ಬೆಂಗಳೂರು: ನಗರದಲ್ಲಿ ಕೋವಿಡ್ ರೋಗಿಗಳ ಚಿಕಿತ್ಸೆಗೆ ಸಂಬಂಧಪಟ್ಟಂತೆ ಹಾಸಿಗೆಗಳಿಗೆ ನಂಬರ್ ಅಳವಡಿಕೆ, ರೋಗಿಗಳು ಹಾಗೂ ಕ್ವಾರೆಂಟೈನ್ ನಲ್ಲಿರುವವರ ಮೇಲೆ ನಿಗಾ ವಹಿಸಲು ಟ್ಯಾಗ್ ಕಟ್ಟುವುದು, ತ್ವರಿತವಾಗಿ ವರದಿ ಪಡೆಯುವ ಪರೀಕ್ಷಾ ವ್ಯವಸ್ಥೆ ಅಳವಡಿಕೆ ಬಗ್ಗೆಯೂ ಸರ್ಕಾರ ಗಂಭೀರ ಚಿಂತನೆ ನಡೆಸಿದ್ದು, ಹಂತ ಹಂತವಾಗಿ ಜಾರಿಗೊಳಿಸಲು ಸಜ್ಜಾಗಿದೆ.
ಈ ಕುರಿತು ಭಾನುವಾರ ಮಾಹಿತಿ ನೀಡಿದ ಸಚಿವ ಆರ್.ಅಶೋಕ್, ಬಹಳ ಮಂದಿ ರಾತ್ರಿ ಔತಣ ಕೂಟ ನಡೆಸುತ್ತಿರುವುದು ಗಮನಕ್ಕೆ ಬಂದಿದ್ದು, ಈ ರೀತಿಯ ಔತಣ ಕೂಟಗಳಿಂದ ಸೋಂಕು ಹರಡುವ ಆತಂಕವಿತ್ತು. ಆ ಹಿನ್ನೆಲೆಯಲ್ಲಿ ರಾತ್ರಿ ಕರ್ಫ್ಯೂ ಅವಧಿಯನ್ನು ರಾತ್ರಿ 8ರಿಂದಲೇ ಜಾರಿಗೊಳಿಸಲಾಗಿದೆ ಎಂದು ಹೇಳಿದರು. ವಿಕ್ಟೋರಿಯಾ ಆಸ್ಪತ್ರೆಯಲ್ಲಿನ ಕೋವಿಡ್ ರೋಗಿಗಳಿಗೆ ಮೂರು ಬಗೆಯ ಆರೋಗ್ಯವರ್ಧಕ ಆಹಾರ ಪೂರೈಸಲಾಗುತ್ತಿದೆ. ಚಪಾತಿ ತಯಾರಿಕೆಗಾಗಿ 8 ಲಕ್ಷ ರೂ. ಮೊತ್ತದ ಯಂತ್ರ ಅಳವಡಿಸಲಾಗಿದೆ. ಈ ಯಂತ್ರದಿಂದ ಗಂಟೆಗೆ 1000 ಚಪಾತಿ ಸಿದಪಡಿಸಬಹುದಾಗಿದೆ . ಮಧುಮೇಹಿಗಳಿಗೆ ಪ್ರತ್ಯೇಕ ಆರೋಗ್ಯವರ್ಧಕ ಊಟ ನೀಡಲಾಗುತ್ತಿದೆ ಎಂದು ತಿಳಿಸಿದರು.
ಹಾಸಿಗೆಗಳಿಗೆ ನಂಬರ್: ಕೋವಿಡ್ ಚಿಕಿತ್ಸಾ ಹಾಸಿಗೆಗಳಿಗೆ ಎರಡು ದಿನದಲ್ಲಿ ನಿರ್ದಿಷ್ಟ ಸಂಖ್ಯೆ ನೀಡಲಾಗುವುದು. ಇದರಿಂದ ಯಾವ ಆಸ್ಪತ್ರೆಯಲ್ಲಿ ಎಷ್ಟು ಹಾಸಿಗೆಗಳು ಖಾಲಿ ಇವೆ ಎಂಬ ಮಾಹಿತಿ ತಕ್ಷಣ ವಾರ್‌ರೂಮ್‌ಗೆ ಗೊತ್ತಾಗಲಿದೆ ಎಂದರು. ಸುಧಾರಿತ “ಲಂಗ್ ಕಂಜೆಷನ್’ ಪರೀಕ್ಷೆಯಲ್ಲಿ ಕೇವಲ ಎರಡು ನಿಮಿಷದಲ್ಲಿ ವರದಿ ಸಿಗಲಿದೆ. ಸಂಬಂಧಪಟ್ಟ ಕಂಪನಿಯವರು ಶನಿವಾರ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಪ್ರಾತ್ಯಕ್ಷಿಕೆ ನೀಡಿದ್ದಾರೆ. ಈ ಯಂತ್ರದ ಮೂಲಕ ಆಟೋ ಚಾಲಕರು, ಪೊಲೀಸರು, ಆಶಾ ಕಾರ್ಯಕರ್ತೆಯರು, ವೈದ್ಯ ಸಿಬ್ಬಂದಿಗೆ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದರು.
ಸಮುದಾಯಕ್ಕೆ ಹರಡಿದೆಯೇ? ತಜ್ಞರ ವರದಿ: ನಗರದಲ್ಲಿ ಶನಿವಾರ ಒಂದೇ ದಿನ 596 ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಒಂದೇ ದಿನ ಇಷ್ಟು ಪ್ರಕರಣಗಳು ಹೇಗೆ ದೃಢಪಟ್ಟವು, ಸೋಂಕು ಸಮುದಾಯಕ್ಕೆ ಹಬ್ಬಿತೇ ಎನ್ನುವ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ತಜ್ಞರ ಸಮಿತಿಗೆ ಸರ್ಕಾರ ಶನಿವಾರ ಸೂಚನೆ ನೀಡಿದೆ ಎಂದು ¸ ಆರ್. ಅಶೋಕ್ ಹೇಳಿದ್ದಾರೆ. ಇಂದಿರಾನಗರದ ಸಿ.ವಿ. ರಾಮನ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾತನಾಡಿದರು.
ತಜ್ಞರು ಸರ್ವೆ ಮಾಡಿ ಮೂರುದಿನಗಳಲ್ಲಿ ವರದಿ ನೀಡಲಿದ್ದಾರೆ ಎಂದರು.ಸೋಂಕಿತರಿಗೆ ಕೇವಲ ಅನ್ನ ಮತ್ತು ಸಾಂಬಾರ್ ನೀಡುತ್ತಿರುವುದನ್ನು ಬದಲಾಯಿಸುವಂತೆ ಮತ್ತು ಚಪಾತಿ, ಪಲ್ಯ, ಮೊಸರು, ತುಪ್ಪ ಹಾಗೂ ಹಣ್ಣುಗಳನ್ನೂ ನೀಡಬೇಕು. ಪ್ರತಿ ಎರಡು ವಾಡ್ ìಗಳಿಗೆ ಒಂದೊಂದು ಆಂಬ್ಯುಲೆನ್ಸ್‌ಗಳನ್ನು ಈಗಾಗಲೇ ಮೀಸಲಿಡಲಾಗಿದೆ. ಕೆಲವೇ ದಿನಗಳಲ್ಲಿ ಪ್ರತಿ ವಾರ್ಡ್‌ಗೆ ಒಂದು ಆಂಬ್ಯುಲೆನ್ಸ್ ಮೀಸಲಿಡಲಾಗುತ್ತದೆ ಎಂದರು.