Advertisement

ನಂಬರ್‌ ಗೇಮ್‌!

05:11 AM Jun 22, 2020 | Lakshmi GovindaRaj |

ಗೂಗಲ್‌ ಸರ್ಚ್‌ನಲ್ಲಿ ಕಸ್ಟಮರ್‌ ಕೇರ್‌ ನಂಬರ್‌ ಹುಡುಕಿ ಹಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಏನಿದರ ವೃತ್ತಾಂತ?

Advertisement

ಈ ದಿನಗಳಲ್ಲಿ ನಾವೆಲ್ಲರೂ ಒಂದಿಲ್ಲೊಂದು ಮಾಹಿತಿಗಾಗಿ ಅಂತರ್ಜಾಲದ ಮೊರೆ ಹೋಗುತ್ತಲೇ ಇರುತ್ತೇವೆ. ಹೀಗಾಗಿ ಒಂದು ವಿಚಾರವನ್ನು ನಾವು ತಿಳಿದುಕೊಳ್ಳಬೇಕಾದ್ದು ಅಗತ್ಯ. ಇಂಟರ್ನೆಟ್‌ನಲ್ಲಿ ಸಿಗುವ ಎಲ್ಲಾ ಮಾಹಿತಿ, ನೂರಕ್ಕೆ  ನೂರು ನಿಜವಾಗಿರುವುದಿಲ್ಲ. ಅಲ್ಲಿ ತಪ್ಪು ಮಾಹಿತಿಗಳೂ ದೊಡ್ಡ ಸಂಖ್ಯೆಯಲ್ಲೇ ಇವೆ. ಹೀಗಾಗಿ, ಯಾವುದೇ ಮಾಹಿತಿಯ ಅಸಲೀಯತ್ತನ್ನು ಪರೀಕ್ಷಿಸದೆ, ಖಚಿತಪಡಿಸಿಕೊಳ್ಳದೆ ನಂಬಬಾರದು. ನಂಬಿದರೆ ಮೋಸ ಹೋಗುವುದು ಖಂಡಿತ  ಎನ್ನುವುದಕ್ಕೆ “ಕಸ್ಟಮರ್‌ ಕೇರ್‌ ನಂಬರ್‌’ ಸ್ಕ್ಯಾಮ್‌ ಸಾಕ್ಷಿ.

ನಕಲಿ ನಂಬರುಗಳಿವೆ: ಯಾವುದೇ ಉತ್ಪನ್ನ, ಅದರ ಸೇವೆ, ಅದಕ್ಕಿರುವ ವಾರಂಟಿ ಕುರಿತಾದ ಗೊಂದಲ/ ಅನುಮಾನ ಗಳನ್ನು ಪರಿಹರಿಸಿಕೊಳ್ಳಲು ಆಯಾ ಸಂಸ್ಥೆಯ ಪ್ರತಿನಿಧಿಗಳೊಂದಿಗೆ ಮಾತನಾಡಬೇಕಾಗುತ್ತದೆ. ನಮ್ಮ ಮೊಬೈಲುಗಳಲ್ಲಿ, ಟೆಲಿಕಾಂ  ಸಂಸ್ಥೆಯ ಕಸ್ಟಮರ್‌ ಕೇರ್‌ ನಂಬರ್‌ ಬಿಟ್ಟರೆ ಬೇರೆ ಯಾವ ಸಂಸ್ಥೆಯ ಕಸ್ಟಮರ್‌ ಕೇರ್‌ ನಂಬರುಗಳನ್ನೂ ನಾವು ಸೇವ್‌ ಮಾಡಿಕೊಂಡಿರುವುದಿಲ್ಲ.

ಹೀಗಾಗಿ, ಯಾವುದೇ ಕಂಪನಿಯ ನಂಬರ್‌ ಅನಿವಾರ್ಯ  ಅನ್ನಿಸಿದಾಗ ನಾವೆಲ್ಲಾ, ಅಂತರ್ಜಾಲದಲ್ಲಿ ಹುಡುಕಿ ಆ ನಂಬರನ್ನು ಪಡೆದುಕೊಳ್ಳುತ್ತೇವೆ. ಈ ಸಂದರ್ಭವನ್ನೇ ದುರುಪಯೋಗ ಪಡಿಸಿಕೊಳ್ಳುವ ಸೈಬರ್‌ ವಂಚಕರು, ನಮ್ಮ ನಡುವೆ ಇದ್ದಾರೆ. ಅವರು ಅಂತರ್ಜಾಲದಲ್ಲಿ ಕಂಪನಿಗಳ  ನಕಲಿ ನಂಬರುಗಳನ್ನು ಹರಿಬಿಟ್ಟಿರುತ್ತಾರೆ. ಸೈಬರ್‌ ವಂಚಕರು ನಕಲಿ ನಂಬರುಗಳನ್ನು ಹಲವು ಜಾಲತಾಣಗಳಲ್ಲಿ ಹರಿಬಿಟ್ಟು, ಅಮಾಯಕರಿಗಾಗಿ ಕಾಯುತ್ತಿರುತ್ತಾರೆ.

ಮೋಸ, ಒಂದು ಕ್ಷೇತ್ರಕ್ಕೆ ಸೀಮಿತವಾಗಿಲ್ಲ: ಒಂದು ಉದಾಹರಣೆ ಕೇಳಿ: ಅದೊಮ್ಮೆ ಮಹಿಳೆಯೊಬ್ಬರು ಕೊರಿಯರ್‌ ಸಂಸ್ಥೆಯ ನಂಬರನ್ನು ಗೂಗಲ್‌ನಲ್ಲಿ ಹುಡುಕಿ ಕರೆ ಮಾಡಿದರು. ಕರೆ ಸ್ವೀಕರಿಸಿದ ವ್ಯಕ್ತಿ, ಆ ಮಹಿಳೆಗೆ ಒಂದು  ಆನ್‌ಲೈನ್‌ ಲಿಂಕನ್ನು ಕಳಿಸಿದರು. ಎಲ್ಲಾ ವ್ಯವಹಾರಗಳನ್ನು ಆನ್‌ಲೈನ್‌ ಮುಖಾಂತರವೇ ಮಾಡುವುದು ಎಂದು ಸಂಸ್ಥೆ ಹೇಳಿದ್ದರಿಂದ, ಆ ಮಹಿಳೆಗೂ ಏನೂ ಅನುಮಾನ ಬರಲಿಲ್ಲ.

Advertisement

ಆ ವ್ಯಕ್ತಿ ಕಳಿಸಿದ ಲಿಂಕ್‌ನಲ್ಲಿ ಒಂದು ಫಾರ್ಮ್  ಅನ್ನು ನೀಡಲಾಗಿತ್ತು. ಅದರಲ್ಲಿ ಎಲ್ಲಾ ಮಾಹಿತಿಯನ್ನು, ಮಹಿಳೆ ತುಂಬಿದರು. ಕಡೆಯಲ್ಲಿ, ಕೊರಿಯರ್‌ ಶುಲ್ಕ ಪಾವತಿಗೆ ಸಂಬಂಧಿಸಿದಂತೆ ಕೆಲ ಬ್ಯಾಂಕ್‌ ವಿವರಗಳನ್ನೂ ಕೇಳಿದ್ದರು. ಮಹಿಳೆ ಅದನ್ನೂ ಭರ್ತಿ ಮಾಡಿ, ನಿಗದಿತ  ಶುಲ್ಕವನ್ನು ಅಂತರ್ಜಾಲದಲ್ಲೇ ಕಟ್ಟಿದರು. ಸೈಬರ್‌ ಖದೀಮರಿಗೆ ಅಷ್ಟು ಸಾಕಾಯಿತು; ಅರ್ಧ ಗಂಟೆಯ ಅಂತರದಲ್ಲಿ, ಮಹಿಳೆಯ ಬ್ಯಾಂಕ್‌ ಖಾತೆಯಲ್ಲಿದ್ದ ಹಣವಷ್ಟೂ ಖದೀಮರ ಪಾಲಾಗಿತ್ತು. ಕಸ್ಟಮರ್‌ ಕೇರ್‌ ನಂಬರ್‌ ಸ್ಕ್ಯಾಮ್‌ ಕೇವಲ ಒಂದು ಸಂಸ್ಥೆ ಅಥವಾ ಒಂದು ಕ್ಷೇತ್ರಕ್ಕೆ ಸೀಮಿತವಾಗಿಲ್ಲ.

ಹೀಗಾಗಿ, ಕಸ್ಟಮರ್‌ ಕೇರ್‌ ನಂಬರ್‌ ಹುಡುಕುವಾಗ ಜಾಗೃತರಾಗಿರಬೇಕು. ಅಷ್ಟೇ ಅಲ್ಲ, ಯಾವುದೇ ಸಂಸ್ಥೆಯ ಪ್ರತಿನಿಧಿ ಎಂದು ಹೇಳಿಕೊಂಡು ಬರುವವರನ್ನು, ಕರೆ ಮಾಡುವವರನ್ನು ಪಕ್ಕನೆ ನಂಬಿಬಿಡಬಾರದು. ಡೆಬಿಟ್‌ ಕಾರ್ಡ್‌, ಕ್ರೆಡಿಟ್‌ ಕಾರ್ಡ್‌, ಒ.ಟಿ.ಪಿ ಮಾಹಿತಿಯನ್ನು ಕೊಡಬಾರದು. ಗಮನಿಸ  ಬೇಕಾದ ಅಂಶವೆಂದರೆ, ಇಂಟರ್ನೆಟ್‌ ಬ್ಯಾಂಕಿಂಗ್‌ಗೆ ಸಂಬಂಧಿಸಿದಂತೆ  ಅಕೌಂಟ್‌ ನಂಬರ್‌,  ಅಕೌಂಟ್‌ ನಲ್ಲಿರುವ ಹೆಸರು ಮತ್ತು ಐಎಫ್ ಎಸ್‌ಸಿ ಕೋಡ್‌- ಇವಿಷ್ಟು ಮಾಹಿತಿ  ಯನ್ನು ಕೇಳಿದಲ್ಲಿ ಕೊಡಬಹುದು. ಇವನ್ನು ಕೊಡುವುದರಿಂದ ಯಾವುದೇ ಅಪಾಯವಿಲ್ಲ. ಎಟಿಎಂ ಪಿನ್‌ ಸಂಖ್ಯೆ, ಡೆಬಿಟ್‌ ಕಾರ್ಡ್‌ ಹಿಂದಿರುವ ಸಿವಿವಿ,  ಎಕ್ಸ್‌ಪೈರಿ ದಿನಾಂಕ ಮತ್ತಿತರ ಮಾಹಿತಿಯನ್ನು ನೀಡಲೇಬಾರದು.

ಎಚ್ಚರ ಗ್ರಾಹಕರೇ…: ಕಸ್ಟಮರ್‌ ಕೇರ್‌ ನಂಬರ್‌ ಹುಡುಕುವಾಗ ಕೆಲ ವಿಚಾರಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ಅಲ್ಲಿ ಸಿಕ್ಕ ನಂಬರ್‌ ಯಾವ ಜಾಲತಾಣದಲ್ಲಿದೆ ಎನ್ನುವುದನ್ನು ಗಮನಿಸಬೇಕು. ಕಸ್ಟಮರ್‌ ಕೇರ್‌ ನಂಬರನ್ನು, ಆಯಾ  ಸಂಸ್ಥೆಯ ಅಧಿಕೃತ ಜಾಲತಾಣದಲ್ಲಿ ಪಡೆದುಕೊಳ್ಳುವುದೇ ಸೂಕ್ತ. ಸೈಬರ್‌ ವಂಚಕರು ಕಂಪನಿಯ ಅಧಿಕೃತ ಜಾಲತಾಣದಂತೆಯೇ ನಕಲಿ ಜಾಲತಾಣವನ್ನೂ ಸೃಷ್ಟಿಸಿರುತ್ತಾರೆ. ಹಾಗಾಗಿ, ಜಾಲತಾಣದ ಯು. ಆರ್‌.ಎಲ್‌. ಅನ್ನು  ಗಮನಿಸಬೇಕು. ಏಕೆಂದರೆ, ಏನನ್ನು ನಕಲು ಮಾಡಿದರೂ, ಬ್ರೌಸರ್‌ನಲ್ಲಿ ಮೇಲ್ಗಡೆ ಕಾಣಿಸಿಕೊಳ್ಳುವ ಯು.ಆರ್‌.ಎಲ್‌. ಅನ್ನು ನಕಲು ಮಾಡಲು ಸಾಧ್ಯವಿಲ್ಲ. ಹೀಗಾಗಿ ಸೈಬರ್‌ ವಂಚಕರು ಅಸಲಿ ಸಂಸ್ಥೆಯ ಹೆಸರನ್ನೇ ಸ್ವಲ್ಪ ಬದಲಾಯಿಸಿಕೊಂಡಿರುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next