Advertisement

West Bengal: ಕರ್ತವ್ಯನಿರತ ನರ್ಸ್‌ ಜತೆ ಅಸಭ್ಯವಾಗಿ ವರ್ತಿಸಿ, ಕಿರುಕುಳ ನೀಡಿದ ರೋಗಿ

04:21 PM Sep 01, 2024 | Team Udayavani |

ಕೋಲ್ಕತ್ತಾ: ಕರ್ತವ್ಯನಿರತ ನರ್ಸ್‌ ಜತೆ ಅಸಭ್ಯವಾಗಿ ವರ್ತಿಸಿ, ಕಿರುಕುಳ ನೀಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಘಟನೆ ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಶನಿವಾರ(ಆ.31ರಂದು) ನಡೆದಿರುವುದು ವರದಿಯಾಗಿದೆ.

Advertisement

ತೀವ್ರ ಜ್ವರದ ಕಾರಣ ಸ್ಟ್ರೆಚರ್‌ನಲ್ಲಿ ಆರೋಗ್ಯ ಕೇಂದ್ರಕ್ಕೆ ವ್ಯಕ್ತಿಯೊಬ್ಬನನ್ನು ಕರೆತರಲಾಗಿತ್ತು. ನರ್ಸ್‌ ರೋಗಿಗೆ ಸಲೈನ್ ಡ್ರಿಪ್ ಹಾಕಲು ತೆರಳಿದಾಗ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ರೋಗಿಗೆ ಚಿಕಿತ್ಸೆ ನೀಡುತ್ತಿರುವಾಗ ನರ್ಸ್‌ ಜತೆ ರೋಗಿ ಅನುಚಿತವಾಗಿ ವರ್ತಿಸಿದ್ದಾನೆ. ರೋಗಿಯು ತನ್ನನ್ನು ಅಸಭ್ಯವಾಗಿ ಮುಟ್ಟಿದ್ದಲ್ಲದೆ ತನ್ನ ವಿರುದ್ಧ ಆಕ್ಷೇಪಾರ್ಹ ಭಾಷೆಯನ್ನೂ ಬಳಸಿದ್ದಾನೆ ಎಂದು ನರ್ಸ್ ಆರೋಪಿಸಿದ್ದಾರೆ.

ಇದನ್ನೂ ಓದಿ: West Bengal: ಸಿಟಿ ಸ್ಕ್ಯಾನ್‌ ಕೊಠಡಿಯಲ್ಲಿ 13ರ ಬಾಲಕಿಗೆ ಕಿರುಕುಳ; ಆಪರೇಟರ್‌ ಅರೆಸ್ಟ್

ಕೂಡಲೇ ಆಸ್ಪತ್ರೆಯ ಅಧಿಕಾರಿಗಳು ಪೊಲೀಸರಿಗೆ ಕರೆ ಮಾಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಇಳಂಬಜಾರ್ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಲಾಗಿದ್ದು, ಇದೀಗ ತನಿಖೆ ಈ ಬಗ್ಗೆ ನಡೆಯುತ್ತಿದೆ.

Advertisement

“ಶನಿವಾರ ರಾತ್ರಿ 8.30ರ ಸುಮಾರಿಗೆ ಚೋಟೋಚಾಕ್ ಗ್ರಾಮದಿಂದ ಬಂದ ಅಬ್ಬಾಸ್ ಉದ್ದೀನ್ ಎಂಬ ರೋಗಿಯು ನರ್ಸ್‌ ಜತೆ ಅನುಚಿತವಾಗಿ ವರ್ತಿಸಿದ್ದಾರೆ. ಕೆಲವು ಕ್ಲಿನಿಕಲ್ ಪರೀಕ್ಷೆಗಳ ನಂತರ, ಅವರಿಗೆ ಚುಚ್ಚುಮದ್ದು ಮತ್ತು ಐವಿ ದ್ರವಗಳನ್ನು ನೀಡುವಂತೆ ನಾವು ಸಲಹೆ ನೀಡಿದ್ದೇವೆ. ನರ್ಸ್ ಚಿಕಿತ್ಸೆ ನೀಡಲು ಹೋದಾಗ ಅನುಚಿತವಾಗಿ ಸ್ಪರ್ಶಿಸಿದ್ದಾರೆ” ಎಂದು ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ. ಮಸಿದುಲ್ ಹಸನ್ ಅವರು ಹೇಳಿದ್ದಾರೆ.

ತರಬೇತಿ ನಿರತ ವೈದ್ಯೆಯ ಮೇಲೆ ಅತ್ಯಚಾರ ಹಾಗೂ ಕೊಲೆ ಪ್ರಕರಣ, ಆಸ್ಪತ್ರೆಯ ಉದ್ಯೋಗಿಯೊಬ್ಬರು ಸಿಟಿ ಸ್ಕ್ಯಾನ್ ಕೊಠಡಿಯಲ್ಲಿ 13 ವರ್ಷದ ಬಾಲಕಿಗೆ ಕಿರುಕುಳ ನೀಡಿದ ಪ್ರಕರಣ ಸೇರಿ ಈ ಘಟನೆ ಕೂಡ ಪಶ್ಚಿಮ ಬಂಗಾಳದಲ್ಲೇ ನಡೆದಿದ್ದು,ಮಹಿಳೆಯರ ಸುರಕ್ಷತೆ ಬಗ್ಗೆ ಹಲವು ಪ್ರಶ್ನೆಗಳು ಮೂಡವಂತೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next