Advertisement

ಅಡಕೆ ಧಾರಣೆಯ ದಿಢೀರ್ ಕುಸಿತ; ಕೇಂದ್ರದ ಗಮನಕ್ಕೆ ತರಲು ಬಿಎಸ್‌ವೈ ಭರವಸೆ

05:27 PM Feb 28, 2024 | Shreeram Nayak |

ಸಾಗರ: ದಿಢೀರನೆ ಕುಸಿದಿರುವ ಅಡಕೆ ಬೆಲೆ ಕುರಿತು ಕೇಂದ್ರ ಸರ್ಕಾರದ ಗಮನಕ್ಕೆ ತಂದು, ಕಳ್ಳಸಾಗಾಣಿಕೆ ಅಡಕೆ ಕುರಿತು ತಕ್ಷಣ ಕ್ರಮ ತೆಗೆದುಕೊಳ್ಳುವ ಹಿನ್ನೆಲೆಯಲ್ಲಿ ಸಂಬಂಧಿಸಿದವರೊಂದಿಗೆ ಮಾತುಕತೆ ನಡೆಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿಯ ಹಿರಿಯ ಧುರೀಣ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದರು.

Advertisement

ತಾಲೂಕಿನ ಅಡಕೆ ಪರಿಷ್ಕರಣ ಹಾಗೂ ಮಾರಾಟ ಸಹಕಾರ ಸಂಘದ ನಿಯೋಗ ಶಿಕಾರಿಪುರದ ಬಿಎಸ್‌ವೈ ಅವರ ಸ್ವಗೃಹದಲ್ಲಿ ಬುಧವಾರ ಸಂವಾದ ನಡೆಸಿದ ಸಂದರ್ಭದಲ್ಲಿ ನೀಡಿದ ಮನವಿ ಸ್ವೀಕರಿಸಿ ಮಾತನಾಡಿದ ಅವರು ಭರವಸೆ ನೀಡಿ, ತಕ್ಷಣವೇ ದೆಹಲಿಗೆ ತೆರಳುತ್ತಿದ್ದೇನೆ. ಅಲ್ಲಿ ಕೇಂದ್ರದ ಸಚಿವರೊಂದಿಗೆ ಮಾತನಾಡಿ ವಶಪಡಿಸಿಕೊಳ್ಳಲಾದ ಕಳ್ಳಸಾಗಾಣಿಕೆ ಅಡಕೆಯನ್ನು ಬಳಕೆಗೆ ಸಿಗದಂತೆ ಮಾಡಬೇಕು ಎಂಬ ವಾದವನ್ನು ಮನವರಿಕೆ ಮಾಡಿಕೊಡುತ್ತೇನೆ ಎಂದರು.

ಸಂಸದ ಬಿ.ವೈ. ರಾಘವೇಂದ್ರ ಹಾಗೂ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದ ನಿಯೋಗ, ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಕೆಯ ಧಾರಣೆ ಈ ತಿಂಗಳಲ್ಲಿ ಏಕಾಏಕಿ ಐದಾರು ಸಾವಿರ ರೂ.ಗಳಷ್ಟು ಕುಸಿತ ಕಂಡಿದೆ. ಇನ್ನೂ ಆರೆಂಟು ಸಾವಿರ ರೂ. ಇಳಿತವಾದರೂ ಅಚ್ಚರಿಯಿಲ್ಲ ಎಂದು ವ್ಯಾಪಾರೀ ವಲಯವೇ ಅಂದಾಜು ಮಾಡುತ್ತಿದೆ. ಇದು ಅಡಕೆ ಬೆಳೆಗಾರ ವಲಯ ಹಾಗೂ ಅವಲಂಬಿತ ಕ್ಷೇತ್ರಗಳ ಜನರನ್ನು ಆತಂಕಿತರನ್ನಾಗಿ ಮಾಡಿದೆ.

ಕ್ಷೇತ್ರತಜ್ಞರ ಅಧ್ಯಯನ ಪ್ರಕಾರ ಭಾರತಕ್ಕೆ ಬರ್ಮಾ ದೇಶದಿಂದ ಅಡಕೆ ಕಳ್ಳಸಾಗಾಣಿಕೆ ರೂಪದಲ್ಲಿ ಒಂದೇ ಒಂದು ಪೈಸೆಯ ತೆರಿಗೆಯನ್ನು ಪಾವತಿಸದೆ ಬರುತ್ತಿರುವ ವಿದ್ಯಮಾನ ಈ ಕುಸಿತಕ್ಕೆ ಮುಖ್ಯ ಕಾರಣ ಎಂದು ನಿಯೋಗ ವಿವರಿಸಿತು.

ಬಿಳಿ ಅರ್ಥಾತ್ ಚಾಲಿ ಅಡಕೆ ಅಜಮಾಸು 25ಸಾವಿರ ರೂ.ನಲ್ಲಿ ಭಾರತದ ಮಾರುಕಟ್ಟೆಗೆ ಬರ್ಮಾದಿಂದ ಬಿಕರಿಯಾಗುತ್ತಿದೆ. ಇದರಿಂದ 37 ಸಾವಿರದ ಸರಾಸರಿಯಲ್ಲಿದ್ದ ಚಾಲಿ ಅಡಕೆ ಕ್ವಿಂಟಾಲ್ ಬೆಲೆ 3೦ ಸಾವಿರದ ಅಂದಾಜಿಗೆ ಕುಸಿದಿದೆ. ಕೆಂಪಡಿಕೆಯಲ್ಲೂ ದರ ಕುಸಿತ ಕಾಣಿಸಿದ್ದು, ಈವರೆಗೆ 49-50 ಸಾವಿರ ರೂ.ಗಳ ದರ ಹೊಂದಿದ ಕೆಂಪಡಿಕೆ ಬೆಲೆ ಈಗ 42-43ಸಾವಿರಕ್ಕೆ ಬಂದಿದೆ. ಜಿಲ್ಲೆಯ ಸಾಗರ, ಹೊಸನಗರ, ತೀರ್ಥಹಳ್ಳಿ ಹಾಗೂ ಸೊರಬ ತಾಲ್ಲೂಕುಗಳ ಸಾಂಪ್ರದಾಯಿಕ ಬೆಳೆಗಾರರಲ್ಲಿ ಶೇ. 80ರಷ್ಟು ಜನ ಸಣ್ಣ ಬೆಳೆಗಾರರು. ಅವರು 10 ಗುಂಟೆ, 20 ಗುಂಟೆ, ಪರಮಾಧಿಕ ಎಂದರೆ ಒಂದೆಕರೆ ಹೊಂದಿದವರಾಗಿರುವ ಕಾರಣ ಅಡಕೆ ಬೆಲೆ ಕುಸಿತದ ನೇರ ಪರಿಣಾಮ ಅವರ ಬದುಕಿನಲ್ಲಾಗುತ್ತದೆ. ಅದರ ಜೊತೆಗೆ ಈ ಭಾಗದ ಅಷ್ಟೂ ವಲಯಗಳು ಅಡಕೆ ಬೆಲೆ ಜೊತೆ ನೇರ ಸಂಬಂಧ ಹೊಂದಿವೆ.

Advertisement

ವ್ಯಾಪಾರಿಗಳು, ನಿರ್ಮಾಣ ರಂಗ, ಸಾಮಾಜಿಕ ಚಟುವಟಿಕೆಗಳಲ್ಲೆಲ್ಲ ಅಡಕೆ ಬೆಲೆಯ ಕುಸಿತ ಪ್ರಭಾವ ಬೀರುತ್ತದೆ. ಈಗಿನ ಬೆಳವಣಿಗೆ ಈ ಭಾಗದ ಜನರ ಬದುಕನ್ನು ಅಲ್ಲೋಲಕಲ್ಲೋಲ ಮಾಡುತ್ತದೆ ಎಂದು ವಿವರಿಸಲಾಯಿತು.

ಮಲೆನಾಡು ಭಾಗದಲ್ಲಿ ಅಡಕೆ ಕೊಯ್ಲು ಡಿಸೆಂಬರ್‌ನಿಂದ ಆರಂಭವಾಗಿ ಫೆಬ್ರವರಿ ಹಂತದಲ್ಲಿ ಮುಕ್ತಾಯವಾಗಿ ಇಳುವರಿ ರೈತನ ಕೈ ಸೇರುತ್ತದೆ. ಕೃಷಿ ಸಾಲ ತೀರಿಸುವುದು, ಮದುವೆ ಮುಂಜಿ ನಿಯೋಜನೆ ಸೇರಿದಂತೆ ರೈತನ ಪ್ರತಿ ಚಟುವಟಿಕೆಗಳಿಗೆ ಈ ಕಾಲದಲ್ಲಿ ಮಾಡುವ ಅಡಕೆ ಬಿಕರಿಯಿಂದ ಸಿಗುವ ಆದಾಯ ಆಧಾರವಾಗಿರುತ್ತದೆ. ಆದರೆ ಈ ಬಾರಿ ರೈತನ ಅಡಕೆ ಮಾರುಕಟ್ಟೆಗೆ ಬರುವಂತಹ ಈ ಕಾಲಘಟ್ಟದಲ್ಲಿ ಆಗಿರುವ ತೀವ್ರ ದರ ಕುಸಿತ ತಾವು ಪ್ರೀತಿಸುವ ಅಡಕೆ ಬೆಳೆಗಾರ ಮತದಾರ ಬಾಂಧವರ ಬದುಕಲ್ಲಿ ಆಘಾತ ಉಂಟುಮಾಡಿದೆ.

ಈ ಹಿನ್ನೆಲೆಯಲ್ಲಿ ಅಡಕೆ ಕಳ್ಳಸಾಗಾಣಿಕೆ ನಡೆಯುತ್ತಿರುವುದನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರುವಂತಾಗಬೇಕು. ತೆರಿಗೆ ರಹಿತವಾಗಿ ಒಳನುಗ್ಗುತ್ತಿರುವ ಅಡಕೆಗೆ ಪ್ರತಿಬಂಧಕ ಕ್ರಮವನ್ನು ಅಧಿಕಾರಿ ವರ್ಗ ಕೈಗೊಳ್ಳುವಂತೆ ಮಾಡಬೇಕು. ಬೇನಾಮಿಯಾಗಿ ಬಂದ ಅಡಕೆ ಮಾಲನ್ನು ಬಳಕೆಯಿಂದ ಹೊರಗಿಡಬೇಕು. ಆ ಮೂಲಕ ಅಡಕೆಯ ಬೆಲೆಯ ಹಿಂಜರಿಕೆಯನ್ನು ತಡೆದು ಬೆಳೆಗಾರರಲ್ಲಿ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಬೇಕು ಎಂದು ನಿಯೋಗ ವಿನಂತಿಸಿತು.

ನಿಯೋಗದಲ್ಲಿ ಅಡಕೆ ಪರಿಷ್ಕರಣ ಹಾಗೂ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಬಿ.ಎ. ಇಂದೂಧರ, ಉಪಾಧ್ಯಕ್ಷ ಕೆ.ಎಸ್. ಸುಬ್ರಾವ್, ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಕೆ.ಎಂ.ಸೂರ್ಯನಾರಾಯಣ, ನಿರ್ದೇಶಕರಾದ ಎಚ್.ಕೆ.ರಾಘವೇಂದ್ರ, ಎಚ್.ಎಂ. ಓಮಕೇಶ, ಎಚ್.ಬಿ. ಕಲ್ಯಾಣಪ್ಪಗೌಡ, ಕೆ.ಎಸ್. ಭಾಸ್ಕರಭಟ್, ವೈ.ಎನ್. ಸುರೇಶ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next