Advertisement
ವಿಟ್ಲ: ಕೇಪು ಗ್ರಾಮದ ಅಮೈ ನಿವಾಸಿ ಮಹಾಲಿಂಗ ನಾಯ್ಕ ಅಮೈ ಅವರು ನೀರಿಗಾಗಿ ಭಗೀರಥ ಪ್ರಯತ್ನವನ್ನು ಮಾಡಿದವರು. ಕಷ್ಟದ ಜೀವನ, ದುಡಿ ದುಡಿದೇ ದೇಹದಂಡನೆ ಮಾಡಿದ ಈ ಕೃಷಿಕನ ಸ್ವಾವಲಂಬಿ ಯಶೋಗಾಥೆ ಅತ್ಯದ್ಭುತ. ರಾಜ್ಯ ಮಟ್ಟದ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತರು. ಪತಿ, ಪತ್ನಿ ಇಬ್ಬರಿಗೂ ವಿದ್ಯಾಭ್ಯಾಸವಿಲ್ಲ. ಆದರೆ ಅಡಿಕೆ, ತೆಂಗು, ಬಾಳೆ, ಕೊಕ್ಕೋ, ಕಾಳುಮೆಣಸು ಬೆಳೆಸುವ ಜತೆಗೆ ದನ, ಜೇನು ಸಾಕಣೆ ಮಾಡಿದವರು. ಈಗ ತೋಟದಲ್ಲಿ 300ಕ್ಕೂ ಅಧಿಕ ಅಡಿಕೆ, 70 ತೆಂಗು, 200 ಬುಡ ಕಾಳುಮೆಣಸು, 75 ಕೊಕ್ಕೋ ಬೆಳೆಯುತ್ತಿದ್ದಾರೆ. ಹಲಸು, ಮಾವು ಇತ್ಯಾದಿ ಫಲ ನೀಡುವ ಮರಗಳಿವೆ. ಪುತ್ರಿಯ ವಿವಾಹ ಮಾಡಿ ಕೊಟ್ಟ ಅನಂತರ ಭತ್ತದ ಬೆಳೆಯನ್ನು ನಿಲ್ಲಿಸಿದರು. ಗೇರು ಉತ್ಪಾದನೆಯನ್ನೂ ಕಡಿಮೆ ಮಾಡಿದ್ದಾರೆ. ಎರಡು ಮೂರು ದನಗಳ ಮೂಲಕ ಹೈನುಗಾರಿಕೆ ಮಾಡುತ್ತಿದ್ದಾರೆ. ತೋಟಕ್ಕೆ ಹಟ್ಟಿ ಗೊಬ್ಬರ ಬಳಸುತ್ತಾರೆ. ದೊಡ್ಡ ಪ್ರಮಾಣದಲ್ಲಿ ಸೂಟು ಮಣ್ಣು ಇಟ್ಟು, ಆ ಬೂದಿಯನ್ನು ಇಡೀ ತೋಟಕ್ಕೆ ಗೊಬ್ಬರವಾಗಿಸುತ್ತಾರೆ.
ಮಹಾಲಿಂಗ ನಾಯ್ಕ ಅವರ ಸಾಧನೆ ಬಗ್ಗೆ ಶ್ರೀಪಡ್ರೆಯವರು ಬರೆದ “ಗುಡ್ಡದ ಮೇಲಿನ ಏಕವ್ಯಕ್ತಿ ಸೈನ್ಯ’ ಎಂಬ ಕೃತಿಯನ್ನು ಧಾರವಾಡ ಕೃಷಿ ಮಾಧ್ಯಮ ಕೇಂದ್ರ ಪ್ರಕಾಶಿಸಿದೆ. ಸುರಂಗ ವೀರ
ಕಲ್ಲು, ಮುಳ್ಳು ಮತ್ತು ಮುಳಿ ಹುಲ್ಲನ್ನು ಹೊಂದಿರುವ ಆ ಗುಡ್ಡದಲ್ಲಿ ಕೃಷಿ ಕನಸಿನ ಮಾತು. ನೀರಿಗಾಗಿಯೇ ಇವರ ಅವಿರತ ಪ್ರಯತ್ನ ಸಾಗಿತ್ತು. ಮಧ್ಯಾಹ್ನ ತನಕ ಬೇರೆಯವರ ತೋಟದಲ್ಲಿ ದುಡಿದು, ಆಮೇಲೆ ಒಬ್ಬರೇ ಸುರಂಗ ತೋಡಿದರು. 25 ಮೀ. ಉದ್ದಕ್ಕೆ ಕೊರೆದರೂ ಪ್ರಥಮ ಸುರಂಗದಲ್ಲಿ ನೀರು ಸಿಗಲಿಲ್ಲ. ಪಕ್ಕದಲ್ಲಿ ಇನ್ನೊಂದು ಸುರಂಗ ನಿರ್ಮಿಸುತ್ತಿದ್ದಾಗ ಕಲ್ಲು ಅಡ್ಡ ಬಂತು. ಅಲ್ಲೇ ಕೆರೆ ತೋಡಿದರೂ ನೀರು ಸಿಗಲಿಲ್ಲ. ಕೆರೆಯ ಒಳಗೆ ನಾಲ್ಕು ದಿಕ್ಕುಗಳಿಗೂ ಸುರಂಗ ತೋಡಿದರು. ಬೆವರು ಹರಿಯಿತು, ನೀರು ಸಿಗಲೇ ಇಲ್ಲ. ಊರಿನವರೆಲ್ಲ ವ್ಯಂಗ್ಯವಾಡಿದರೂ ತಲೆ ಕೆಡಿಸಿಕೊಳ್ಳದೆ ಸ್ವಲ್ಪ ಮೇಲ್ಭಾಗದಲ್ಲಿ 130 ಮೀ. ಸುರಂಗ ಕೊರೆದಾಗ ನೀರು ಬಂತು. ಭಗೀರಥ ಪ್ರಯತ್ನ ಫಲಿಸಿತೆಂದು 40 ಸಾವಿರ ಲೀ. ಸಾಮರ್ಥ್ಯದ ಟ್ಯಾಂಕ್ ಮಾಡಿ ನೀರು ಸಂಗ್ರಹಿಸಿದರು. ಕೆಲಸಕ್ಕೆ ಹೋಗುತ್ತಿದ್ದ ಮನೆಯವರ ತೋಟದಲ್ಲಿ ಬಿದ್ದು ಹುಟ್ಟಿದ ಅಡಿಕೆ ಸಸಿಗಳನ್ನು ನೆಟ್ಟರು. ಗುರುತ್ವಾಕರ್ಷಣ ಶಕ್ತಿಯಿಂದ ಇಡೀ ತೋಟದಲ್ಲಿ ಸ್ಪ್ರಿಂಕ್ಲರ್ ನೀರಾವರಿ ಆಗುತ್ತಿದೆ.
Related Articles
Advertisement
ಪ್ರಶಸ್ತಿ -ಸಮ್ಮಾನ– 2004ರಲ್ಲಿ ವಾರಣಾಶಿ ವರ್ಷದ ಕೃಷಿಕ ಪ್ರಶಸ್ತಿ
– 2008-09ರಲ್ಲಿ ರಾಜ್ಯ ಕೃಷಿ ಪಂಡಿತ ಪ್ರಶಸ್ತಿ.
– 2014ರಲ್ಲಿ ಕೇರಳ ಮರಾಟಿ ಶಾರದೋತ್ಸವ ಸಮಿತಿ ವತಿಯಿಂದ ಸಮ್ಮಾನ
– 2016ರಲ್ಲಿ ಕರ್ನಾಟಕ ರಾಜ್ಯ ನೌಕರರ ಸಂಘದ ವತಿಯಿಂದ ಸಮ್ಮಾನ
– 2018ರಲ್ಲಿ ಬೆಂಗಳೂರು ಕರ್ನಾಟಕ ಮರಾಟಿ ಸಂಘದ ಸಮ್ಮಾನ
– 2018-19ರಲ್ಲಿ ಲಯನ್ಸ್ ಸಾಧಕ ಪುರಸ್ಕಾರ
– 2019ರಲ್ಲಿ ಪೆರ್ಲ ಶ್ರೀ ಶಾರದಾ ಮರಾಟಿ ಸಮಾಜ ಸೇವಾ ಸಂಘ, ಕೇಪು ಮೈರ ಶ್ರೀ ದುರ್ಗಾ ಮಿತ್ರ ವೃಂದ, ಪುತ್ತೂರು ಕೊಂಬೆಟ್ಟು ಮರಾಟಿ ಸಮಾಜ ಸೇವಾ ಸಂಘ, ದ.ಕ. ಜಿಲ್ಲಾ ಮರಾಟಿ ಸಂರಕ್ಷಣ ಸಮಿತಿ ಹಾಗೂ ಮಂಗಳೂರು ಪ್ರಸ್ ಕ್ಲಬ್ ವತಿಯಿಂದ ಸಮ್ಮಾನ. ಸಾಲ ಮಾಡಲಿಲ್ಲ
ಮಹಾಬಲೇಶ್ವರ ಭಟ್ಟರು ನನಗೆ ಈ ಜಾಗವನ್ನು ನೀಡಿದರು. ಒಂದು ಗುಡಿಸಲು ಮತ್ತು ಗುಡ್ಡದಲ್ಲಿ ಮುಳಿಹುಲ್ಲು ಮಾತ್ರ ಇತ್ತು. ಕೂಲಿ ಕಾರ್ಮಿಕನಾಗಿ ನನಗೆ ಸಿಗುತ್ತಿದ್ದ ವೇತನ ದಿನಕ್ಕೆ 2 ರೂ. ಅಡಿಕೆ, ತೆಂಗು ಕೊಯ್ಲು ಮಾಡಿದಲ್ಲಿ 5 ರೂ. ಸಿಗುತ್ತಿತ್ತು. ಮಧ್ಯಾಹ್ನ ತನಕ ಕೆಲಸ. ಬಳಿಕ ಮನೆಗೆ ಬಂದು ಸುರಂಗ ತೋಡುತ್ತಿದ್ದೆ. ರಾತ್ರಿ 12ರ ವರೆಗೂ ಒಬ್ಬನೇ ದುಡಿಯುತ್ತಿದ್ದೆ. ಅಗೆದು, ಮಣ್ಣನ್ನು ಬುಟ್ಟಿಗೆ ತುಂಬಿಸಿ, ಮೊಣಕಾಲಲ್ಲಿ ಹೊತ್ತು ತರುತ್ತಿದ್ದೆ. ಗುಡ್ಡವನ್ನು ಸಮತಟ್ಟಾಗಿಸಿ, ಕೆಲಸಕ್ಕೆ ಹೋಗುತ್ತಿದ್ದ ಮನೆಯಿಂದ ಕೇಳಿ ತಂದ ಅಡಿಕೆ ಸಸಿಗಳನ್ನು ನೆಡುತ್ತಿದ್ದೆ. ಈ ಜಾಗದ ಅಭಿವೃದ್ಧಿಗೆ ಯಾವುದೇ ಸಾಲ ಮಾಡಲಿಲ್ಲ. ಸರಕಾರದ ಸವಲತ್ತುಗಳನ್ನೂ ಪಡೆಯಲಿಲ್ಲ.
– ಮಹಾಲಿಂಗ ನಾಯ್ಕ ಅಮೈ ಮೊಬೈಲ್ ಸಂಖ್ಯೆ : 9449981747 -ಉದಯಶಂಕರ್ ನೀರ್ಪಾಜೆ