವ ಅಕ್ಕಿ, ನಾಟಿ ಕೋಳಿಗಳಿಗೆ ನಮ್ಮ ಗದ್ದೆಯಲ್ಲಿಯೇ ಬೆಳೆದ ಭತ್ತವನ್ನು ಉಪಯೋಗಿಸುತ್ತೇವೆ. ಉಳಿಕೆ ಅಕ್ಕಿಯನ್ನು ಮಾರಾಟ ಮಾಡಲಾಗುತ್ತದೆ. ಹಟ್ಟಿ ಗೊಬ್ಬರ, ಕೋಳಿ ಹಿಕ್ಕೆ ಗೊಬ್ಬರ ಬಳಸುವುದರಿಂದ ಭತ್ತದ ಕೃಷಿಯಲ್ಲಿ ನಷ್ಟ ಆಗುವುದಿಲ್ಲ. ಕೃಷಿಗೆ ಪೂರಕ ವಾಗಿ ಆರು ದನಗಳಿಂದ ಹಾಲು, ಸೆಗಣಿಯೂ ಬಳಕೆಗೆ ಸಿಗುತ್ತದೆ ಎನ್ನುತ್ತಾರೆ.

ನಾಟಿ ಕೋಳಿ
ಅವರಲ್ಲಿ ನೂರಕ್ಕೂ ಹೆಚ್ಚು ನಾಟಿ ಕೋಳಿ ಇದೆ. ಹುಂಜಕ್ಕೆ ಒಂದು ವರ್ಷ ಆದಾಗ ಕನಿಷ್ಠ ಮೂರರಿಂದ ಐದು ಸಾವಿರ ರೂ. ಬೆಲೆ ಬರುತ್ತದೆ. ಫಾರಂ ಕೋಳಿಯನ್ನೂ ಸಾಕುತ್ತಿದ್ದಾರೆ.

ವಿವಿಧ ಸೌಲಭ್ಯ
ಅವರಿಗೆ ಕೃಷಿ ಕೂಲಿ ಕಾರ್ಮಿಕರ ಸಮಸ್ಯೆ ಇಲ್ಲ. ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಅವರಿಗೆ ಮನೆ ನಿರ್ಮಿಸಿಕೊಟ್ಟಿದ್ದಾರೆ. ವರ್ಷಪೂರ್ತಿ ಇಲ್ಲಿಯೇ ದುಡಿಯುವ ಈ ಕೃಷಿ ಕಾರ್ಮಿಕರಿಗೆ ಸಂಬಳ ಮಾತ್ರವಲ್ಲದೆ, ಪಿಎಫ್‌, ಆರೋಗ್ಯ ವಿಮೆ, ವಾರ್ಷಿಕ ಬೋನಸ್‌ ನೀಡುತ್ತಾರೆ.

Advertisement

ರಬ್ಬರ್‌ ಡ್ರೈಯರ್‌
ರಬ್ಬರ್‌ ತೋಟದಲ್ಲಿ ಸಿಗುವ ರಬ್ಬರ್‌ ರಸವನ್ನು ಸ್ವತಃ ಹಾಳೆಯಾಗಿಸಿ, ಒಣಗಿಸಿ ಸಂಗ್ರ ಹಿಸುವ ಯಂತ್ರೋಪಕರಣವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಂಡಿದ್ದಾರೆ.

ಸೌರ ಶಕ್ತಿ ಶಾಖಾ ಪೆಟ್ಟಿಗೆ
ಸುಮಾರು ಹತ್ತು ವರ್ಷಗಳ ಹಿಂದೆಯೇ ಅವರು ಸೌರ ಶಕ್ತಿ ಶಾಖಾ ಪೆಟ್ಟಿಗೆಯನ್ನು ಆಧುನಿಕ ಮಾದರಿಯಲ್ಲಿ ನಿರ್ಮಿಸಿ ಅಡಿಕೆ ಒಣಗಿಸುವುದಕ್ಕಾಗಿ ಬಳಸಿಕೊಂಡಿದ್ದಾರೆ. ಅದರಲ್ಲಿ ತೆಂಗು, ಹಪ್ಪಳ, ವಿವಿಧ ಹಣ್ಣು ಹಂಪಲುಗಳನ್ನು ಒಣಗಿಸುವ ಮೂಲಕ ಸ್ವಾವಲಂಬಿಯಾಗಿದ್ದಾರೆ.

ಪ್ರಶಸ್ತಿ -ಸಮ್ಮಾನ
2017-18ನೇ ಸಾಲಿನ ಕೃಷಿ ಇಲಾಖೆಯ ತಾ| ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ, 2017-18ನೇ ಮುಂಗಾರು ಹಂಗಾಮು ಭತ್ತದ ಬೆಳೆ ಅತ್ಯಧಿಕ ಇಳುವರಿ ಪ್ರಥಮ ಪ್ರಶಸ್ತಿ, ಶಾರದಾ ಯುವ ವೇದಿಕೆ ಪ್ರಶಸ್ತಿ, ಮಾಣಿ ಯುವಕ ಮಂಡಲ ಪ್ರಶಸ್ತಿ, ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಮಾಣಿ ಪುರಸ್ಕಾರ, ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಉತ್ತಮ ಕೃಷಿಕ ಪ್ರಶಸ್ತಿ, ಜೇಸಿಐ ಮಂಗಳೂರು ಪ್ರಗತಿಪರ ಮಹಿಳಾ ಕೃಷಿಕ ಪ್ರಶಸ್ತಿ, ಬಂಟರ ಸಂಘ ಬಂಟವಾಳ ಕೃಷಿ ಕ್ಷೇತ್ರದ ಗಣನೀಯ ಸಾಧನೆ ಪುರಸ್ಕಾರವನ್ನು ಪಡೆದಿದ್ದಾರೆ.

 ವಿದ್ಯಾಭ್ಯಾಸ: 8ನೇ ತರಗತಿ
 ಐದು ಎಕ್ರೆ ಭತ್ತದ ಕೃಷಿಗೆ 1.25 ಲಕ್ಷ ರೂ. ಖರ್ಚು
 1.75 ಲಕ್ಷ ರೂ. ಅಂದಾಜು ಆದಾಯ
 50 ಸಾವಿರ ರೂ. ಲಾಭ,
 ಮೊಬೈಲ್‌: 9741452717

ಶ್ರಮದ ಫಲ
ಕೆಲಸದವರೇ ನಮ್ಮ ನಿಜವಾದ ಸಂಪತ್ತು. ಇಂದು ನಾನು ಏನು ಪ್ರಶಸ್ತಿ ಪುರಸ್ಕಾರ ಪಡೆದಿದ್ದೇನೆಯೋ ಅದು ಅವರ ದುಡಿಮೆಯ ಶ್ರಮದ ಫಲ. ನಿಜವಾದ ಗೌರವ ಅವರಿಗೇ ಸಲ್ಲಬೇಕು. ಅಳಿಯ ಸಂದೀಪ್‌ ಶೆಟ್ಟಿ, ಪುತ್ರಿ ವಿನಿತಾ ಶೆಟ್ಟಿ ಪ್ರೋತ್ಸಾಹ ಬೆಂಬಲ ನೀಡುತ್ತಿದ್ದಾರೆ. ತೋಟಕ್ಕೆ ಹನಿ ನೀರಾವರಿಯಿಂದ ನೀರು ಪೋಲು ಕಡಿಮೆ. ಅಡಿಕೆ ಗಿಡಗಳಿಗೆ ವಾರಕೊಮ್ಮೆ ಮಾತ್ರ ನೀರು ಮತ್ತು ನೈಸರ್ಗಿಕ ಗೊಬ್ಬರ ಬಳಸುವುದರಿಂದ ಹಳೆಯ ಅಡಿಕೆ, ತೆಂಗು ಮರಗಳು ಉತ್ತಮ ಇಳುವರಿ ನೀಡುತ್ತವೆ. ಗೇರು ಗಿಡಗಳ ಫಸಲು ತೆಗೆಯಲು, ಚಿಗುರು ಕಸಿಗಾಗಿ ಗುತ್ತಿಗೆ ನಿರ್ವಹಣೆಗೆ ನೀಡಿದೆ. ರೈತರು ಮಿಶ್ರ ಕೃಷಿ ಮಾಡಿದಲ್ಲಿ ನಷ್ಟದಿಂದ ಪಾರಾಗಬಹುದು.
-ಪ್ರಪುಲ್ಲಾ ರೈ, ಮಾಣಿ

ರಾಜಾ ಬಂಟ್ವಾಳ

Advertisement

Udayavani is now on Telegram. Click here to join our channel and stay updated with the latest news.

Next