ಮಹಾರಾಷ್ಟ್ರ: ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ದಾದಿಯರು ಬುಧವಾರ(ಜೂನ್ 23)ದಿಂದ 48ಗಂಟೆಗಳ ಕಾಲ ಸುದೀರ್ಘ ಮುಷ್ಕರ ನಡೆಸುತ್ತಿದ್ದು, ಇದರ ಪರಿಣಾಮ ಮಹಾರಾಷ್ಟ್ರ ಸರ್ಕಾರಿ ಆಸ್ಪತ್ರೆಗಳಲ್ಲಿನ ವೈದ್ಯಕೀಯ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.
ಇದನ್ನು ಓದಿ:ಈ ಸಮಾಜಕ್ಕೆ ಒಳ್ಳೆಯದು ಬಯಸುವ ಯಾರು ಬೇಕಾದರೂ RSS ಕಚೇರಿಗೆ ಹೋಗಬಹುದು: ಈಶ್ವರಪ್ಪ
ಸೇವಾ ಬಡ್ತಿ ಹಾಗೂ ಕೋವಿಡ್ 19 ಭತ್ಯೆ ಸೇರಿದಂತೆ ಬಾಕಿ ಇರುವ ವಿವಿಧ ಬೇಡಿಕೆಗಳ ಬಗ್ಗೆ ನರ್ಸ್ ಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಮುಂಬಯಿಯ ಜೆಜೆ ಆಸ್ಪತ್ರೆಯ 1,300 ನರ್ಸ್ ಗಳು ಸೇರಿದಂತೆ 24 ಜಿಲ್ಲೆಗಳ ನರ್ಸ್ ಗಳು ಪ್ರತಿಭಟನೆಯಲ್ಲಿ ಭಾಗಿಯಾಗಿರುವುದಾಗಿ ವರದಿ ವಿವರಿಸಿದೆ.
ಒಂದು ವೇಳೆ ನಮ್ಮ ಬೇಡಿಕೆ ಈಡೇರದಿದ್ದರೆ, ನಾವು ಅನಿರ್ದಿಷ್ಟಾವಧಿವರೆಗೆ ಮುಷ್ಕರ ನಡೆಸುತ್ತೇವೆ ಎಂದು ಮಹಾರಾಷ್ಟ್ರ ನರ್ಸ್ ಅಸೋಸಿಯೇಶನ್ ಅಧ್ಯಕ್ಷ ಎಎನ್ ಐಗೆ ತಿಳಿಸಿದ್ದಾರೆ.
ಉದ್ಯೋಗ ಖಾಯಂಮಾತಿ ಸೇರಿದಂತೆ ವಿವಿಧ ಬೇಡಿಕೆಗಳ ಬಗ್ಗೆ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರಿಗೆ ಮನವಿ ನೀಡಲು ಕೆಲವು ಆರೋಗ್ಯ ಕಾರ್ಯಕರ್ತರು ತೆರಳಿದ್ದ ಸಂದರ್ಭದಲ್ಲಿ ಅವರ ಬೆಂಗಾವಲು ಪಡೆ ತಡೆದ ಒಂದು ವಾರದ ನಂತರ ಈ ಮುಷ್ಕರ ನಡೆಯುತ್ತಿರುವುದಾಗಿ ವರದಿ ತಿಳಿಸಿದೆ.
ಕೋವಿಡ್ 19 ಸೋಂಕು ಹರಡಿದ್ದ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಹಲವರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿತ್ತು. ನಂತರ ಕೆಲವರು ಗುತ್ತಿಗೆ ಒಪ್ಪಂದದ ಅವಧಿ ಮುಗಿದ ನಂತರ ಕೆಲಸ ಕಳೆದುಕೊಂಡಿದ್ದರು. ಈ ಕಾರಣದಿಂದ ಪ್ರತಿಭಟನೆಗೆ ಮುಂದಾಗಿರುವುದಾಗಿ ವರದಿ ವಿವರಿಸಿದೆ.