ಬೆಂಗಳೂರು: ಅಡಿಕೆ ಕುರಿತ ಸಂಶೋಧನೆ ಹಾಗೂ ಕ್ಲಿನಿಕಲ್ ಟ್ರಯಲ್ ಕೈಗೊಳ್ಳುವ ಹೊಣೆಯನ್ನು ಪ್ರತಿಷ್ಠಿತ ಎಂ.ಎಸ್. ರಾಮಯ್ಯ ಸಂಸ್ಥೆಯ ಅನ್ವಯಿಕ ವಿಜ್ಞಾನ ವಿಭಾಗಕ್ಕೆ ವಹಿಸಲು ಸರ್ಕಾರ ತೀರ್ಮಾನಿಸಿದೆ.
ಅಡಿಕೆ ಕಾರ್ಯಪಡೆ ಅಧ್ಯಕ್ಷ ಹಾಗೂ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರನೇತೃತ್ವದಲ್ಲಿ ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿಈನಿರ್ಣಯಕೈಗೊಳ್ಳಲಾಯಿತು. ಅದರಂತೆ ಮುಂದಿನ 15 ತಿಂಗಳ ಅವಧಿಯಲ್ಲಿ ಎಂ.ಎಸ್. ರಾಮಯ್ಯ ಸಂಸ್ಥೆಯ ಅನ್ವಯಿಕ ವಿಜ್ಞಾನಗಳ ತಜ್ಞರು ವರದಿ ಸಲ್ಲಿಸಲಿದ್ದಾರೆ. ಈ ಸಂಬಂಧ ಅವರು ರಾಜ್ಯದಲ್ಲಿ ಅಡಿಕೆ ಬೆಳೆಯುವ ಎಲ್ಲ ಪ್ರದೇಶದಿಂದ ಮಾದರಿ ಸಂಗ್ರಹಿಸಲಿದ್ದಾರೆ.
ಸಂಶೋಧನಾ ಕೇಂದ್ರಕ್ಕೆ ಮನವಿ: ತೀರ್ಥಹಳ್ಳಿಯಲ್ಲಿ ಅಡಿಕೆ ಸಂಶೋಧನಾ ಕೇಂದ್ರ ಪ್ರಾರಂಭಿಸುವುದಾಗಿ ಕಳೆದ ಚುನಾವಣೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆ ನೀಡಿದ್ದರು. ಈ ಉದ್ದೇಶಕ್ಕೆ ಹತ್ತು ಕೋಟಿ ರೂ. ಒದಗಿಸುವುದಾಗಿ ಈ ಹಿಂದೆ ಕೇಂದ್ರ ಕೃಷಿ ಸಚಿವರಾಗಿದ್ದ ರಾಧಾ ಮೋಹನ್ ಸಿಂಗ್ ಕೂಡ ಹೇಳಿದ್ದರು. ಈ ಎರಡೂ ವಿಚಾರವಾಗಿ ಅಮಿತ್ ಶಾ ಅವರನ್ನು ಭೇಟಿಯಾಗಿ ಪ್ರಸ್ತಾವನೆ ಸಲ್ಲಿಸುವ ನಿರ್ಣಯಕೂಡ ಇದೇ ವೇಳೆ ಕೈಗೊಳ್ಳಲಾಯಿತು.
ಹಾಗೆಯೇ ಆಮದು ಅಡಿಕೆಯ ದರ ಕೆಜಿಗೆ 250 ರೂ.ರಿಂದ 350 ರೂ.ಗೆ ಹೆಚ್ಚಿಸಲು ಕೇಂದ್ರ ವಾಣಿಜ್ಯ ಸಚಿವರಿಗೆ ಮನವಿ ಸಲ್ಲಿಸಬೇಕು. ಸ್ವೀಟ್ ಸುಪಾರಿ ಮತ್ತುಸೆಂಟೆಡ್ ಸುಪಾರಿಗಳ ಮೇಲಿನ ಜಿಎಸ್‌ಟಿ ತೆರಿಗೆ ಪ್ರಮಾಣ ಶೇ. 18ರಿಂದ ಶೇ. 13ಕ್ಕೆ ಇಳಿಸಲು ಜಿಎಸ್‌ಟಿ ಪರಿಷತ್ತಿನ ರಾಜ್ಯದ ಪ್ರತಿನಿಧಿ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ನೀಡಬೇಕು. ಅಡಿಕೆಗೆ ಸಂಬಂಧಿಸಿದ ಸಂಶೋಧನೆ ಪೂರ್ಣಗೊಳ್ಳುವವರೆಗೆ ಸುಪ್ರೀಂಕೋರ್ಟ್ ವಿಚಾರಣೆಗೆ ತಡೆ ಕೋರಲು ನಿರ್ಧಾರ ಕೈಗೊಳ್ಳಲಾಯಿತು.
ತೋಟಗಾರಿಕೆ ಇಲಾಖೆ ನಿರ್ದೇಶಕ ಹಾಗೂ ಕಾರ್ಯಪಡೆ ಸದಸ್ಯಕಾರ್ಯದರ್ಶಿ ವೆಂಕಟೇಶ್, ಅಡಿಕೆ ಕಾರ್ಯಪಡೆ ಸದಸ್ಯರಾದ ಶಿವಕುಮಾರ್, ಸುಬ್ರಹ್ಮಣ್ಯ, ಹರಿಪ್ರಕಾಶ ಕೋಣೆಮನೆ ಮತ್ತಿತರರು ಸಭೆಯಲ್ಲಿದ್ದರು.
ಕಾರ್ಯಪಡೆ ರಚನೆ ಬಳಿಕ ನಡೆದ ಮೂರನೇ ಸಭೆ ಇದಾಗಿದ್ದು, ಎಂ.ಎಸ್. ರಾಮಯ್ಯ ಸಂಸ್ಥೆಯ ಸಂಶೋಧನಾ ತಜ್ಞರೂ ಭಾಗಿಯಾಗಿದ್ದರು. ಅಡಿಕೆಗೆ ಸಂಬಂಧಿಸಿದ ಸಂಶೋಧನಾ ಚಟುವಟಿಕೆಗೆ ಏನು ಮಾಡಬುಹುದು ಎಂಬ ಬಗ್ಗೆ ಇದೇ ಸಂದರ್ಭದಲ್ಲಿ ತಜ್ಞರು ಮಾಹಿತಿ ನೀಡಿದರು.
ಅಡಿಕೆ ಕುರಿತ ಸಂಶೋಧನೆಗೆ ಎಂ.ಎಸ್. ರಾಮಯ್ಯ ಸಂಸ್ಥೆಯ ತಜ್ಞರು ಪ್ರಸ್ತಾವನೆ ಸಲ್ಲಿಸಿದ್ದಾರೆ. 18 ತಿಂಗಳಲ್ಲಿ ವರದಿ ಬರಲಿದೆ. ಇದಕ್ಕೆ ಅಗತ್ಯವಿರುವ ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
– ಆರಗ ಜ್ಞಾನೇಂದ್ರ, ಅಡಿಕೆ ಕಾರ್ಯಪಡೆ ಅಧ್ಯಕ್ಷ