Advertisement

ಖಾಸಗಿ ಲಾಬಿಗೆ ಮಣಿಯಿತೇ ಕೆಎಸ್‌ಆರ್‌ಟಿಸಿ?

10:52 AM Oct 13, 2018 | |

ಶಿರ್ವ: ಹಿರಿಯ ನಾಗರಿಕರು, ಮಹಿಳೆಯರು, ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಾಗಿದ್ದ ನರ್ಮ್ ಬಸ್‌ ಸೇವೆಯನ್ನು ಕೆಎಸ್‌ಆರ್‌ಟಿಸಿ ಸುಳ್ಳಿನ ಕಥೆಕಟ್ಟಿ ನಿಲ್ಲಿಸಿದ್ದು, ಸರಕಾರದ ಸಾರಿಗೆ ಸಂಸ್ಥೆ ಖಾಸಗಿ ಲಾಬಿಗೆ ಮಣಿಯಿತೇ ಎಂಬ ಬಲವಾದ ಸಂಶಯ ಮೂಡಲು ಕಾರಣವಾಗಿದೆ.

Advertisement

ವಿಧಾನಸಭೆ ಚುನಾವಣೆ ಬಳಿಕ ನರ್ಮ್ ಬಸ್‌ ಓಡಾಟ ಸ್ಥಗಿತವಾಗಿದ್ದು, ಈ ವೇಳೆ ಜನಾಕ್ರೋಶ ಶಮನಕ್ಕೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಸುಳ್ಳಿನ ಕಥೆ ಕಟ್ಟಿದ್ದು ಈಗ ಬಹಿರಂಗವಾಗಿದೆ. ಖಾಸಗಿಯವರು ಕಾನೂನು ಸಮರ ನಡೆಸಿದ್ದರಿಂದ ಲೋಕಾಯುಕ್ತದಲ್ಲಿ ತಡೆಯಾಜ್ಞೆ ಇದೆ ಎಂದು ಅಧಿಕಾರಿಗಳು ಹೇಳಿದ್ದರು. ಆದರೆ ಈ ಬಗ್ಗೆ ಆರ್‌ಟಿಐ ಅಡಿ ಅರ್ಜಿ ಸಲ್ಲಿಸಿದಾಗ ಯಾವುದೇ ತಡೆಯಾಜ್ಞೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೂ ಮತ್ತೂಂದು ಕಥೆ ಕಟ್ಟಿದ ಕೆಎಸ್‌ಆರ್‌ಟಿಸಿ ಅಧಿಕಾರಿಗಳು, ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ಇದೆ ಎಂದು ಹೇಳಲು ಆರಂಭಿಸಿದರು. ಈ ಬಗ್ಗೆ ದಾಖಲೆಗಳನ್ನು ಸಂಗ್ರಹಿಸಿದಾಗಲೂ ಉಡುಪಿ ಆರ್‌ಟಿಒ ಕಚೇರಿಯಿಂದ ಉಡುಪಿ-ಮೂಡುಬೆಳ್ಳೆ – ಶಿರ್ವ ನರ್ಮ್ ಬಸ್‌ ಸಂಚಾರಕ್ಕೆ ಯಾವುದೇ ತಡೆಯಾಜ್ಞೆ ಇಲ್ಲ ಎಂದು ತಿಳಿದು ಬಂದಿದೆ.

ಮತ್ತೂಂದು ಸಬೂಬು!
ಸುಳ್ಳು ಬಹಿರಂಗವಾಗುತ್ತಿದ್ದಂತೆ ಕಲೆಕ್ಷನ್‌ ಕಡಿಮೆ ಇದ್ದುದರಿಂದ ಮತ್ತು ಖಾಸಗಿಯವರ ಒತ್ತಡದಿಂದ ಬಸ್‌ ಸೇವೆ ಸ್ಥಗಿತಗೊಳಿಸಿರುವುದಾಗಿ ಅದು ತಿಳಿಸಿದೆ. ಹಿಂದಿನ ಹೇಳಿಕೆಗಳಿಗೆ ದಾಖಲೆ ಒದಗಿಸಲು ಸಾಧ್ಯವಾಗದೆ ಮತ್ತೂಂದು ರಾಗ ಹಾಡತೊಡಗಿದೆ. 

ಪ್ರಯಾಣಿಕರ ಕೊರತೆ ಇರಲಿಲ್ಲ
ಮೂಡುಬೆಳ್ಳೆ ಹಾಗೂ ಶಿರ್ವಕ್ಕೆ ಬರುತ್ತಿದ್ದ ನರ್ಮ್ ಬಸ್‌ಗಳಲ್ಲಿ ಪ್ರಯಾಣಿಕರ ಕೊರತೆ ಇರಲಿಲ್ಲ. ಪಾಸ್‌ ಇದ್ದುದರಿಂದ ವಿದ್ಯಾರ್ಥಿಗಳಿಗೆ ಮತ್ತು ನಿತ್ಯ ಹೋಗುವವರಿಗೆ ಅನುಕೂಲವಾಗಿತ್ತು. ಆದರೂ ಕಲೆಕ್ಷನ್‌ ಇರಲಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದುದೇಕೆ ಎನ್ನುವುದು ಪ್ರಶ್ನೆಯಾಗಿಯೇ ಉಳಿದಿದೆ.

ಗ್ರಾಮ ಸಭೆ, ಸಾಮಾನ್ಯ ಸಭೆಯಲ್ಲಿ ಅನುಮೋದನೆ
ನರ್ಮ್ ಬಸ್‌ ಹಠಾತ್ತಾಗಿ ಸ್ಥಗಿತಗೊಳಿಸಿದ್ದರ ವಿರುದ್ಧ ಬೆಳ್ಳೆ ಗ್ರಾ. ಪಂ.ನ ಗ್ರಾಮ ಸಭೆ ಮತ್ತು ಸಾಮಾನ್ಯ ಸಭೆಯಲ್ಲಿ ಪ್ರಸ್ತಾವಿಸಿ ಅನುಮೋದಿಸಲಾಗಿದೆ. ಈ ಬಗ್ಗೆ ಸಂಬಂಧಪಟ್ಟ ಉನ್ನತಾಧಿಕಾರಿಗಳಿಗೆ ಪತ್ರ ಬರೆಯಲು ತೀರ್ಮಾನಿಸಲಾಗಿದೆ.

Advertisement

ಎಸಿಬಿಯಲ್ಲಿ ದೂರು ದಾಖಲು
ಯಾವುದೇ ತಡೆಯಾಜ್ಞೆ ಇಲ್ಲದಿದ್ದರೂ ಸುಳ್ಳು ಮಾಹಿತಿ ನೀಡಿ ಬಸ್‌ ಸೇವೆ ಸ್ಥಗಿತಗೊಳಿಸಿದ ಬಗ್ಗೆ ಉಡುಪಿ ಡಿಪೊ ಮ್ಯಾನೇಜರ್‌ ವಿರುದ್ಧ ಉಡುಪಿ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತರೊಬ್ಬರು ದೂರು ದಾಖಲಿಸಿದ್ದಾರೆ. ಈ ದೂರಿನ ಬಗ್ಗೆ ತತ್‌ಕ್ಷಣ ಕಾರ್ಯಪ್ರವೃತ್ತರಾದ ಎಸಿಬಿ ಪೊಲೀಸ್‌ ನಿರೀಕ್ಷಕರು, ಖುದ್ದು ಹಾಜರಾಗಿ ದಾಖಲೆಗಳನ್ನು ಒದಗಿಸುವಂತೆ ಡಿಪೊ ಮ್ಯಾನೇಜರ್‌ ಅವರಿಗೆ ತಿಳಿಸಿದ್ದಾರೆ.

ನರ್ಮ್ ಬಸ್‌ನಿಂದ ತುಂಬಾ ಅನುಕೂಲವಾಗುತ್ತಿತ್ತು. ಬಸ್‌ನಲ್ಲಿ ಪ್ರಯಾಣಿಕರ ಕೊರತೆ ಇರಲಿಲ್ಲ. ಈಗ ಬಸ್‌ಗೆ ಕಲೆಕ್ಷನ್‌ ಇಲ್ಲ ಎಂದು ಹೇಳುತ್ತಿರುವುದು ಸಂಶಯಕ್ಕೆ ಕಾರಣವಾಗಿದೆ. 
ಓರ್ವ ಮಹಿಳಾ ಪ್ರಯಾಣಿಕರು

ಖಾಸಗಿಯವರ ಕಾನೂನು ಸಮರದಿಂದ ನರ್ಮ್ ಬಸ್‌ಸಂಚಾರ ಸೇವೆ ಸ್ಥಗಿತಗೊಂಡ ಬಗ್ಗೆ ಮಾಹಿತಿ ದೊರಕಿತ್ತು. ಈ ಬಗ್ಗೆ ಜಿ.ಪಂ. ಸಾಮಾನ್ಯ ಸಭೆಯಲ್ಲಿ ನ್ಯಾಯಾಲಯದ ತಡೆಯಾಜ್ಞೆಯ ನಕಲು ಪ್ರತಿ ಹಾಗೂ ವಕೀಲರನ್ನು ನೇಮಿಸಿದ ಬಗ್ಗೆ ಮಾಹಿತಿ ಕೇಳಿದ್ದೆ, ಈವರೆಗೆ ಸಿಕ್ಕಿಲ್ಲ.
ವಿಲ್ಸನ್‌ ರೊಡ್ರಿಗಸ್‌, ಜಿ.ಪಂ. ಸದಸ್ಯ, ಶಿರ್ವ

ನರ್ಮ್ ಬಸ್‌ ಸಂಚಾರಕ್ಕೆ ಸಂಬಂಧಿಸಿ ಯಾವುದೇ ನ್ಯಾಯಾಲಯದ ತಡೆಯಾಜ್ಞೆ ಇರಲಿಲ್ಲ. ಆದಾಯ ಕಡಿಮೆ ಇದ್ದುದರಿಂದ ಉಡುಪಿ-ಮೂಡುಬೆಳ್ಳೆ-ಶಿರ್ವ ಸಹಿತ ಹಲವು ರೂಟ್‌ಗಳ ಬಸ್‌ ಸಂಚಾರ ಸ್ಥಗಿತಗೊಳಿಸಲಾಗಿದೆ.
ಜಯಶಾಂತ್‌, ವಿಭಾಗೀಯ ಸಂಚಲನಾಧಿಕಾರಿ, ಕೆಎಸ್‌ಆರ್‌ಟಿಸಿ ಮಂಗಳೂರು

ನರ್ಮ ಬಸ್‌ಗಳಿಗೆ ಸಾರಿಗೆ ಅಧಿಕಾರಿಗಳು ಖಾಸಗಿ ಬಸ್‌ಗಳ ಹಿಂದಿನ ಟೈಮಿಂಗ್ಸ್‌ ಕೊಡುವುದರಿಂದ ಸಮಸ್ಯೆಯಾಗಿದೆ. ಹೊಸ ಅರ್ಜಿಗಳು ಬಂದಲ್ಲಿ ಪರಿಶೀಲನೆ ನಡೆಸಲಾಗುವುದು.
ಉದಯ್‌ಕುಮಾರ್‌ ಶೆಟ್ಟಿ, ಕೆಎಸ್‌ಆರ್‌ಟಿಸಿ ಉಡುಪಿಯ ಡಿಪೋ ಮ್ಯಾನೇಜರ್‌

ಸತೀಶ್‌ಚಂದ್ರ ಶೆಟ್ಟಿ, ಶಿರ್ವ

Advertisement

Udayavani is now on Telegram. Click here to join our channel and stay updated with the latest news.

Next