Advertisement
ಉಡುಪಿಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ವರದಿಯನ್ನು ಗಮನಿಸಿ, ಇದು ಗಂಭೀರ ವಿಷಯವಾಗಿದ್ದು, ಜಿಲ್ಲಾಧಿಕಾರಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಪರಿಶೀಲಿಸಲು ಸೂಚನೆ ನೀಡಿದ್ದಾರೆ. ಒಂದೆರಡು ದಿನಗಳಲ್ಲಿ ಕಠಿನ ಮತ್ತು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದ್ದಾರೆ ಎಂಬುದಾಗಿ ದ.ಕ. ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ. ಮೊಹಮ್ಮದ್ ಕುಂಞಿ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.
ದ.ಕ. ಜಿಲ್ಲೆಯ ವಿಟ್ಲ, ಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ಸುಳ್ಯ ಮೊದಲಾದ ಕಡೆ ಕೊಳೆರೋಗ, ಹಳದಿ ರೋಗದಿಂದ ತತ್ತರಿಸುತ್ತಿರುವ ಬೆಳೆಗಾರರಿಗೆ ಅಡಿಕೆ ಕಲಬೆರಕೆಯಿಂದ ಅಪಾಯ ಎದುರಾಗಿದ್ದು, ಕಂಗಾಲಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ವಿದೇಶೀ ಒಪ್ಪಂದಗಳನ್ನು ದುರುಪಯೋಗಪಡಿಸಿ, ದಂಧೆಕೋರರು ನೇಪಾಲ, ಶ್ರೀಲಂಕಾ, ಬಾಂಗ್ಲಾ ದೇಶದ ಮೂಲಕ ಬರ್ಮಾ, ಇಂಡೋನೇಶ್ಯಾದಲ್ಲಿ ಬೆಳೆಯುವ ಕಳಪೆ ದರ್ಜೆಯ ಅಡಿಕೆಯನ್ನು ತಂದು ಇಲ್ಲಿನ ಉತ್ತಮ ಅಡಿಕೆಯ ಜತೆಗೆ ಮಿಶ್ರ ಮಾಡುತ್ತಿದ್ದಾರೆ. ಇದರಿಂದಾಗಿ ಕರಾವಳಿಯ ಉತ್ತಮ ಅಡಿಕೆ ಬೆಳೆಗಾರರಿಗೆ ಭಾರೀ ನಷ್ಟ ಉಂಟಾಗುತ್ತಿದ್ದು, ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಮೊಹಮ್ಮದ್ ಕುಂಞಿ, ರಾಜ್ಯ ಉಪಾಧ್ಯಕ್ಷ ಕೆ. ಅಮರನಾಥ ಶೆಟ್ಟಿ, ಎಂ.ಬಿ. ಸದಾಶಿವ, ದಯಾಕರ ಆಳ್ವ ಅವರ ನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ಎಚ್.ಡಿ. ದೇವೇ ಗೌಡ ಅವರನ್ನು ಭೇಟಿ ಮಾಡಿ ಮನವಿ ಮಾಡಿದೆ.