Advertisement

ಸಾಲು-ಸಾಲು ಹೊಸ ಸಿನೆಮಾ: ಕೋಸ್ಟಲ್‌ವುಡ್‌ಗೀಗ ಪರ್ವ ಕಾಲ!

01:18 AM Jul 07, 2024 | Team Udayavani |

ಸೀಮಿತ ಭಾಷಿಕ ಪ್ರದೇಶ, ನಿಗದಿತ ಬಜೆಟನ್ನೇ ಮುಂದಿಟ್ಟುಕೊಂಡು ತಯಾರಾಗುತ್ತಿರುವ ತುಳು ಸಿನೆಮಾ ಲೋಕದಲ್ಲೀಗ ಪರ್ವ ಕಾಲ. ನಿಧಾನ ಗತಿಯಲ್ಲಿದ್ದ ಕೋಸ್ಟಲ್‌ವುಡ್‌ ಈಗ ಮತ್ತೆ ತನ್ನ ಲಯಕ್ಕೆ ಮರಳುವ ಲಕ್ಷಣ ಗಳು ಕಾಣಿಸುತ್ತಿದ್ದು ಸಾಲು ಸಾಲು ಚಿತ್ರಗಳು ತೆರೆ ಕಾಣಲು ಸಜ್ಜಾಗಿವೆ.

Advertisement

ಈ ವರ್ಷದ ಮೊದಲಾರ್ಧದಲ್ಲಿ ಮಿ.ಮದಿಮಾಯೆ, ಗಬ್ಬರ್‌ ಸಿಂಗ್‌, ಬಲಿಪೆ, ತುಡರ್‌ ಬಿಡುಗಡೆಯಾಗಿದ್ದು, ಕೋಸ್ಟಲ್‌ವುಡ್‌ನ‌ಲ್ಲಿ ಸಂಚಲನ ಮೂಡಿಸುವಲ್ಲಿ ಯಶಸ್ವಿಯಾಗಿವೆ. ವಿಭಿನ್ನ ಕಥೆಯಾಧಾರಿತ “ಧರ್ಮ ದೈವ’ ಸದ್ಯ ಥಿಯೇಟರ್‌ನಲ್ಲಿದ್ದು ಹೊಸ ಟ್ರೆಂಡ್‌ ಹುಟ್ಟುಹಾಕಿದೆ. ಮುಂದೆ- ಕೆಲವೇ ದಿನಗಳ ಅಂತರದಲ್ಲಿ ಅನಾರ್ಕಲಿ, ನಾನ್‌ವೆಜ್‌, ಗಂಟ್‌ ಕಲ್ವೆರ್‌, ಪಿದಯಿ, ಲಕ್ಕಿಬಾಬು, ಕಲ್ಜಿಗ, ತರವಾಡು ಸಿನೆಮಾಗಳು ಸರದಿಯಲ್ಲಿ ಬಿಡುಗಡೆ ಯಾಗಲಿವೆ. ಹೀಗಾಗಿ ಈ ವರ್ಷದ ಉತ್ತರಾರ್ಧದಲ್ಲಿ ತುಳು ಸಿನೆಮಾಗಳ ಲೈನ್‌ ಅಪ್‌ ಚೆನ್ನಾಗಿದೆ.

ಕೋಸ್ಟಲ್‌ನಲ್ಲಿ ಸೌಂಡ್‌ ಮಾಡಿದ “ರಾಜ್‌ ಸೌಂಡ್ಸ್‌ ಲೈಟ್ಸ್‌’ ಸಿನೆಮಾ ತಂಡದ “ಮಿಡ್ಲ್ಕ್ಲಾಸ್‌ ಫ್ಯಾಮಿಲಿ’ ದೀಪಾವಳಿಗೆ ತೆರೆ ಕಾಣಲಿದೆ. ಈಗಲೇ ಅದರ ಪ್ರಚಾರ ಆರಂಭಗೊಂಡಿರುವುದರಿಂದ ಈ ಸಿನೆಮಾದ ಬಗ್ಗೆ ಸಹಜವಾಗಿಯೇ ಜನರಲ್ಲಿ ಭಾರೀ ನಿರೀಕ್ಷೆ ಹುಟ್ಟು ಹಾಕಿದೆ. ಜತೆಗೆ “ಗಿರಿಗಿಟ್‌’, “ಸರ್ಕಸ್‌’ ಸಿನೆಮಾಗಳನ್ನು ನೀಡಿದ ರೂಪೇಶ್‌ ಶೆಟ್ಟಿ ತಂಡದ ಮತ್ತೂಂದು ಸಿನೆಮಾ 2 ವಾರದೊಳಗೆ ಟೈಟಲ್‌ ಅನೌನ್ಸ್‌ ಮಾಡಲಿದ್ದು, ಅಕ್ಟೋಬರ್‌ನಿಂದ ಶೂಟಿಂಗ್‌ ಆರಂಭಿಸಲಿದೆ. ಹೀಗಾಗಿ ಇದೂ ಕೂಡ ಕೋಸ್ಟಲ್‌ವುಡ್‌ಗೆ ಹೊಸ ಲುಕ್‌ ನೀಡುವ ಭರವಸೆಯಲ್ಲಿದೆ. ಇದರ ಜತೆಗೆ ಇನ್ನೂ ಹಲವು ಸಿನೆಮಾಗಳು ಹೊಸ ಗೆಟಪ್‌ನೊಂದಿಗೆ ತೆರೆಗೆ ಬರುವ ಕಾರಣದಿಂದ ಈ ಬಾರಿ ತುಳು ಸಿನೆಮಾ ರಂಗಕ್ಕೆ ಹೊಸ ಸ್ಪರ್ಶ ಸಿಗಲಿರುವುದಂತೂ ಸ್ಪಷ್ಟ.

“ಹಾಗೆ’ ಬಂದು “ನಿಲ್ಲಲಿ’!
ತುಳು ಸಿನೆಮಾಗಳು ಎಂದರೆ ಹಾಗೆ ಬಂದು ಹೀಗೆ ಹೋಗುವಂಥವುಗಳು ಎಂದು ಕೆಲವರು ಹೇಳುವುದೂ ಉಂಟು. ಕೆಲವು ಸಿನೆಮಾಗಳು ಕಥೆ ಯಲ್ಲಿ ವಿಫಲವಾದರೆ, ಇನ್ನೂ ಕೆಲವು ಬಾಲಿಶ ಆಗಿದ್ದೂ ಇದೆ. ಬಹುತೇಕ ಚಿತ್ರಗಳು ಏಕತಾನತೆಯಿಂದ ಕೂಡಿದ್ದು ಪ್ರೇಕ್ಷಕರಿಗೆ ಬೋರು ಹೊಡೆಸುತ್ತವೆ ಎಂಬ
ಮಾತೂ ಸಾಮಾನ್ಯ. ಇದೆಲ್ಲದರ ಜತೆಗೆ ತುಳು ಸಿನೆಮಾಗಳು ಪ್ರಚಾರ ತಂತ್ರಗಾರಿಕೆಯಲ್ಲಿ ಎಡವುತ್ತಿರುವುದ ರಿಂದಾಗಿ ಜನರು ಸಿನೆಮಾ ವೀಕ್ಷಣೆಗಾಗಿ ಟಾಕೀಸ್‌ ಕಡೆಗೆ ಮುಖ ಮಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಈಗ ಬಿಡುಗಡೆಯಾಗುತ್ತಿರುವ ಹೊಸ ಸಿನೆಮಾಗಳ ಚಿತ್ರ ತಂಡಗಳು ಜನರನ್ನು ಸೆಳೆಯುವ ನಿಟ್ಟಿನಲ್ಲಿ ಹೊಸ ತಂತ್ರ ಗಾರಿಕೆ ರೂಪಿಸಿವೆ. ಸಿನೆಮಾ ಬಿಡುಗಡೆಯ ಬಗ್ಗೆಯೇ ಸೌಂಡ್‌ ಮಾಡುವ ಮೂಲಕ ಜನರಲ್ಲಿ ಕುತೂಹಲ ಮೂಡಿಸುವ ಹೊಸ ಪ್ರಯತ್ನ ನಡೆದಿರುವುದು ತುಳು ಸಿನೆಮಾ ರಂಗ ದಲ್ಲಿನ ಹೊಸ ಬೆಳವಣಿಗೆ.

ಇಂದಿನ ಡಿಜಿಟಲ್‌ ಕಾಲದಲ್ಲಿ ಜನರು ಥಿಯೇಟರ್‌ಗೆ ಬಂದು ಸಿನೆಮಾ ನೋಡಬೇಕಾದರೆ ಆ ಸಿನೆಮಾ ಅಷ್ಟು ಗಟ್ಟಿಯಾಗಿದ್ದರೆ ಮಾತ್ರ ಅದು ಸಾಧ್ಯ. ಈ ನಿಟ್ಟಿನಲ್ಲಿ ಕೋಟ್ಯಂತರ ರೂ. ಖರ್ಚು ಮಾಡುವ ಬದಲು ಕಡಿಮೆ ಖರ್ಚಿನಲ್ಲಿ ಅತ್ಯುತ್ತಮ ಸಿನೆಮಾ ಮಾಡುವ ಬಗ್ಗೆ ಮನಸ್ಸು ಮಾಡಿದರೆ ಉತ್ತಮ. ಒಂದೇ ಟ್ರಾÂಕ್‌ನಲ್ಲಿ ಓಡುತ್ತಿರುವ ತುಳು ಸಿನೆಮಾಕ್ಕೆ ಬೇರೆ ಬೇರೆ ಕೋನಗಳನ್ನು ಕಥೆ-ಕಲಾವಿದರ ಮೂಲಕ ಪರಿಚಯಿಸುವ ಆವಶ್ಯಕತೆಯೂ ಇದೆ.

Advertisement

-ತಮ್ಮ ಲಕ್ಷ್ಮಣ, ವಿಮರ್ಶಕ

ಕೋಸ್ಟಲ್‌ವುಡ್‌ಗೆ ಹೊಸ ದೇಖೀ ನೀಡುವ ಪ್ರಯತ್ನ ನಡೆಯುತ್ತಿದೆ. ಪ್ರೇಕ್ಷಕರನ್ನು ಮತ್ತೆ ಥಿಯೇಟರ್‌ಗೆ ಕರೆತಂದು ತುಳು ಚಿತ್ರರಂಗವನ್ನು ಎದ್ದುನಿಲ್ಲಿಸುವ ಬಹುದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ಯಾಕೆಂದರೆ ಈ ಸಿನೆಮಾ ಲೋಕವನ್ನು ನಂಬಿಕೊಂಡು ಅದೆಷ್ಟೋ ಸಾವಿರ ಮಂದಿ ಪ್ರತ್ಯಕ್ಷ- ಪರೋಕ್ಷವಾಗಿ ಬದುಕುತ್ತಿದ್ದಾರೆ. ತುಳು ಸಿನೆಮಾಗಳಿಗೆ ಒಟಿಟಿ ಭಾಗ್ಯ ಇಲ್ಲ. ಟಿವಿ ರೈಟ್ಸ್‌ ಸಿಗುತ್ತಿಲ್ಲ. ಥಿಯೇಟರ್‌ ಕೂಡ ಬಂದ್‌ ಆಗುತ್ತಿದೆ. ಇಂತಹ ಸಮಸ್ಯೆಯ ಮಧ್ಯೆ ಸಿನೆಮಾವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಜತೆಯಾಗಿ ಶ್ರಮಿಸಬೇಕಿದೆ.
-ರೂಪೇಶ್‌ ಶೆಟ್ಟಿ, ನಟ, ನಿರ್ದೇಶಕ.

– ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next