Advertisement
ದಿನ ನಿತ್ಯದ ರೋಗಿಗಳಿಗೆ ಹೋಲಿಕೆ ಮಾಡಿದರೆ 2 ಪಟ್ಟು ಅಧಿಕ ಹೊರ ರೋಗಿಗಳು ಚಿಕಿತ್ಸೆ, ಔಷಧಿಗಾಗಿ ಆಸ್ಪತ್ರೆ ಮುಂದೆ ಸರತಿ ಸಾಲಿನಲ್ಲಿ ನಿಂತು ಔಷಧಿಗಳನ್ನು ಪಡೆದರು. ಆರೋಗ್ಯ ಕೇಂದ್ರದಲ್ಲಿ ಗುರುವಾರ ಸುಮಾರು 300 ರೋಗಿಗಳ ನೋಂದಣಿ ಆಗಿದ್ದು, ಬುಧವಾರ, ಮಂಗಳವಾರ, ಸೋಮವಾರದಂದು ಸರಾಸರಿ 200ಕ್ಕೂ ಹೆಚ್ಚು ಹೊರ ರೋಗಿಗಳು ಚಿಕಿತ್ಸೆ ಪಡೆದಿದ್ದಾರೆ.
ಖಾಸಗಿ ಆಸ್ಪತ್ರೆ ವೈದ್ಯರ ಮುಷ್ಕರ ಹಿನ್ನೆಲೆಯಲ್ಲಿ ಹೊರ ರೋಗಿಗಳ ಸಂಖ್ಯೆ ಇಮ್ಮಡಿಯಾಗಿದೆ. ಎಲ್ಲವನ್ನೂ ನಿಭಾಯಿಸಿ ರೋಗಿಗಳನ್ನು ಉಪಚರಿಸಿದ್ದೇವೆ. ಬುಧವಾರ ಕಡಬ ಪಿಜಕ್ಕಳ ನಿವಾಸಿ ದಿನೇಶ್ ಎಂಬವರ ಪತ್ನಿ ಜಯಶೀಲಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ, ಮಗು ಆರೋಗ್ಯವಾಗಿದ್ದಾರೆ. ಕೇಂದ್ರದಲ್ಲಿ ಸಿಬಂದಿ ಏನೇ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ, ಬಂದ ರೋಗಿಗಳಿಗೆ ಉತ್ತಮ ಸೇವೆ ನೀಡುತ್ತಿದ್ದಾರೆ ಎನ್ನುವ ತೃಪ್ತಿ ಇದೆ ಎಂದು ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ನೈನಾ ಫಾತಿಮಾ ತಿಳಿಸಿದ್ದಾರೆ. ಹೆಚ್ಚುವರಿ ವೈದ್ಯರ ನೇಮಕಕ್ಕೆ ಆಗ್ರಹ
ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರ ಈ ಭಾಗದ ಹಲವು ಗ್ರಾಮಗಳ ಆರೋಗ್ಯ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಕೇವಲ ಒಬ್ಬರು ವೈದ್ಯರು ಮತ್ತು ಕನಿಷ್ಠ ಸಂಖ್ಯೆಯಲ್ಲಿ ಆರೋಗ್ಯ ಸಹಾಯಕಿಯರು ಸೇವೆ ಸಲ್ಲಿಸುತ್ತಿದ್ದಾರೆ. ಆದುದರಿಂದ ಕನಿಷ್ಠ ಇನ್ನೂ ಇಬ್ಬರು ವೈದ್ಯರನ್ನು ತತ್‌ಕ್ಷಣ ನೇಮಕಗೊಳಿಸಬೇಕೆಂದು ಉಪ್ಪಿನಂಗಡಿ ಗ್ರಾ.ಪಂ. ಸದಸ್ಯ ಸುರೇಶ್ ಅತ್ರಮಜಲು ಆರೋಗ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ.